ಮೊಬೈಲ್ ಕ್ಲಿನಿಕ್ ಮೂಲಕ ಜನರ ನೆರವಿಗೆ ನಿಂತ ಭಟ್ಕಳದ ಸಂಸ್ಥೆ; ಅನಾರೋಗ್ಯ ಪೀಡಿತರಿಗೆ ಉಚಿತ ಸೇವೆ

| Updated By: preethi shettigar

Updated on: Jun 04, 2021 | 2:47 PM

ಹದಿನೈದು ದಿನಗಳ ಅವಧಿಯಲ್ಲಿ ಸರಿಸುಮಾರು 700ರಷ್ಟು ಜನರಿಗೆ ಮೊಬೈಲ್ ಕ್ಲಿನಿಕ್ ಮೂಲಕ ಚಿಕಿತ್ಸೆಯನ್ನು ಒದಗಿಸಿದ್ದು, ಇವರ ಸೇವೆಗೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಂಜೀಮ್ ಸಂಸ್ಥೆ ಮುಖ್ಯಸ್ಥರು ಅಜೀಜ್ ರುಕ್ನುದ್ದೀನ್ ತಿಳಿಸಿದ್ದಾರೆ.

ಮೊಬೈಲ್ ಕ್ಲಿನಿಕ್ ಮೂಲಕ ಜನರ ನೆರವಿಗೆ ನಿಂತ ಭಟ್ಕಳದ ಸಂಸ್ಥೆ; ಅನಾರೋಗ್ಯ ಪೀಡಿತರಿಗೆ ಉಚಿತ ಸೇವೆ
ಮನೆಗೆ ತೆರಳಿ ಆರೋಗ್ಯ ಸೇವೆ ಒದಗಿಸುತ್ತಿರುವ ಭಟ್ಕಳದ ಸಂಸ್ಥೆ
Follow us on

ಉತ್ತರ ಕನ್ನಡ: ಕೊರೊನಾ ಸಂಕಷ್ಟದಿಂದಾಗಿ ಹಲವೆಡೆ ಜನರು ಜೀವನ ನಡೆಸುವುದಕ್ಕೂ ತೊಂದರೆ ಪಡುವಂತಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ಅನಾರೋಗ್ಯ ಉಂಟಾದರೂ ಸಹ ಆಸ್ಪತ್ರೆಗಳಿಗೆ ತೆರಳುವುದಕ್ಕೂ ಜನರು ಭಯಪಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕೆಲ ಸಂಘ-ಸಂಸ್ಥೆಗಳು ಒಂದಾಗಿ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆಯನ್ನು ಉಚಿತವಾಗಿ ಒದಗಿಸಲು ಮುಂದಾಗಿದ್ದಾರೆ. ಮೊಬೈಲ್ ಕ್ಲಿನಿಕ್ ಮೂಲಕ ವೈದ್ಯರನ್ನೇ ಅನಾರೋಗ್ಯ ಪೀಡಿತರು ಇರುವಲ್ಲಿಗೆ ಕರೆದೊಯ್ಯುತ್ತಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈಗಂತೂ ಕೆಮ್ಮು, ನೆಗಡಿ, ಜ್ವರ ಅಂದರೆ ಸಾಕು ಜನರು ಆತಂಕ ಪಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭ ಸೂಕ್ತ ಸಮಯಕ್ಕೆ ಚಿಕಿತ್ಸೆಯನ್ನು ಪಡೆಯದೇ ಮತ್ತಷ್ಟು ಗಂಭೀರ ಸ್ಥಿತಿಗೆ ತಲುಪುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಜನರ ಮನೆ ಬಾಗಿಲಿಗೆ ವೈದ್ಯಕೀಯ ಸೇವೆಯನ್ನ ಒದಗಿಸಲು ನಿರ್ಧರಿಸಿದ ಭಟ್ಕಳದ ಮಜ್ಲಿಸೆ-ಇಸ್ಲಾಹ್-ತಂಜೀಮ್, ರಾಬಿತಾ ಸೊಸೈಟಿ, ಇಂಡಿಯನ್ ನವಾಯತ್ ಫೋರಂ ಹಾಗೂ ಮುಸ್ಲೀಂ ಯೂಥ್ ಫೆಡರೇಶನ್ ಸಹಯೋಗದಲ್ಲಿ ಮೊಬೈಲ್ ಕ್ಲಿನಿಕ್ ಸೇವೆಯನ್ನು ಪ್ರಾರಂಭಿಸಿದ್ದಾರೆ. ಪಟ್ಟಣದ ವಿವಿಧೆಡೆ ಸಂಚರಿಸುವ ಮೂಲಕ ಕೆಮ್ಮು, ನೆಗಡಿಯಂತಹ ಸಣ್ಣ ಪ್ರಮಾಣದ ಅನಾರೋಗ್ಯಕ್ಕೆ ತುತ್ತಾದವರಿಗೆ ಸ್ಥಳದಲ್ಲಿಯೇ ತಪಾಸಣೆ ನಡೆಸಿ ಅಗತ್ಯ ಔಷಧಗಳನ್ನೂ ಸಹ ಉಚಿತವಾಗಿ ನೀಡುವ ಮೂಲಕ ಸೇವೆಯನ್ನು ನೀಡುತ್ತಿದ್ದಾರೆ.

ಈ ಮೊಬೈಲ್ ಕ್ಲಿನಿಕ್ ಅನ್ನು ಹದಿನೈದು ದಿನಗಳ ಹಿಂದೆ, ಇದರಲ್ಲಿ ಓರ್ವ ವೈದ್ಯ, ಫಾರ್ಮಾಸಿಸ್ಟ್ ಹಾಗೂ ನರ್ಸ್ ಇದ್ದಾರೆ. ಆಕ್ಸಿಮೀಟರ್, ಬಿಪಿ ತಪಾಸಣೆ ಮಾಡುವ ಯಂತ್ರದಂತಹ ಅಗತ್ಯ ಪರಿಕರಗಳನ್ನು ಇದರಲ್ಲಿ ಇರಿಸಿಕೊಳ್ಳಲಾಗಿದ್ದು, ಜೊತೆಗೆ ಔಷಧಗಳನ್ನೂ ಸಹ ಇವರೇ ಕೊಂಡೊಯ್ಯುತ್ತಾರೆ. ಪ್ರತಿನಿತ್ಯ ಬೆಳಿಗ್ಗೆ 11:30 ರಿಂದ 1:30 ಹಾಗೂ ಸಂಜೆ 4:30 ರಿಂದ 7 ಗಂಟೆಯ ವರೆಗೆ ಪಟ್ಟಣದ ವಿವಿಧೆಡೆ ತೆರಳಿ ಅನಾರೋಗ್ಯ ಪೀಡಿತರ ತಪಾಸಣೆಯನ್ನ ನಡೆಸುತ್ತಾರೆ. ಅಲ್ಲದೇ ಮೊಬೈಲ್ ಕ್ಲಿನಿಕ್ ಸೇವೆ ಪಡೆದುಕೊಳ್ಳಲು ಮೊಬೈಲ್ ನಂಬರ್ ನೀಡಿದ್ದು, ಗ್ರಾಮೀಣ ಭಾಗಗಳಿಂದಲೂ ಜನರು ಕರೆ ಮಾಡುತ್ತಿದ್ದಾರೆ.

ಸದ್ಯ ಹದಿನೈದು ದಿನಗಳ ಅವಧಿಯಲ್ಲಿ ಸರಿಸುಮಾರು 700ರಷ್ಟು ಜನರಿಗೆ ಮೊಬೈಲ್ ಕ್ಲಿನಿಕ್ ಮೂಲಕ ಚಿಕಿತ್ಸೆಯನ್ನು ಒದಗಿಸಿದ್ದು, ಇವರ ಸೇವೆಗೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಂಜೀಮ್ ಸಂಸ್ಥೆ ಮುಖ್ಯಸ್ಥರು ಅಜೀಜ್ ರುಕ್ನುದ್ದೀನ್ ತಿಳಿಸಿದ್ದಾರೆ.

ಒಟ್ಟಾರೆ ಕೊರೊನಾ ಆತಂಕದಿಂದಾಗಿ ಜನರು ಆಸ್ಪತ್ರೆಗೂ ತೆರಳಲು ಭಯಪಡುತ್ತಿರುವ ಈ ಸಂದರ್ಭದಲ್ಲಿ ಮೊಬೈಲ್ ಕ್ಲಿನಿಕ್ ಮೂಲಕ ಸೇವೆಯನ್ನು ನೀಡುತ್ತಿರುವ ಈ ಕಾರ್ಯ ನಿಜಕ್ಕೂ ಮಾದರಿ. ಇದೇ ರೀತಿ ಜನರಿಗೆ ಸೇವೆಯನ್ನು ಒದಗಿಸುವ ಮೂಲಕ ಕೊರೊನಾ ಓಡಿಸುವ ಗುರಿಯನ್ನು ಸಹ ಈ ಸಂಸ್ಥೆ ಹೊಂದಿದೆ ಎನ್ನುವುದು ಶ್ಲಾಘನೀಯ.

ಇದನ್ನೂ ಓದಿ:

ಕೊರೊನಾ ಕಾಲದಲ್ಲಿ ಪ್ರಾಣಿಗಳ ನೆರವಿಗೆ ನಿಂತ ಕಾರವಾರದ ಸೇವಾ ಸಂಘ; ಹಸಿದ ಶ್ವಾನಗಳಿಗೆ ಊಟ ನೀಡಿ ಸಹಾಯ

ಸಹಾಯಧನ, ಪಾಲನೆ, ಶಿಕ್ಷಣಕ್ಕೆ ವ್ಯವಸ್ಥೆ; ಕೊರೊನಾದಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಬಾಲಸೇವಾ ಯೋಜನೆ ಘೋಷಣೆ