10 ವರ್ಷಗಳಿಂದ ಮತ ಹಾಕಿದ ನಮಗಾಗಿ ನೀವು ಮಾಡಿದ್ದೇನು? ಶೋಭಾ ಕರಂದ್ಲಾಜೆಗೆ ಮೀನುಗಾರರು ಕ್ಲಾಸ್

| Updated By: ರಮೇಶ್ ಬಿ. ಜವಳಗೇರಾ

Updated on: Feb 17, 2024 | 8:58 PM

ಮೀನುಗಾರರ ಒಕ್ಕೂಟದ ಮುಖಂಡರು ಸಚಿವ ಶೋಭಾ ಕರಂದ್ಲಾಜೆಗೆ ಕ್ಲಾಸ್ ತೆಗೆದುಕೊಂಡಿದ್ದು, ‘ನಮಗಾಗಿ ನೀವು ಏನು ಮಾಡಿದ್ದೀರಿ?’ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

10 ವರ್ಷಗಳಿಂದ ಮತ ಹಾಕಿದ ನಮಗಾಗಿ ನೀವು ಮಾಡಿದ್ದೇನು? ಶೋಭಾ ಕರಂದ್ಲಾಜೆಗೆ ಮೀನುಗಾರರು ಕ್ಲಾಸ್
Follow us on

ಉಡುಪಿ, (ಫೆಬ್ರವರಿ 17): ಮಲ್ಪೆಯಿಂದ ಉಡುಪಿವರೆಗಿನ ಹೆದ್ದಾರಿ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (shobha karandlaje ) ಅವರನ್ನು ಮೀನುಗಾರರು ತರಾಟೆಗೆ ತೆದುಕೊಂಡಿದ್ದಾರೆ. ಉಡುಪಿಯ (Udupi) ಪ್ರವಾಸಿ ಮಂದಿರದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳ ಸಭೆಯಲ್ಲಿ ಮೀನುಗಾರರ ಸಂಘದ ಮುಖಂಡ ಕಿಶೋರ್ ಸುವರ್ಣ ಅವರು ಶೋಭಾ ಕರಂದ್ಲಾಜೆ ಬಿಮುಂದೆ ವಿಷಯ ಪ್ರಸ್ತಾಪಿಸಿದ್ದು, ಮೂರೂವರೆ ಕಿಲೋಮೀಟರ್ ಉದ್ದದ ಹೆದ್ದಾರಿ ನಿರ್ಮಾಣ ವಿಳಂಬದ ಬಗ್ಗೆ ಸಂಘದ ಸದಸ್ಯರು ಸಚಿವರನ್ನು ಪ್ರಶ್ನಿಸಿದ್ದಾರೆ.

ಕೋಟ್ಯಂತರ ರೂಪಾಯಿ ಆದಾಯ ಬರುವ ಮಲ್ಪೆ ಬಂದರಿನ ಬಗ್ಗೆ ನಿಮಗೆ ನಿರ್ಲಕ್ಷ್ಯ ಏಕೆ? ಮಲ್ಪೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೈಜ್ಞಾನಿಕ ರೀತಿಯಲ್ಲಿಲ್ಲ. ರಸ್ತೆಯ ಸರ್ವೆ ಮತ್ತು ಪರಿಹಾರದ ಬಗ್ಗೆ ಜನರಿಗೆ ಸಾಕಷ್ಟು ಗೊಂದಲಗಳಿವೆ. ಇದರ ವಿರುದ್ಧ ಹಲವು ಮಂದಿ ಕೋರ್ಟ್‌ಗೆ ಹೋಗಿದ್ದಾರೆ. ಇಲ್ಲಿ ಪರಿಹಾರ ಕಾರ್ಯ ಕೂಡ ವೈಜ್ಞಾನಿಕವಾಗಿ ನಡೆದಿಲ್ಲ. ಹಣಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಆದರೆ ಕೋಟ್ಯಂತರ ಆದಾಯ ಇರುವ ಈ ರಸ್ತೆ ಪರಿಹಾರಕ್ಕೆ ಕೇವಲ 50 ಕೋಟಿ ರೂ. ಕೊಡಲು ಹಿಂದೇಟು ಏಕೆ? ಎಂದು ಪ್ರಶ್ನಿಸಿದ್ದಾರೆ.

ನಾವು ನಿಮ್ಮ ಮೇಲೆ ವಿಶ್ವಾಸ ಇಟ್ಟು ಮತ ಹಾಕಿ ಗೆಲ್ಲಿಸಿದ್ದೇವೆ. ಆದರೆ ನೀವು ನಮ್ಮ ಮೇಲೆ ವಿಶ್ವಾಸ ಇಟ್ಟಿಲ್ಲ. ನಿಮಗೆ 10 ವರ್ಷಗಳಿಂದ ಮತ ಹಾಕಿದ್ದಕ್ಕೆ ನೀವು ನಮಗೆ ಏನು ಮಾಡಿದ್ದೀರಿ?. ರಸ್ತೆಯಲ್ಲಿ ಭೂಮಿ ಕಳೆದುಕೊಳ್ಳುವವರನ್ನು ಸೇರಿಸಿ ಈವರೆಗೆ ಒಂದೇ ಒಂದು ಸಭೆ ಕರೆದಿಲ್ಲ. ನೀವು ನಮ್ಮ ಜನಪ್ರತಿನಿಧಿ ಅಲ್ಲವೇ? ನೀವು ಜನರನ್ನು ಯಾಕೆ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಸಭೆಯಲ್ಲಿ ಭಾಗವಹಿಸಿದ್ದವರು ಶೋಭಾ ಕರಂದ್ಲಾಜೆ ಮುಂದೆ ಸರಣಿ ಪ್ರಶ್ನೆಗಳನ್ನಿಟ್ಟು ಆಕ್ರೋಶ ವ್ಯಕ್ತಪಡಿಸಿದರು.