ಉಡುಪಿ: ರಜಾದಿನ ಬಂದರೆ ಸಾಕು ಹುಡುಗರೆಲ್ಲಾ ಬ್ಯಾಟ್ ಹಿಡಿದುಕೊಂಡು ಕ್ರಿಕೆಟ್ ಆಟದಲ್ಲಿ ದಿನ ಕಳೆಯುತಾರೆ. ಟೂರ್ನಮೆಂಟ್ ಆಯೋಜಿಸಿ, ಅದರಿಂದ ಬಂದ ಹಣವನ್ನು ಸುಮ್ಮನೆ ಪೋಲು ಮಾಡ್ತಾರೆ. ಆದರೆ ಉಡುಪಿಯ ಕ್ರಿಕೆಟ್ ತಂಡದ ಯುವಕರು ಒಂದು ಜೀವ ಉಳಿಸುವುದಕ್ಕೆ ಕ್ರಿಕೆಟ್ ಆಡುತ್ತಾರೆ. ಹೌದು ಉಡುಪಿಯ ಉದ್ಯಾವರದ ಈ ಗೆಳೆಯರ ತಂಡ ಟಿವಿ9 ವಾಹಿನಿಯ ‘ಕಂದನ ಉಳಿಸಿ’ ಅಭಿಯಾನಕ್ಕೆ ಸಹಾಯ ಹಸ್ತ ಚಾಚಿದೆ.
ಸಹಾಯ ಮಾಡುವುದಕ್ಕೆ ಶ್ರೀಮಂತಿಕೆ ಬೇಕು ಎಂದೇನು ಇಲ್ಲ. ಆದರೆ ಮಾನವೀಯತೆಯ ಮನಸ್ಸಿದ್ದರೆ ಸಾಕು. ಎನ್ನುವುದಕ್ಕೆ ಈ ಯುವಕರ ತಂಡವೆ ಸಾಕ್ಷಿ. ಉಡುಪಿಯ ಈ ತಂಡ ಯಾವಾಗಲೇ ಆಡಿದರೂ ಅದಕ್ಕೊಂದು ಸದುದ್ದೇಶ ಇರುತ್ತದೆಂದು ಎಲ್ಲರೂ ಸಹಕಾರ ಮಾಡುತ್ತಾರೆ. ಇವರು ಈ ಬಾರಿ ಆಟ ಅಡಿರುವುದು ಮತ್ತು ಟೂರ್ನಮೆಂಟ್ ಆಯೋಜಿಸಿರುವುದು ಕಂದಮ್ಮನ ಬದುಕಿಗಾಗಿ. ಹೌದು, ಟಿವಿ9 ವಾಹಿನಿ ಹಮ್ಮಿಕೊಂಡಿರುವ ಕಂದನ ಉಳಿಸಿ ಅಭಿಯಾನಕ್ಕೆ ಎಲ್ಲೆಡೆ ಸ್ಪಂದನೆ ದೊರೆಯುತ್ತಿದ್ದು, ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಕಾಯಿಲೆಗೆ ತುತ್ತಾಗಿದ್ದ ಕಂದ ಜನೀಶ್ನ ಬಗ್ಗೆ ನಾವು ಪ್ರಸಾರ ಮಾಡಿದ್ದ ಸುದ್ದಿ ನೋಡಿ ಉಡುಪಿ ಕಟಪಾಡಿಯ ಈ ಸ್ಪೋರ್ಟ್ಸ್ ತಂಡವೂ ಸಹಾಯ ಹಸ್ತ ಚಾಚಿದೆ.
ಕಳೆದ ಅನೇಕ ವರ್ಷಗಳಿಂದ ಕ್ರೀಡೆಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿರುವ ಯುನೈಟೆಡ್ ಫ್ರೆಂಡ್ಸ್ ಯುವಕರ ತಂಡ ನಿತ್ಯ ಕ್ರಿಕೆಟ್ ಆಡುವ ಹವ್ಯಾಸ ಹೊಂದಿದ್ದು, ಸದ್ಯ ಒಂದು ಮಹತ್ತರವಾದ ಆಶಯದಿಂದ ಟೂರ್ನಿಗಳನ್ನು ಆಯೋಜನೆ ಮಾಡಿದ್ದಾರೆ. ಈ ಟೂರ್ನಿಗಳ ಮೂಲಕ ಒಂದಷ್ಟು ಹಣವನ್ನು ಸಂಪಾದನೆ ಮಾಡಿದ್ದು ಟಿವಿ9ನಲ್ಲಿನ ಕಂದಮ್ಮನ ಉಳಿಸಿ ಅಭಿಯಾನದ ಜೊತೆ ಕೈ ಜೋಡಿಸಲು ಮುಂದಾಗಿದ್ದಾರೆ.
ವರದಿ ನೋಡಿದ ಬಳಿಕ ಯುವಕರು ಒಟ್ಟಾಗಿ ಆ ಕಂದಮ್ಮನ ಜೀವ ಉಳಿಸಲು ತಮ್ಮಿಂದಾದ ಸಹಾಯಕ್ಕೆ ಮುಂದಾಗಿದ್ದು, ಒಂದು ಟೂರ್ನಿಯನ್ನು ಆಯೋಜನೆ ಮಾಡಿ ಅದರಿಂದ ಬಂದ ಹಣವನ್ನು ಅಶಕ್ತ ಕಂದಮ್ಮನಿಗೆ ನೀಡಿದೆ.
ಆಟದ ಜೊತೆ ಮಾನವೀಯ ಪಾಠ ತೋರಿದ ಈ ಯುವಕರ ಕಾರ್ಯ ಇನ್ನಷ್ಟು ಸಂಘ ಸಂಸ್ಥೆಗಳಿಗೆ ಮಾದರಿಯಾಗಿದ್ದು, ಒಳ್ಳೆಯ ಕೆಲಸಕ್ಕೆ ಯಾವುದಾದರೂ ಒಂದು ರೂಪದಲ್ಲಿ ಬೆಂಬಲ ದೊರೆಯುತ್ತದೆ ಎನ್ನುವುದಕ್ಕೆ ಇದೇ ಸ್ಪಷ್ಟ ನಿದರ್ಶನ.