ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಮಹತ್ವದ ಕಾರ್ಯ ನಿರ್ವಹಿಸಿದ್ದಾರೆ. ಈಗ ಲಸಿಕೆ ಬಂದಿದೆ. ಇಂದು ಪ್ರತಿ ಕೇಂದ್ರದಲ್ಲಿ ಒಂದು ನೂರು ಜನರಿಗೆ ಲಸಿಕೆ ಹಾಕಲಾಗಿದೆ. ಶೀಘ್ರದಲ್ಲೇ ದೇಶ ಕೊರೊನಾ ಮುಕ್ತ ಆಗಲಿದೆ. ದೇಶವು ಮತ್ತೆ ಮೋದಿ ಕನಸಿನಂತೆ ತುಂಬಾ ವೇಗವಾಗಿ ಅಭಿವೃದ್ಧಿ ಹೊಂದಲಿದೆ ಎಂದು ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್ ಶಾ ಹೇಳಿದರು.
ಭದ್ರಾವತಿ ಸಮೀಪ ಬುಳ್ಳಾಪುರದಲ್ಲಿ RAF ಘಟಕಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಅಮಿತ್ ಶಾ ಮಾತನಾಡಿದರು. ಲಸಿಕೆ ಯಾರಿಗೆ ಕೊಡಬೇಕು ಎಂಬ ಬಗ್ಗೆ ಕೆಲವರು ವ್ಯಂಗ್ಯವಾಡಿದರು. ನಾವು ಯಾರು ಕೊರೊನಾ ನಿಯಂತ್ರಣಕ್ಕೆ ಪ್ರಯತ್ನಿಸಿದ್ದಾರೆ ಅವರಿಗೆ ಕೊರೊನಾ ಲಸಿಕೆ ನೀಡಲು ನಿರ್ಧಾರ ತೆಗೆದುಕೊಂಡಿದ್ದೇವೆ. ವಿಪಕ್ಷಗಳು ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ. ಈ ರೀತಿ ರಾಜಕೀಯ ಮಾಡುವವರನ್ನು ಸಹಿಸಲ್ಲ. ದೇಶದ ಜನತೆಗೆ ಮೋದಿ ನಾಯಕತ್ವದ ಬಗ್ಗೆ ಗೊತ್ತಿದೆ ಎಂದು ಲಸಿಕೆ ವಿರುದ್ಧ ಟೀಕಿಸುವವರ ವಿರುದ್ಧ ಶಾ ಬೇಸರ ವ್ಯಕ್ತಪಡಿಸಿದರು.
ಆರ್‌ಎಎಫ್ ಕೇಂದ್ರಕ್ಕೆ ಕರ್ನಾಟಕ ಸರ್ಕಾರದಿಂದ 50 ಎಕರೆ ಭೂಮಿ ಒದಗಿಸಲಾಗಿದೆ. ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಜಮೀನು ಪತ್ರ ಹಸ್ತಾಂತರ ಮಾಡಲಾಗಿದೆ. ಭೂಮಿ ನೀಡಿದ್ದಕ್ಕೆ ಸಿಎಂ ಯಡಿಯೂರಪ್ಪಗೆ ಅಮಿತ್ ಶಾ ಅಭಿನಂದನೆ ಸಲ್ಲಿಸಿದರು. ಈ ಘಟಕ ಸ್ಥಾಪನೆಯಿಂದ ಭದ್ರಾವತಿ ನಗರದ ಸಮಗ್ರ ಅಭಿವೃದ್ಧಿ ಆಗಲಿದೆ ಎಂದು ಹೇಳಿದರು.
ಪೂರ್ತಿ ದಕ್ಷಿಣ ಭಾರತದಲ್ಲಿ ಯಾವುದೇ ಸ್ಥಳದಲ್ಲಿ ದುರ್ಘಟನೆ ನಡೆದರೆ, ಯಾವುದೇ ರೀತಿಯಲ್ಲಿ ಗಲಭೆ ಆದರೆ, ಸಿಆರ್ಪಿಎಫ್ ತುಕಡಿ ಮಹತ್ವದ ಕಾರ್ಯ ನಿರ್ವಹಿಸಲಿದೆ. ದೇಶದಲ್ಲಿ 3.5 ಲಕ್ಷ ಸಿಆರ್ಪಿಎಫ್ ಜವಾನರಿದ್ದಾರೆ. ಸರ್ದಾರ್ ವಲ್ಲಭಾಭಾಯಿ ಪಟೇಲರು 1950 ರಲ್ಲಿ ಸಿಆರ್ಪಿಎಫ್ ಸ್ಥಾಪನೆ ಮಾಡಿದ್ದರು. ಈಗ RAF ಇಲ್ಲಿ ನಿರ್ಮಾಣ ಆಗುತ್ತಿದೆ. ಭದ್ರಾವತಿಯಲ್ಲಿ RAF, 97ನೇ ಬೆಟಾಲಿಯನ್ಗೆ ಭೂಮಿ ಪೂಜೆ ನಡೆಸಲಾಗಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಯಾವುದೇ ಧಂಗೆಗಳು ಆದರೂ ಅದನ್ನು ಭದ್ರಾವತಿ RAF ಪಡೆಯೇ ನಿಯಂತ್ರಿಸಲಿದೆ ಎಂದು ಹೇಳಿದರು.
ಭದ್ರಾವತಿಯಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆ ಹಾಗೂ ಮೈದಾನ ನಿರ್ಮಾಣ ಮಾಡಲಾಗುವುದು. ಭದ್ರಾವತಿ ಜನರಿಗೂ ಇಲ್ಲಿ ಪ್ರವೇಶ ನೀಡಲಾಗುವುದು. ಜೊತೆಗೆ, ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು. ಇದಕ್ಕೆ ಎಲ್ಲಾ ರಾಜ್ಯದ ಮಕ್ಕಳಿಗೆ ಪ್ರವೇಶ ನೀಡಲಾಗುವುದು. ಆರ್‌ಎಎಫ್ ಜನರ ಜೊತೆ ಸಂಬಂಧ ವೃದ್ಧಿಗೆ ಸಹಕಾರಿಯಾಗಲಿದೆ. ರಾಷ್ಟ್ರೀಯ ಫೊರೆನ್ಸಿಕ್ ವಿಜ್ಞಾನ ವಿವಿ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ. ರಕ್ಷಣಾ ವಿವಿ ಸ್ಥಾಪನೆಗೂ ಒಪ್ಪಿಗೆ ನೀಡಲಾಗಿದೆ. ಎರಡೂ ವಿವಿಗಳ ಜೊತೆ ಕರ್ನಾಟಕ ಸಂಯೋಜನೆ ಮಾಡಿಕೊಳ್ಳಲಿ ಎಂದು ಯೋಜನೆಗಳ ಬಗ್ಗೆ ವಿವರಣೆ ನೀಡಿದರು.
CRPF ನಮ್ಮ ದೇಶದ ಶಕ್ತಿಯಾಗಿದೆ. ದೇಶದ ಮೂಲೆ ಮೂಲೆಗೂ CRPF ಹೋಗುತ್ತದೆ. ಯಾವುದೇ ಅಹಿತಕರ ಘಟನೆಯಾದ್ರೂ CRPF ಹೋಗುತ್ತದೆ. ಪೊಲೀಸರನ್ನು ನಾವು ಬೇರೆ ದೃಷ್ಟಿಯಿಂದ ನೋಡುತ್ತೇವೆ. ಆದರೆ ಪೊಲೀಸರಿಗೆ ಸಮಯದ ಮಿತಿಯೇ ಇರುವುದಿಲ್ಲ. ಅವರು ಕಠಿಣ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗಿಗಳ ಪೈಕಿ ಪೊಲೀಸ್ ಕೆಲಸ ಕಠಿಣವಾದದ್ದು. ನಾವು ಪೊಲೀಸರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ದೆಹಲಿಗೆ ಹೋದಾಗ ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ಹೋಗಿ. ಪೊಲೀಸರಿಗೆ ಗೌರವ ಸಲ್ಲಿಸಿ ಎಂದು ಪೊಲೀಸ್ ನೌಕರರ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.
ಅಮಿತ್ ಶಾ ಅಂಥವರು ಸಚಿವರಾಗಿ ಸಿಕ್ಕಿರುವುದು ನಮ್ಮ ಅದೃಷ್ಟ
ಕರ್ನಾಟಕ ರಾಜ್ಯಕ್ಕೆ ಇಂದು ಅವಿಸ್ಮರಣೀಯ ದಿನವಾಗಿದೆ. ಆರ್‌ಎಎಫ್ ಘಟಕ ಶಿಲಾನ್ಯಾಸ ನೆರವೇರಿಸಲಾಗಿದೆ. ನಮ್ಮ ಬಹುದಿನಗಳ ಬೇಡಿಕೆ ಈಡೇರಿದೆ. ಇಷ್ಟು ದಿನ ನೆರೆ ರಾಜ್ಯದ ತಂಡಗಳನ್ನು ಕರೆಸಲಾಗುತ್ತಿತ್ತು. ಆದರೆ, ಈಗ ಕರ್ನಾಟಕದಲ್ಲೇ RAF ಘಟಕ ಸ್ಥಾಪನೆಯಾಗುವ ಕಾಲ ಬಂದಿದೆ. ಉತ್ತಮ ಮಾರ್ಗವಿರುವ ಸ್ಥಳದಲ್ಲಿ ಘಟಕ ಸ್ಥಾಪನೆಯಾಗಲಿದೆ.
ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ಶಕ್ತಿ ತುಂಬಲಿದೆ. ವಲ್ಲಭಾಭಾಯ್ ಪಟೇಲ್ ಬಳಿಕ ಅಮಿತ್ ಶಾ ಅಂಥಾ ಗೃಹ ಸಚಿವರಾಗಿ ಸಿಕ್ಕಿದ್ದಾರೆ. ಅಮಿತ್ ಶಾ ಅಂಥವರು ಸಚಿವರಾಗಿ ಸಿಕ್ಕಿರುವುದು ನಮ್ಮ ಅದೃಷ್ಟ ಎಂದು ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಭಾಷಣ ಮಾಡಿದ್ದಾರೆ. ಭಾರತ್ ಮಾತಾ ಕೀ ಜೈ ಎಂದು ಹೇಳಿ ಭಾಷಣ ಆರಂಭಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಇಂಗ್ಲಿಷ್ನಲ್ಲಿ ಭಾಷಣ ಮಾಡಿದರು.
350 ಕೋಟಿ ರೂ ವೆಚ್ಚ
ಭದ್ರಾವತಿಯಲ್ಲಿ ಆರ್ ಎ ಎಫ್ ಬೆಟಾಲಿಯನ್ ಸ್ತಾಪನೆಯಿಂದ ಇಡೀ ದಕ್ಷಿಣ ಭಾರತದ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಾಯಕವಾಗಲಿದೆ. ಇಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಘಟಕ ನಿರ್ಮಾಣವಾಗಲಿದ್ದು, ರಾಜ್ಯ ಸರಕಾರ 50ಎಕರೆ ಜಮೀನು ನೀಡಿದೆ. ಇಲ್ಲಿ ಸುಸಜ್ಜಿತವಾದ ವಸತಿಗೃಹಗಳು, ಆಸ್ಪತ್ರೆ, ಕೇಂದ್ರೀಯ ವಿದ್ಯಾಲಯ, ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಕ್ರೀಡಾಂಗಣ ನಿರ್ಮಾಣವಾಗಲಿದೆ. ಇದರ ಪ್ರಯೋಜನ ಸ್ಥಳೀಯರಿಗೂ ದೊರೆಯುವಂತೆ ಮಾಡಲು ಯೋಜನೆ ರೂಪಿಸಲಾಗಿದೆ .
ಸಾರಿಗೆ ಸಂಪರ್ಕ ಉತ್ತಮವಾಗಿರುವ ಭದ್ರಾವತಿಯಲ್ಲಿ ಆರ್ ಎ ಎಫ್ ಘಟಕ ಸ್ಥಾಪನೆಯಿಂದ ತುರ್ತು ಸಂದರ್ಭಗಳಲ್ಲಿ ಬೇರೆ ರಾಜ್ಯಗಳಿಂದ ಪಡೆಗಳನ್ನು ತರಿಸುವುದು ತಪ್ಪಲಿದೆ. ಇಲ್ಲಿ ಆರಂಭವಾಗಲಿರುವ ಘಟಕ ರಾಜ್ಯದ ಎಲ್ಲಾ ಜಿಲ್ಲೆಗಳು, ಕೇರಳದ ನಾಲ್ಕು, ಗೋವಾದ 2, ಪುದುಚೇರಿ ಮತ್ತು ಲಕ್ಷದ್ವೀಪದ ತಲಾ ಒಂದು ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿದೆ.
ಅಮಿತ್ ಶಾ ಕರ್ನಾಟಕ ಪ್ರವಾಸ: ಭದ್ರಾವತಿಯ RAF ಘಟಕ ಸ್ಥಾಪನೆಗೆ ಭೂಮಿ ಪೂಜೆ
Published On - 6:33 pm, Sat, 16 January 21