ಹರಿಪ್ರಸಾದ್ vs ಕೋಟ ಶ್ರೀನಿವಾಸ ಪೂಜಾರಿ: ಮಲಹೊರುವ ಪದ್ಧತಿ ಬಗ್ಗೆ ವಿಧಾನ ಪರಿಷತ್ನಲ್ಲಿ ಕಾವೇರಿದ ಚರ್ಚೆ
ಸ್ಮಾರ್ಟ್ ಸಿಟಿ ಯೋಜನೆಯ ಎಂಜಿನಿಯರ್ ಈ ಬಗ್ಗೆ ನೀಡಿರುವ ಹೇಳಿಕೆಯಲ್ಲಿ ಈ ಕೆಲಸವು ಒಂದು ಜಾತಿಗೆ ಸೀಮಿತವಾದದ್ದು ಎಂದಿರುವುದನ್ನು ಬಿ.ಕೆ.ಹರಿಪ್ರಸಾದ್ ಆಕ್ಷೇಪಿಸಿದರು.
ಬೆಳಗಾವಿ: ಕರ್ನಾಟಕದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ತಲೆ ಮೇಲೆ ಮಲಹೊರುವ ಪದ್ಧತಿ ಬಗ್ಗೆ ವಿಧಾನ ಪರಿಷತ್ನಲ್ಲಿ ಪ್ರತಿಪಕ್ಷ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಸ್ತಾಪಿಸಿದರು. ಸ್ಮಾರ್ಟ್ ಸಿಟಿ ಯೋಜನೆಯ ಎಂಜಿನಿಯರ್ ಈ ಬಗ್ಗೆ ನೀಡಿರುವ ಹೇಳಿಕೆಯಲ್ಲಿ ಈ ಕೆಲಸವು ಒಂದು ಜಾತಿಗೆ ಸೀಮಿತವಾದದ್ದು ಎಂದಿದ್ದಾರೆ. ಇದು ಅವರ ಪ್ರಜ್ಞಾವಂತಿಕೆ ಎಷ್ಟಿದೆ ಎಂದು ತೋರಿಸುತ್ತದೆ. ಇಂಥ ವಿಚಾರಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಸೂಕ್ಷ್ಮತೆ ಮರೆತು ಮಾತನಾಡುವವರ ವಿರುದ್ಧ ಸರ್ಕಾರ ಶಿಸ್ತುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಹರಿಪ್ರಸಾದ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮ್ಯಾನ್ ಹೋಲ್ ಸ್ವಚ್ಛಗೊಳಿಸುವಾಗ ಕಾರ್ಮಿಕರು ಮೃತಪಟ್ಟರೆ ಸಂಬಂಧಿಸಿದ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಮೃತರ ಕುಟುಂಬಸ್ಥರಿಗೆ ₹ 10 ಲಕ್ಷ ಪರಿಹಾರ ನೀಡಲಾಗುತ್ತಿದೆ. ಸ್ಕ್ಯಾವೆಂಜಿಂಗ್ ಪದ್ಧತಿ ನಿರ್ಮೂಲನೆಗಾಗಿ ಕಾನೂನು ರೂಪಿಸಲು ಕ್ರಿಯಾ ಯೋಜನೆ ರೂಪಿಸಿ ಕೊಡಲಾಗಿದೆ ಎಂದರು.
ಈ ವಿಷಯದ ಬಗ್ಗೆ ವಿವರಿಸಿದ ಹರಿಪ್ರಸಾದ್ ಅವರು, ಈವರೆಗೆ ಸುಮಾರು 400 ಮಂದಿ ಮ್ಯಾನ್ಯೂಯಲ್ ಸ್ಕ್ಯಾವೆಂಜಿಂಗ್ ಮಾಡುವಾಗ ಮೃತಪಟ್ಟಿದ್ದಾರೆ. ಆದರೆ ಕೇವಲ 40 ಮಂದಿಗೆ ಮಾತ್ರ ಪರಿಹಾರ ಒದಗಿಸಲಾಗಿದೆ. ಮ್ಯಾನ್ಯೂಯಲ್ ಸ್ಕ್ಯಾವೇಜಿಂಗ್ ಪದ್ಧತಿ ಹೋಗಲಾಡಿಸಲು ಹೊಸ ಮಸೂದೆ ಮಂಡಿಸಲು ಸರ್ಕಾರ ಗಮನಕೊಡಬೇಕು. ನಿಯಮ ಮೀರಿ ಮ್ಯಾನ್ಯೂವಲ್ ಸ್ಕ್ಯಾವೆಂಜಿಂಗ್ ಮಾಡಿಸಿದರೆ ಆ ಗುತ್ತಿಗೆದಾರ ಹಾಗೂ ಸಂಬಂಧಪಟ್ಟ ಅಧಿಕಾರಿ ಮೇಲೆ ಕ್ರಮ ಜರುಗಿಸಬೇಕು, ಜೈಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಗಮನ ಸೆಳೆಯುವ ಸೂಚನೆ ಮೂಲಕ ವಿಷಯ ಪ್ರಸ್ತಾಪಿಸಿದ ಅವರು, 2013ರಲ್ಲಿಯೇ ರಾಜ್ಯದಲ್ಲಿ ತಲೆಮೇಲೆ ಮಲಹೊರುವ ಪದ್ಧತಿ ನಿಷೇಧಿಸಲಾಗಿದೆ. ಹೀಗಿದ್ದರೂ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಪದ್ಧತಿ ಚಾಲ್ತಿಯಲ್ಲಿದೆ. ನಿಷೇಧ ಇದ್ದರೂ ಈ ಪದ್ದತಿ ಹೇಗೆ ಜಾರಿಯಲ್ಲಿದೆ ಎಂದು ಪ್ರಶ್ನಿಸಿದರು. ಭಾರತ ಸರ್ಕಾರವೂ 2013ರಲ್ಲಿ ಮ್ಯೂನ್ಯುವಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ ಜಾರಿಗೆ ತಂದಿದೆ ಎಂದು ವಿವರಿಸಿದರು.
ಕರ್ನಾಟಕದ ಗ್ರಾಮೀಣ ಭಾಗದಲ್ಲಿ 5080 ಜನರು ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಕೆಲಸದಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಕ್ಯಾವೆಂಜರ್ಗಳಿಗೆ ಪುನರ್ವಸತಿ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ. ಒಂದು ಬಾರಿ ನಗದು ಸಹಾಯವಾಗಿ ₹ 40 ಸಾವಿರವನ್ನು ಭಾರತ ಸರ್ಕಾರ ನೀಡುತ್ತಿದೆ. ಮ್ಯಾನ್ಹೋಲ್ ಸ್ವಚ್ಛಗೊಳಿಸುವಾಗ ಮೃತಪಟ್ಟರೆ ಸಂಬಂಧಿಸಿದ ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತಿದೆ. ಮೃತರಿಗೆ ₹ 10 ಲಕ್ಷ ಪರಿಹಾರ ನೀಡಲಾಗುತ್ತಿದೆ. ಸ್ಕ್ಯಾವೆಂಜಿಂಗ್ ಪದ್ಧತಿ ನಿರ್ಮೂಲನೆಗೆ ಅಗತ್ಯ ಕಾನೂನು ರೂಪಿಸಲು ಕ್ರಿಯಾ ಯೋಜನೆ ರೂಪಿಸಿ ಇಲಾಖೆಗೆ ಕೊಡಲಾಗಿದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭ; ವಿಧಾನಸಭೆ ಕಲಾಪ ನೇರ ಪ್ರಸಾರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಖಾಸಗಿ ವಿಧೇಯಕ ಮಂಡನೆಗೆ ನಿರ್ಧಾರ