ಉಡುಪಿ, ಆಗಸ್ಟ್ 30: ಉಡುಪಿಯ ಪಡುಕೆರೆ ಬೀಚ್‌ನಲ್ಲಿ ಯುವತಿಯೊಬ್ಬರು ಬಿಕಿನಿ ಫೋಟೋಶೂಟ್ ಮಾಡಿಸಿಕೊಳ್ಳುವ ವೇಳೆ ಪೊಲೀಸರು ತಡೆದ ಘಟನೆ ನಡೆದಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಯುವತಿ, ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಿಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ.
ಯುವತಿಯ ಬಿಕಿನಿ ಫೋಟೋಶೂಟ್ ಮಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಜತೆಗೆ, ಎಚ್ಚರಿಕೆ ನೀಡುವಂತೆಯೂ ತಿಳಿಸಿದ್ದರು ಎನ್ನಲಾಗಿದೆ. ಸಂಭಾವ್ಯ ಸಮಸ್ಯೆಯ ಬಗ್ಗೆ ಅರಿತುಕೊಂಡ ಪೊಲೀಸರು ಸ್ಥಳಕ್ಕೆ ಧಾವಿಸಿ ಬಟ್ಟೆ ಬದಲಾಯಿಸುವಂತೆ ಸೂಚಿಸಿದ್ದರು.
ಈ ವಿಚಾರವಾಗಿ ಇನ್ಸ್ಟಾಗ್ರಾಂನಲ್ಲಿ ಫೋಟೋಶೂಟ್ ಮಾಡಿದ ಫೋಟೋ ಸಹಿತ ಮಾಹಿತಿ ನೀಡಿರುವ ಯುವತಿ, ಪಡುಕೆರೆ ಬೀಚ್‌ನಲ್ಲಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಫೋಟೋಶೂಟ್ ಮಾಡಿಸುತ್ತಿದ್ದಾಗ ಬಟ್ಟೆ ಬದಲಿಸುವಂತೆ ಸ್ಥಳೀಯ ಪೊಲೀಸರು ಸೂಚಿಸಿದ್ದಾರೆ. ಬೇರೆ ಬಟ್ಟೆ ಹಾಕದಿದ್ದರೆ ಸ್ಥಳೀಯರು ಹಲ್ಲೆ ನಡೆಸುತ್ತಾರೆ ಎಂದು ಹೇಳಿದ್ದಾರೆ. ನೈತಿಕ ಪೊಲೀಸ್‌ಗಿರಿ ನಡೆಸಲು ಸ್ಥಳೀಯರು ಯಾರೆಂದು ಯುವತಿ ಪ್ರಶ್ನಿಸಿದ್ದಾರೆ.
ಯುವತಿಯ ಇನ್ಸ್ಟಾಗ್ರಾಂ ಪ್ರೊಫೈಲ್ ಮಾಹಿತಿ ಪ್ರಕಾರ ಆಕೆ ಡಿಜಿಟಲ್ ಕ್ರಿಯೇಟರ್ ಆಗಿದ್ದಾರೆ. ಆಕೆ ರೂಪದರ್ಶಿಯೂ ಆಗಿದ್ದಾರೆ ಎನ್ನಲಾಗಿದೆ.
ಬೀಚ್ ಸಾರ್ವಜನಿಕ ಪ್ರದೇಶ, ಫೋಟೋಶೂಟ್ ಮಾಡಿದ್ರೆ ತಪ್ಪೇನು? ಬಿಕಿನಿ ಹಾಕಿ ಫೋಟೋಶೂಟ್ ಮಾಡುವುದು ಕಾನೂನು ಉಲ್ಲಂಘನೆಯೇ? ಬಿಕಿನಿ ಹಾಕಬಾರದು ಎಂದು ಕಾನೂನು ಇದೆಯೇ ಎಂದು ಸಾಮಾಜಿಕ ಜಾಲತಾಣದ ಮೂಲಕ ಯುವತಿ ಉಡುಪಿ ಪೊಲೀಸರನ್ನು ಪ್ರಶ್ನಿಸಿದ್ದಾರೆ.
ಮತ್ತೊಂದೆಡೆ, ಹಿಂದು ಪರ ಹೋರಾಟಗಾರರು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಯುವತಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಇದೆಂಥಾ ಸಂಸ್ಕೃತಿ? ಪರಶುರಾಮ ಸೃಷ್ಟಿಯ ನಾಡಿನಲ್ಲಿ ಈಕೆ ಮಾಡಿದ್ದು ಸರಿಯೇ? ಬೀಚ್ಗೆ ಬರುವ ಪ್ರವಾಸಿಗರೇ, ಆಧುನಿಕತೆ ನೆಪದಲ್ಲಿ ಸಂಸ್ಕೃತಿಯನ್ನು ಮರೆಯದಿರಿ. ಬಿಕಿನಿ ಸಂಸ್ಕೃತಿಗೆ ಉಡುಪಿಯಲ್ಲಿ ಅವಕಾಶ ಇಲ್ಲ’ ಎಂದು ‘ಹಿಂದೂ’ ಹೆಸರಿನ ಖಾತೆಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಇದನ್ನೂ ಓದಿ: ಉಡುಪಿ: ಚಲಿಸುತ್ತಿದ್ದ ರೈಲಿನಲ್ಲಿ ಯುವತಿ ಮಾನಭಂಗಕ್ಕೆ ಯತ್ನ; ಆರೋಪಿ ಪತ್ತೆ ಹಚ್ಚಿದ್ದೇ ರೋಚಕ
ಅಂದಹಾಗೆ, ಪಡುಬಿದ್ರಿ ಬೀಚ್‌ನಲ್ಲಿ ಘಟನೆ ನಡೆದಿದೆ ಎಂದು ಸಾಮಾಜಿಕ ಮಾಧ್ಯಮ ತಾಣಗಳ ಸಂದೇಶಗಳಲ್ಲಿ ಉಲ್ಲೇಖವಿದೆ. ಆದರೆ, ಇದು ನಡೆದಿರುವುದು ಪಡುಕೆರೆ ಬೀಚ್ನಲ್ಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:17 am, Fri, 30 August 24