ಉಡುಪಿ: ಜಿಲ್ಲೆಯ ಬ್ರಹ್ಮಾವರ ಎಂಬಲ್ಲಿ ನಡೆದಿದ್ದ ವಿಶಾಲಾ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಶಾಲಾ ಪತಿ ರಾಮಕೃಷ್ಣರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಮಕೃಷ್ಣ ಅವರನ್ನು 4 ದಿನ ಪೊಲೀಸರ ವಶಕ್ಕೆ ನೀಡಲಾಗಿದೆ. ಆರೋಪಿ ಪತಿಯನ್ನು ಉಡುಪಿ ಕೋರ್ಟ್ಗೆ ಪೊಲೀಸರು ಹಾಜರುಪಡಿಸಿದ್ದರು. ಪತ್ನಿ ವಿಶಾಲಾ ಗಾಣಿಗರನ್ನು ಸುಪಾರಿ ಹಂತಕರ ಮೂಲಕ ಹತ್ಯೆಮಾಡಿಸಿದ್ದ ಆರೋಪ ರಾಮಕೃಷ್ಣ ಮೇಲಿದೆ. ಮತ್ತೋರ್ವ ಆರೋಪಿ ಉತ್ತರ ಪ್ರದೇಶದಲ್ಲಿ ತಲೆ ಮರೆಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರ ಶೋಧ ಮುಂದುವರಿದಿದೆ. ಈ ಮಧ್ಯೆ ಹೆಚ್ಚಿನ ತನಿಖೆಗಾಗಿ ರಾಮಕೃಷ್ಣ ಪೊಲೀಸರ ವಶಕ್ಕೆ ನೀಡಲಾಗಿದೆ.
ದುಬೈನಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿರುವ ತನ್ನೂರಿಗೆ ಮರಳಿದ್ದ 35 ವರ್ಷದ ವಿಶಾಲಾ ಗಾಣಿಗ (Vishala Ganiga) ಎಂಬ ಮಹಿಳೆಯನ್ನು ಕಳೆದ ವಾರ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಅಪಾರ್ಟ್ಮೆಂಟ್ನಲ್ಲಿ ಒಂಟಿಯಾಗಿದ್ದ ವಿಶಾಲಾ ಅವರ ಕತ್ತಿಗೆ ವೈರ್ನಿಂದ ಬಿಗಿದು ಕೊಲೆ ಮಾಡಲಾಗಿದ್ದು, ಮನೆಯಲ್ಲಿದ್ದ ಎಲ್ಲ ಆಭರಣಗಳೂ ನಾಪತ್ತೆಯಾಗಿತ್ತು. ಬ್ರಹ್ಮಾವರದ (Brahmavar) ಕುಮ್ರಗೋಡು ಎಂಬಲ್ಲಿ ಮಧ್ಯಾಹ್ನದ ಹೊತ್ತಿನಲ್ಲೇ ನಡೆದ ಈ ಕೊಲೆಗೆ ಇಡೀ ಕರಾವಳಿಯೇ ಬೆಚ್ಚಿಬಿದ್ದಿತ್ತು. ಈ ಕೊಲೆ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ವಿಶಾಲಾ ಗಾಣಿಗ ಅವರ ಗಂಡ ರಾಮಕೃಷ್ಣ ಗಾಣಿಗ ದುಬೈನಲ್ಲಿದ್ದುಕೊಂಡೇ ತನ್ನ ಹೆಂಡತಿಯ ಕೊಲೆಗೆ ಸುಪಾರಿ ನೀಡಿದ್ದನು ಎನ್ನಲಾಗಿದೆ.
ಹಂತಕರಿಗೆ ಸುಪಾರಿ ನೀಡಿದ್ದ ರಾಮಕೃಷ್ಣ ದುಬೈನಿಂದ ಬ್ರಹ್ಮಾವರಕ್ಕೆ ಬಂದಿದ್ದ ತನ್ನ ಹೆಂಡತಿಯನ್ನು ಕೊಲೆ ಮಾಡಲು ಸೂಚಿಸಿದ್ದ ಎಂಬ ಅನುಮಾನ ಪೊಲೀಸರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ದುಬೈನಲ್ಲಿರುವ ರಾಮಕೃಷ್ಣ ಗಾಣಿಗ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ಲಭ್ಯವಾಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ವಿಶಾಲಾ ಗಾಣಿಗ ಇದ್ದ ಫ್ಲಾಟ್ಗೆ ಬಂದಿದ್ದ ಹಂತಕರು ಆಕೆಯನ್ನು ಕೊಲೆ ಮಾಡಿ ಹೋಗಿದ್ದಾರೆ. ವಿಶಾಲಾ ಅವರ ಕೊಲೆಯಾದಾಗ ಅವರ ಮನೆಯ ಟೀಪಾಯಿ ಮೇಲೆ ಎರಡು ಟೀ ಕಪ್ ಇದ್ದುದು ಇನ್ನಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಯಾರೋ ಪರಿಚಿತರು ಮನೆಗೆ ಬಂದು, ಆಕೆಯೊಂದಿಗೆ ಮಾತುಕತೆ ನಡೆಸಿ, ನಂತರ ಕೊಲೆ ಮಾಡಿರಬಹುದು ಎನ್ನಲಾಗಿತ್ತು. ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದರೂ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ. ಆದರೆ, ಆಕೆಯ ಗಂಡನ ಮೇಲೆ ಅನುಮಾನ ಬಂದಿದ್ದರಿಂದ ಪೊಲೀಸರು ಆ ನಿಟ್ಟಿನಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Udupi Murder: ಬ್ರಹ್ಮಾವರದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು; ದುಬೈನಿಂದಲೇ ಸುಪಾರಿ ಕೊಟ್ಟನಾ ಗಂಡ?