Ambatanaya Mudradi: ಖ್ಯಾತ ಯಕ್ಷಗಾನ ಕಲಾವಿದ ಅಂಬಾತನಯ ಮುದ್ರಾಡಿ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ

ಶಿಕ್ಷಕ, ಹರಿದಾಸ, ತಾಳಮದ್ದಲೆ ಅರ್ಥಧಾರಿ, ವೇಷಧಾರಿ, ಸಾಹಿತಿ ಹೀಗೆ ಎಲ್ಲಾ ವಿಭಾಗದಲ್ಲಿ ವೈಶಿಷ್ಟ ಪೂರ್ಣವಾದ ಸಾಧನೆ ಮಾಡಿದ್ದ ಸಾಹಿತಿ, ಯಕ್ಷಗಾನ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಂಬಾತನಯ ಮುದ್ರಾಡಿ ಅವರು ಇಂದು ನಿಧನ ಹೊಂದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂತಾಪ ಸೂಚಿಸಿದ್ದಾರೆ.

Ambatanaya Mudradi: ಖ್ಯಾತ ಯಕ್ಷಗಾನ ಕಲಾವಿದ ಅಂಬಾತನಯ ಮುದ್ರಾಡಿ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ
ಅಂಬಾತನಯ ಮುದ್ರಾಡಿ
Follow us
Rakesh Nayak Manchi
|

Updated on:Feb 21, 2023 | 5:05 PM

ಉಡುಪಿ: ಶಿಕ್ಷಕ, ಯಕ್ಷಗಾನ ತಾಳಮದ್ದಲೆ ಅರ್ಥಧಾರಿ, ವೇಷಧಾರಿ, ಸಾಹಿತಿ ಹೀಗೆ ಎಲ್ಲಾ ವಿಭಾಗದಲ್ಲಿ ವೈಶಿಷ್ಟ ಸಾಧನೆ ಮಾಡಿದ್ದ ಸಾಹಿತಿ, ಯಕ್ಷಗಾನ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಂಬಾತನಯ ಮುದ್ರಾಡಿ (88) (Amba Tanaya Mudradi) ಅವರು ಇಂದು ನಿಧನ ಹೊಂದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂತಾಪ ಸೂಚಿಸಿದ್ದಾರೆ. “ಹಿರಿಯ ಸಾಹಿತಿ, ಯಕ್ಷಗಾನ (Yakshagana) ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಂಬಾತನಯ ಮುದ್ರಾಡಿ ಅವರ ನಿಧನದಿಂದ ಅತೀವ ಬೇಸರವಾಗಿದೆ. ಅವರ ಅಗಲಿಕೆ ಕರ್ನಾಟಕದ ಕಲೆ ಹಾಗೂ ಸಾಂಸ್ಕೃತಿಕ ರಂಗಕ್ಕೆ ದೊಡ್ಡ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ” ಎಂದು ಸಿಎಂ ಬೊಮ್ಮಾಯಿ ಸಂತಾಪ ಸೂಚಿಸಿದರು.

1935ರ ಜೂನ್ 4ರಂದು ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮುದ್ರಾಡಿಯಲ್ಲಿ ಅಂಬಾತನಯ ಮುದ್ರಾಡಿ ಅವರು ಜನಿಸಿದರು. ಇವರ ಮೂಲ ಹೆಸರು ಕೇಶವ ಶೆಟ್ಟಿಗಾರ್. ಎಂಟನೆಯ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದಿದ್ದ ಇವರು ಯಕ್ಷಗಾನ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅತೀವ ಒಲವನ್ನು ಹೊಂದಿದ್ದರು. ಅದರಂತೆ ಶಿಕ್ಷಕರಾಗಿದ್ದುಕೊಂಡೇ ಹಲವು ಯಕ್ಷಗಾನ ಪ್ರಸಂಗಗಳಲ್ಲಿ ಪಾತ್ರವಹಿಸಿ ಜನಮನದಲ್ಲಿ ನೆಲೆಸಿದ್ದರು.

ಹತ್ತಾರು ಮೌಲಿಕ ಗ್ರಂಥಗಳನ್ನು ಸಂಪಾದನೆ ಮಾಡಿ ಸಾಹಿತ್ಯ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮದೇ ಆದ ಛಾಫು ಮೂಡಿಸಿದ್ದ ಅಂಬಾತನಯ ಮುದ್ರಾಡಿ ಅವರು ಪತ್ನಿ, ಮೂವರು ಪುತ್ರರು, ಐವರು ಪುತ್ರಿಯರನ್ನು ಹಾಗೂ ಅಪಾರ ಶಿಷ್ಯ ವೃಂದವನ್ನು ಅಗಲಿದ್ದಾರೆ. ಇವರು ಮಾಡಿದ ಅಪಾರ ಸಾಧನೆಗಳು ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಸೇರಿ ಮುಂತಾದ ಶ್ರೇಷ್ಠ ಗೌರವಗಳು ಅವರ ಮುಡಿಗೇರಿದ್ದವು.

ಇದನ್ನೂ ಓದಿ: ತೆಂಕುತಿಟ್ಟು ಯಕ್ಷರಂಗದ ಭೀಷ್ಮ ಬಲಿಪ ನಾರಾಯಣ ಭಾಗವತರು ಇನ್ನಿಲ್ಲ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಮುದ್ರಾಡಿಯವರು ಕಳೆದ ವಾರ ಉಡುಪಿಯಲ್ಲಿ ನಡೆದಿದ್ದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಸಮ್ಮೇಳನದ ಅಧ್ಯಕ್ಷರೊಂದಿಗೆ ಸಂವಾದದಲ್ಲಿ ಕೊನೆಯದಾಗಿ ಪಾಲ್ಗೊಂಡಿದ್ದರು. ಇನ್ನು, ಮುದ್ರಾಡಿ ಅವರ ಅಗಲಿಕೆಗೆ ಯಕ್ಷ ರಂಗ ಹಾಗೂ ಸಾಹಿತ್ಯ ಲೋಕ ಕಂಬಣಿ ಮುಡಿಯುತ್ತಿದೆ. ಮುದ್ರಾಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಉಡುಪಿಯ ಕಲಾ ಪೋಷಕ ಸುಬ್ರಹ್ಮಣ್ಯ ಬಾಸ್ರಿ ಕೆ ಎಸ್ ಅವರು, ಮುದ್ರಾಡಿ ಅವರು ತಮ್ಮ ಸಾಧನೆಗಳ ಮೂಲಕ ಇತರರಿಗೆ ಆದರ್ಶವಾಗಿ ನಿಂತಿದ್ದರು. ಇವರ ಆದರ್ಶಗಳು ಎಲ್ಲರ ಬದುಕಿಗೆ ಸ್ಫೂರ್ತಿ ತುಂಬಲಿ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:02 pm, Tue, 21 February 23