ಉಡುಪಿ: ನಾಡಗೀತೆಯನ್ನು ಸೀಮಿತಗೊಳಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಕನ್ನಡ ಸಂಸ್ಕೃತಿ ಮತ್ತು ಇಂಧನ ಖಾತೆ ಸಚಿವರಾದ ಸುನಿಲ್ ಕುಮಾರ್, ನಾಡಗೀತೆಯನ್ನು ಎಷ್ಟು ನಿಮಿಷಕ್ಕೆ ಸೀಮಿತಗೊಳಿಸಬೇಕು? ನಾಡಗೀತೆಯ ಸಂಗೀತ ಯಾವ ರೀತಿ ಇರಬೇಕು? ಎಂದು ಚರ್ಚಿಸುತ್ತೇವೆ. ಕನ್ನಡ ಭುವನೇಶ್ವರಿಯ ಫೋಟೋ ಯಾವ ರೀತಿ ಇರಬೇಕು ಎಂಬ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಇದಕ್ಕೊಂದು ತಾರ್ಕಿಕ ಅಂತ್ಯ ಮಾಡುತ್ತೇವೆ ಎಂದು ಹೇಳಿದ್ದಾರೆ.
ತಾಯಿ ಭುವನೇಶ್ವರಿ ಫೋಟೋ ರಾಜ್ಯಾದ್ಯಂತ ಒಂದೇ ರೀತಿ ಇರಬೇಕು. ಒಂದೊಂದು ಊರಲ್ಲಿ ಒಂದೊಂದು ರೀತಿ ಇದೆ. ಆದಷ್ಟು ಬೇಗ ಈ ವಿಚಾರ ಇತ್ಯರ್ಥಗೊಳಿಸಲಿದ್ದೇವೆ ಎಂದು ಕನ್ನಡ ಸಂಸ್ಕೃತಿ ಮತ್ತು ಇಂಧನ ಖಾತೆ ಸಚಿವರಾದ ಸುನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಬಳಿಕ ವಿದ್ಯುತ್ ಬಿಲ್ ಪ್ರಿಪೇಯ್ಡ್ ಮೀಟರ್ ವಿಚಾರ ಮಾತನಾಡಿದ ಅವರು, ಈ ಬಗ್ಗೆ ಇಲಾಖೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆಯಷ್ಟೇ. ಸ್ಮಾರ್ಟ್ ಮೀಟರ್ ಮತ್ತು ಪ್ರಿಪೇಡ್ ಮೀಟರ್ ಬಗ್ಗೆ ಚರ್ಚೆ ನಡೆಯುತ್ತಿದೆ. ಸಾಧಕ ಭಾದಕ ಯೋಚಿಸಿ ನಿರ್ಧರಿಸುತ್ತೇನೆ ಎಂದು ತಿಳಿಸಿದರು.
ಬಳಿಕ ವಿವಿಧ ಜಯಂತಿಗಳ ಆಚರಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವರಾದ ಸುನಿಲ್ ಕುಮಾರ್ ಮಾತನಾಡಿದ್ದು, ಶುಕ್ರವಾರ ಕನ್ನಡ ಸಂಸ್ಕೃತಿ ಇಲಾಖೆಯ ಸಭೆ ಇದೆ. ವಿವಿಧ ಜಯಂತಿಗಳನ್ನು ಸೀಮಿತಗೊಳಿಸುವ ಬಗ್ಗೆ ವಿಸ್ತೃತ ಚರ್ಚೆ ಮಾಡುತ್ತೇವೆ. ಕನ್ನಡ ಸಂಸ್ಕೃತಿ, ಯುವಜನಸೇವೆ ಮತ್ತು ಶಿಕ್ಷಣ ಇಲಾಖೆ ಒಟ್ಟಾಗಿ ಜಯಂತಿ ಆಚರಣೆ ಮಾಡಬಹುದು ಎಂದು ಹೇಳಿದರು.
ಹೆಚ್ಚು ಅರ್ಥಪೂರ್ಣ ಜಯಂತಿಗಳ ಆಚರಣೆಗೆ ಒತ್ತು ನೀಡಿ, ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಬೇಕು. ನಾಡಿನಲ್ಲಿ ದೇಶಭಕ್ತಿಯ ವಾತಾವರಣ ನಿರ್ಮಿಸಲು ಕಾರ್ಯಕ್ರಮ ರೂಪಿಸುತ್ತೇವೆ. ಅಧಿವೇಶನದ ಒಳಗಾಗಿ ಕಾರ್ಯಕ್ರಮದ ರೂಪುರೇಷೆ ಅಂತಿಮ ಸ್ವರೂಪ ಪಡೆಯಲಿದೆ ಎಂದು ಸಚಿವರಾದ ಸುನೀಲ್ ಕುಮಾರ್ ಹೇಳಿಕೆ ನೀಡಿದ್ದಾರೆ.
ನಾರಾಯಣಗುರುಗಳ ಹೆಸರಲ್ಲಿ ನಿಗಮ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಇಂದು ಶ್ರೀ ನಾರಾಯಣ ಗುರುಗಳ ಜಯಂತಿ. ನಾರಾಯಣ ಗುರುಗಳ ಹೆಸರಲ್ಲಿ ನಿಗಮ ವಿಚಾರದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ನಿಗಮದ ಸ್ವರೂಪ ಶೀಘ್ರ ಚರ್ಚಿಸುತ್ತೇವೆ. ಆ ಮೂಲಕ ನಿಗಮದ ವ್ಯಾಪ್ತಿ, ಅನುದಾನ ವಿಚಾರ ನಿರ್ಧರಿಸುತ್ತೇವೆ. ಶೀಘ್ರ ನಿಗಮ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಬಳಿಕ ತಾಲಿಬಾನ್ ಸಂಸ್ಕೃತಿ ಮತ್ತು ಬಿಜೆಪಿ ಸಂಸ್ಕೃತಿಗೆ ವ್ಯತ್ಯಾಸವಿಲ್ಲ ಎಂದು ಕಾಂಗ್ರೆಸ್ ಮಾಡಿದ ಟ್ವೀಟ್ಗೆ ಸಚಿವರಾದ ಸುನಿಲ್ ಕುಮಾರ್ ಉತ್ತರ ನೀಡಿದ್ದು, ಜನಾಶೀರ್ವಾದ ಯಾತ್ರೆಗೆ ಕಾಂಗ್ರೆಸ್ ಟೀಕೆ ಮಾಡಿದೆ. ಆಶೀರ್ವಾದ ಕಳೆದುಕೊಂಡವರು ಈ ರೀತಿ ಮಾತನಾಡುತ್ತಾರೆ. ಜನ ಕಳೆದ ಹತ್ತು ವರ್ಷಗಳಿಂದ ನಮಗೆ ನಿರಂತರ ಆಶೀರ್ವಾದ ಮಾಡಿದ್ದಾರೆ. ಜನರ ಭಾವನೆಗಳಿಂದ ದೂರಾದವರು ಈ ರೀತಿ ಟೀಕಿಸುತ್ತಾರೆ. ಸದ್ಯ ಅಘಾನಿಸ್ತಾನದ ಸ್ಥಿತಿ ನೋಡಿದರೆ ಗೊತ್ತಾಗುತ್ತದೆ. ನರೇಂದ್ರ ಮೋದಿ ಈ ದೇಶದ ನೇತೃತ್ವ ವಹಿಸದಿದ್ದರೆ ಏನಾಗುತ್ತಿತ್ತು? ಕಾಂಗ್ರೆಸ್ ನೇತೃತ್ವದ ಇದ್ದಿದ್ದರೆ ದೇಶದ ಸ್ಥಿತಿ ಹೇಗಿರುತ್ತಿತ್ತು ? ಈ ಬಗ್ಗೆ ಜನ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ಗೆ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ:
Sunil Kumar: ಆರ್ಎಸ್ಎಸ್, ಎಬಿವಿಪಿ ಹಿನ್ನೆಲೆಯುಳ್ಳ ಸುನಿಲ್ ಕುಮಾರ್ಗೆ ಲಭಿಸಿತು ಇಂಧನ ಖಾತೆ
ಕನ್ನಡ ಪುಸ್ತಕ ಕೊಡಿ ಎಂದ ನೂತನ ಸಚಿವ ಸುನಿಲ್ ಕುಮಾರ್ ಈಗ ಕಲಾವಿದರೊಂದಿಗೆ ಕಾಫಿ ಕುಡಿಯಲಿದ್ದಾರೆ!
Published On - 1:20 pm, Mon, 23 August 21