ಚುನಾವಣೆಗೆ ಬೇರೇನೂ ವಿಷಯವಿಲ್ಲ ಅಂತ ಹಿಜಾಬ್ ವಿಷಯ ದೊಡ್ಡದು ಮಾಡ್ತಿದ್ದಾರೆ: ಇಬ್ರಾಹಿಂ ಆರೋಪ

CM Ibrahim: ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿರುವ ಈಶ್ವರಪ್ಪ ಕೆಂಪುಕೋಟೆ ಮೇಲೆ ಕೇಸರಿ ಬಾವುಟ ಹಾರಿಸುತ್ತೇವೆ ಎನ್ನುತ್ತಾರೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.

ಚುನಾವಣೆಗೆ ಬೇರೇನೂ ವಿಷಯವಿಲ್ಲ ಅಂತ ಹಿಜಾಬ್ ವಿಷಯ ದೊಡ್ಡದು ಮಾಡ್ತಿದ್ದಾರೆ: ಇಬ್ರಾಹಿಂ ಆರೋಪ
ಸಿಎಂ ಇಬ್ರಾಹಿಂ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 11, 2022 | 2:53 PM

ಮಂಡ್ಯ: ಕರ್ನಾಟಕದಲ್ಲಿ ಹಿಜಾಬ್ (Hijab) ಮತ್ತು ಕೇಸರಿಶಾಲು (Safron Shawl) ವಿಚಾರಗಳನ್ನು ಅನಗತ್ಯವಾಗಿ ದೊಡ್ಡದು ಮಾಡಲಾಗುತ್ತಿದೆ. ತಲೆ ಮೇಲೆ ಸೆರಗು ಹಾಕಿಕೊಳ್ಳುವುದನ್ನು ಬೇಡ ಎನ್ನುವುದು ಎಷ್ಟರಮಟ್ಟಿಗೆ ಸರಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ (CM Ibrahim) ಪ್ರಶ್ನಿಸಿದರು. ನಮ್ಮ ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ್ ಕೂಡ ತಲೆ‌ ಮೇಲೆ ಸೆರಗು ಹಾಕಿಕೊಳ್ಳುತ್ತಿದ್ದರು. ಇಂದಿಗೂ ಕರ್ನಾಟಕದಲ್ಲಿ ಇಳಕಲ್ ಸೀರೆಯುಟ್ಟವರು ಸೆರಗು ತಲೆ ಮೇಲೆ ಹಾಕಿಕೊಳ್ಳುತ್ತಾರೆ. ಹಿಜಾಬ್ ಅನ್ನು ಸಹ ಸೆರಗು ಮುಚ್ಚಿಕೊಳ್ಳುವುದು ಎಂದೇ ಪರಿಗಣಿಸಬೇಕು ಎಂದು ಸಲಹೆ ಮಾಡಿದರು. ಮುಂದಿನ ಚುನಾವಣೆಗೆ ಹೋಗಲು ಬಿಜೆಪಿಯವರಿಗೆ ಯಾವ ವಿಚಾರವು ಇರಲಿಲ್ಲ. ರಾಮಮಂದಿರ, ಗೋಹತ್ಯೆ ವಿಚಾರಗಳು ಮುಗಿದವು. ಪೆಟ್ರೋಲ್ ದರ ನೂರು ರೂಪಾಯಿ ದಾಟಿದೆ. ಹೀಗಾಗಿ ಹಿಜಾಬ್ ವಿಚಾರ ದೊಡ್ಡದು ಮಾಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಕೇಸರಿ ಶಾಲು ಹಂಚಿಕೆ ವಿಚಾರ ಕುರಿತು ಪ್ರಸ್ತಾಪಿಸಿದ ಅವರು, ಅನಗತ್ಯವಾಗಿ ವಿಷಯವನ್ನು ದೊಡ್ಡದು ಮಾಡಲಾಗುತ್ತಿದೆ. ಹೀಗೆ ಆಗಬಾರದಿತ್ತು ಎಂದು ಅಭಿಪ್ರಾಯಪಟ್ಟರು. ‘ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸಲಾಗುವುದು’ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಯನ್ನು ಇಬ್ರಾಹಿಂ ನೆನಪಿಸಿಕೊಂಡರು. ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿರುವ ಈಶ್ವರಪ್ಪ ಹೀಗೆ ಹೇಳುತ್ತಾರೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.

ಇಂಥ ಹೇಳಿಕೆ ನೀಡಿದ ದಿನವೇ ಅವರನ್ನು ಬಂಧಿಸಿ, ಸಚಿವ ಸಂಪುಟದಿಂದ ಹೊರಗೆ ಹಾಕಬೇಕಿತ್ತು. ಈಶ್ವರಪ್ಪ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ನಾನೇ ಕಾನೂನು ಹೋರಾಟಕ್ಕೆ ಮುಂದಾಗುತ್ತೇನೆ ಎಂದು ಸವಾಲು ಹಾಕಿದರು. ‘ಈಶ್ವರಪ್ಪ, ನೀನು ಕೇಸರಿ ಶಾಲು ಹಂಚುವ ಬದಲು ಪೆನ್ನು, ಪುಸ್ತಕ ಕೊಡು. ವಿಷ ಯಾಕೆ ಹಂಚ್ತೀಯ’ ಎಂದು ಕಿಡಿ ಕಾರಿದರು. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡುವ​ ತೀರ್ಪಿಗೆ ನಾವೆಲ್ಲರೂ ತಲೆ ಬಾಗುತ್ತೇವೆ. ನ್ಯಾಯಾಂಗದ ಮೇಲೆ ನಮಗೆ ಅಪಾರ ವಿಶ್ವಾಸ, ಗೌರವವಿದೆ ಎಂದರು.

ಅಲ್ಲಾಹು ಅಕ್ಬರ್​ ಘೋಷಣೆ ಕೂಗಿದ ವಿದ್ಯಾರ್ಥಿನಿ ಮುಸ್ಕಾನ್​ ಮನೆಗೆ ಕೆಲ ನಾಯಕರು ಭೇಟಿ ನೀಡಿ, ಗಿಫ್ಟ್​ ಕೊಡುತ್ತಿರುವ ಕುರಿತು ಪ್ರಸ್ತಾಪಿಸಿದ ಅವರು, ಅದರಲ್ಲಿ ತಪ್ಪೇನಿದೆ ಎಂದರು. ಅಷ್ಟು ಹುಡುಗರ ನಡುವೆ ಧೈರ್ಯವಾಗಿ ನಿಂತು, ಏಕಾಂಗಿಯಾಗಿ ಎದುರಿಸಿದ್ದಾಳೆ. ಮುಸ್ಕಾನ್​ ಧೈರ್ಯವನ್ನು ಮೆಚ್ಚಬೇಕು. ಮುಸ್ಕಾನ್​ ಭಾರತದ, ಕರ್ನಾಟಕದ ಮಗಳು. ಆಕೆಯನ್ನು ಮೆಚ್ಚಿ ಉಡುಗೊರೆ ಕೊಟ್ಟರೆ ಯಾವುದೇ ತಪ್ಪಿಲ್ಲ ಎಂದು ಅಭಿಪ್ರಾಯಪಟ್ಟರು.

ಜೈಶ್ರೀರಾಮ್​ ಘೋಷಣೆ ಕೂಗಿದರೆ ಅದು ಪ್ರಚೋದನೆ ಎನಿಸುವುದಿಲ್ಲ, ಆದರೆ ಅಲ್ಲಾಹು ಅಕ್ಬರ್​ ಘೋಷಣೆ ಕೂಗಿದರೆ ಪ್ರಚೋದನೆ ಆಗುತ್ತಾ? ನಾನು ಹರಹರ ಮಹದೇವ ಎಂದು ಹೇಳ್ತೇನೆ, ಅದು ಪ್ರಚೋದನೆಯಾಗುತ್ತಾ ಎಂದು ಪ್ರಶ್ನಿಸಿದರು. ನಾನು ಕೂಡ ವಿದ್ಯಾರ್ಥಿನಿ ಮುಸ್ಕಾನ್​ಳನ್ನು ಭೇಟಿಯಾಗುತ್ತೇನೆ ಎಂದರು.

ಇದನ್ನೂ ಓದಿ: ವಿಧಾನಸಭಾ ಚುನಾವಣೆ ಗಮನದಲ್ಲಿರಿಸಿ ಹಿಜಾಬ್ ವಿವಾದ ಸೃಷ್ಟಿಸಲಾಗಿದೆ: ಎಸ್​ಡಿಪಿಐನ ಅತಾವುಲ್ಲಾ ಜೋಕಟ್ಟೆ ಹೇಳಿಕೆ

ಇದನ್ನೂ ಓದಿ: ಸೂಕ್ತ ಸಮಯ ಬಂದಾಗ ನಾವು ಮಧ್ಯ ಪ್ರವೇಶಿಸುತ್ತೇವೆ; ಹಿಜಾಬ್ ವಿವಾದದ ಕುರಿತು ತುರ್ತು ವಿಚಾರಣೆ ಅಸಾಧ್ಯ ಎಂದ ಸುಪ್ರೀಂ ಕೋರ್ಟ್​