ಅತಿವೃಷ್ಟಿಯಿಂದ ಶೇ 75ರಷ್ಟು ಹಾನಿ: ನಿಲುವಳಿ ಮಂಡಿಸಿದ ಸಿದ್ದರಾಮಯ್ಯ, ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಅತಿವೃಷ್ಟಿಯಿಂದ ರಾಜ್ಯದಲ್ಲಿ ಶೇ 75ರಷ್ಟು ಬೆಳೆಹಾನಿ ಸಂಭವಿಸಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು
ಬೆಳಗಾವಿ: ಕರ್ನಾಟಕದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳು ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿತು. ಬೆಳೆಹಾನಿ ಕುರಿತು ನಿಲುವಳಿ ಮಂಡಿಸಿ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಅತಿವೃಷ್ಟಿಯಿಂದ ರಾಜ್ಯದಲ್ಲಿ ಶೇ 75ರಷ್ಟು ಬೆಳೆಹಾನಿ ಸಂಭವಿಸಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ರಾಜ್ಯದ 21 ಜಿಲ್ಲೆಗಳಲ್ಲಿ ಮಳೆಯಿಂದ ಹಾನಿಯಾಗಿದೆ. ಈ ಜಿಲ್ಲೆಗಳಲ್ಲಿ ಒಟ್ಟು 78.83 ಲಕ್ಷ ಎಕರೆ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬಿತ್ತಲಾಗಿತ್ತು. ಈ ಪೈಕಿ ಬಹುಪಾಲು ಪ್ರದೇಶದಲ್ಲಿ ಪ್ರವಾಹದಿಂದ ಬೆಳೆಹಾನಿಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಕಡೆ ರಾಗಿ, ಭತ್ತ, ಶೇಂಗಾ ನಾಶವಾಗಿದೆ. ಮಲೆನಾಡಿನಲ್ಲಿ ಕಾಫಿ, ಮೆಣಸು ಬೆಳೆ ಹಾನಿಯಾಗಿದೆ. ರಾಜ್ಯದೆಲ್ಲೆಡೆ ಟೊಮೆಟೊ, ಮೆಣಸಿನಕಾಯಿ, ಮೆಕ್ಕೆಜೋಳ, ಹೂವಿನ ಬೆಳೆಗಳು ನಾಶ ಆಗಿವೆ. ಒಂದು ಎಕರೆ ಭೂಮಿಯಲ್ಲಿ ಬೆಳೆ ಬೆಳೆಯಲು ಒಂದರಿಂದ ಒಂದೂವರೆ ಲಕ್ಷ ಖರ್ಚು ಮಾಡಿರುತ್ತಾರೆ. ಕೋಲಾರ, ಮಂಡ್ಯ, ಮೈಸೂರು ಭಾಗದಲ್ಲಿ ಬೆಳೆ ನೆಲ ಕಚ್ಚಿ ಮೊಳಕೆ ಬಂದಿದೆ. ಮಳೆಯಿಂದಾಗಿ ರೈತರ ಬದುಕು ಛಿದ್ರವಾಗಿದೆ. ಅವರು ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಬಂದಿದೆ. ನವೆಂಬರ್ ಮತ್ತು ಡಿಸೆಂಬರ್ನಲ್ಲಿ ಆರು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಈ ವರ್ಷ ಒಟ್ಟು 12.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ ಎಂದು ಹೇಳಿದರು.
ಈ ವಿಷಯದ ಬಗ್ಗೆ ನಾನು ಇಂದೇ ಚರ್ಚಿಸಲು ಸಿದ್ಧವಾಗಿದ್ದೇನೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸದನದಲ್ಲಿ ಇಲ್ಲ. ಸಿಎಂ ಇಲ್ಲದ ಸದನದಲ್ಲಿ ನಾನು ಮಾತನಾಡಲಾರೆ. ನಾನು ಹೇಳಿದ್ದಕ್ಕೆಲ್ಲ ನೀವು ಒಪ್ಪಿಕೊಳ್ಳಬಹುದು. ಆದರೆ ಅದನ್ನು ಈಡೇರಿಸಲು ಹಣ ಎಲ್ಲಿಂದ ಹೊಂದಿಸುತ್ತಾರೆ ಎಂಬ ಪ್ರಶ್ನೆ ಹಾಗೆಯೇ ಬಾಕಿ ಉಳಿಯುತ್ತೆ ಎಂದು ವಿಶ್ಲೇಷಿಸಿದರು. ನಾನು ಮಾತಾಡಿದ್ದಕ್ಕೆ ನಿಮ್ಮ ಒಪ್ಪಿಗೆ ಇದೆಯೇ ಎಂದು ಆಡಳಿತ ಪಕ್ಷದವರತ್ತ ಸಿದ್ದರಾಮಯ್ಯ ನೋಡಿದರು. ಆಗ ಸಚಿವ ಕೆ.ಎಸ್.ಈಶ್ವರಪ್ಪ ‘ಓಕೆ’ ಎಂದರು. ಅವರು ‘ಓಕೆ’ ಎಂದಿದ್ದು ನೀವು ಮಾತಾಡುವುದಕ್ಕಷ್ಟೇ ಎಂದ ಸ್ಪೀಕರ್ ಸ್ಪಷ್ಟಪಡಿಸಿದರು.
ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ನಿರ್ಣಯ ಮಂಡಿಸಲಾಯಿತು. ‘ರಕ್ಷಣಾ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ನಿಧನದಿಂದ ಅಚ್ಚರಿಯಾಗಿದೆ. ದುರಂತದ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ. ಅಪಘಾತಕ್ಕೆ ಏನು ಕಾರಣ ಎಂಬ ಸಂಗತಿ ತನಿಖೆಯಿಂದ ಹೊರಬರಬೇಕು. ದುರಂತದಲ್ಲಿ ಯಾರ ಕೈವಾಡವೂ ಇಲ್ಲ ಎನ್ನುವುದು ತನಿಖೆಯಿಂದ ಸಾಬೀತಾಗಬೇಕು ಎಂದು ಹೇಳಿದರು.
ಚಿತ್ರನಟರಾದ ಪುನೀತ್ ರಾಜ್‍ಕುಮಾರ್ ಮತ್ತು ಶಿವರಾಮ್ ಅವರ ಗುಣಗಳನ್ನು ಸ್ಮರಿಸಿಕೊಂಡ ಸಿದ್ದರಾಮಯ್ಯ, ಪುನೀತ್ ರಾಜ್‍ಕುಮಾರ್ ತಂದೆಯನ್ನೂ ಮೀರಿ ತನ್ನದೇ ಆದ ಅಭಿಮಾನಿಗಳನ್ನು ಸಂಪಾದಿಸಿದ್ದರು. ತಂದೆಯ ಎಲ್ಲಾ ಗುಣಗಳನ್ನು ಅಳವಡಿಸಿಕೊಂಡಿದ್ದರು. ಪುನೀತ್ ನನ್ನನ್ನು ಮಾಮಾ ಎಂದೇ ಕರೆಯುತ್ತಿದ್ದರು. ಅವರು ಹೇಳಿದ್ದಕ್ಕೆ ನಾನು ಮೈಸೂರಿನಲ್ಲಿ ಥಿಯೇಟರ್ಗೆ ಹೋಗಿ ರಾಜಕುಮಾರ ಸಿನಿಮಾ ನೋಡಿದ್ದೆ. ನಟ ಶಿವರಾಮ್ ಅವರ ಕೊಡುಗೆಯೂ ದೊಡ್ಡದಿದೆ. ಅವರ ನೆನಪಿಗೆ ಲೈಬ್ರೆರಿ ಮಾಡಲು ಸಾಧ್ಯವಾಗುತ್ತದಾ ಅಂತಾ ಸರ್ಕಾರ ಯೋಚಿಸಬೇಕು ಎಂದು ಸಲಹೆ ಮಾಡಿದರು.
‘ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಬರಗಾಲ ಬಂದಿದೆ. ಸಿದ್ದರಾಮಯ್ಯ ಮಾತಿನ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ನಾವು ಬಂದ ಮೇಲೆ ರಾಜ್ಯದಲ್ಲಿ ಬರಗಾಲ ಇಲ್ಲ. ಬರೀ ಮಳೆ ಎಂದು ಪ್ರತಿಕ್ರಿಯಿಸಿದರು. ಕಲಾಪವನ್ನು ಮಂಗಳವಾರ (ಡಿ.14) ಬೆಳಿಗ್ಗೆ 11ಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದೂಡಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭ; ವಿಧಾನಸಭೆ ಕಲಾಪ ನೇರ ಪ್ರಸಾರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಖಾಸಗಿ ವಿಧೇಯಕ ಮಂಡನೆಗೆ ನಿರ್ಧಾರ