ಬೆಂಗಳೂರು: ಮ್ಯಾನ್ಹೋಲ್ಗೆ ಇಳಿದು ಮೃತಪಟ್ಟ 90 ಪೌರಕಾರ್ಮಿಕರ ಸಾವಿನ ಪ್ರಕರಣಗಳ ಕುರಿತು ಪ್ರಶ್ನೆ ಕೇಳಿದ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಕೇಂದ್ರ ಸಚಿವರು ಹರಿಹಾಯ್ದ ಘಟನೆ ನಗರದಲ್ಲಿ ನಡೆಯಿತು. ಈ ಕುರಿತು ಪ್ರಶ್ನಿಸಿದ ಪತ್ರಕರ್ತರ ವಿರುದ್ಧವೇ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ನಾರಾಯಣಸ್ವಾಮಿ (Union Minister Narayanaswamy) ಹರಿಹಾಯ್ದರು. ಸಮಾಜ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರನ್ನು ‘ಪೌರಕಾರ್ಮಿಕರ ಸಾವಿನ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಿ’ ಎಂದು ಕೇಳಿದಾಗ, ಮಾಹಿತಿ ಕೊರತೆ ಹಿನ್ನಲೆಯಲ್ಲಿ ಪ್ರಶ್ನೆಗೆ ಉತ್ತರ ನೀಡಲು ತಡಬಡಾಯಿಸಿದರು. ನಂತರ ‘ಪ್ರಶ್ನೆ ಕೇಳುವುದು ಸಂಸ್ಕಾರವಲ್ಲ’ ಎಂದು ಸಿಟ್ಟಿನಿಂದ ಉತ್ತರಿಸಿದರು.
ಜಾತಿ ನಿಂದನೆ ಪ್ರಕರಣದಲ್ಲಿ ಶೇ 3ರಷ್ಟು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. 1995ರಿಂದ 2020ರ ಅವಧಿಯಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ನಿಂದಾಗಿ 90 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಎಷ್ಟು ಪ್ರಕರಣಗಳಲ್ಲಿ ಅರೋಪಪಟ್ಟಿ ಸಲ್ಲಿಕೆಯಾಗಿದೆ. ಗುತ್ತಿಗೆದಾರರ ವಿರುದ್ಧ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವಾಗಿ ಹೇಳಿದರು.
ರಾಜ್ಯದಲ್ಲಿ ಈವರೆಗೆ ನಡೆದಿರುವ ಮರ್ಯಾದೆ ಹತ್ಯೆಗಳ ಮಾಹಿತಿ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಸಕಾಲದಲ್ಲಿ ಪರಿಣಾಮಕಾರಿಯಾಗಿ ಆರೋಪಪಟ್ಟಿ ಸಲ್ಲಿಸದಿರುವುದು ಪೊಲೀಸರ ವೈಫಲ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಾತಿ ನಿಂದನೆಗೆ ಸಂಬಂಧಿಸಿದ 60,000 ಇನ್ನೂ ಆರೋಪಪಟ್ಟಿ ಸಲ್ಲಿಸಿಲ್ಲ ಎಂದು ವಿವರಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಮಾಸ್ಟರ್ ಪ್ಲಾನ್ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ ಎಂದರು. ಈ ಕೆಲಸದಲ್ಲಿ ಗ್ರಾಮೀಣಾಭಿವೃದ್ಧಿ, ನರೇಗಾ, ತೋಟಗಾರಿಕೆ, ರೇಷ್ಮೆ, ಕೃಷಿ ಇಲಾಖೆಗಳು ಜತೆಗೂಡಿ ಕಾರ್ಯನಿರ್ವಹಿಸಬೇಕು ಎಂದರು. ಸಭೆಯಲ್ಲಿ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀನಿವಾಸ ಪೂಜಾರಿ ಗೈರು ಹಾಜರಾಗಿದ್ದರು. ಪೂರ್ವ ನಿಗದಿತ ಕೆಡಿಪಿ ಸಭೆಗೆ ಅವರು ತೆರಳಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇದನ್ನೂ ಓದಿ: ಸುರಕ್ಷತೆ ವಹಿಸದೆ ಅಧಿಕಾರಿಗಳ ನಿರ್ಲಕ್ಷ್ಯ: ಬರಿಗೈನಿಂದಲೇ ಚರಂಡಿ ಸ್ವಚ್ಛಗೊಳಿಸಿದ ಪೌರ ಕಾರ್ಮಿಕರು
Published On - 4:14 pm, Fri, 11 February 22