ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಐಎಎಸ್ ಅಧಿಕಾರಿಗಳ ನಡುವಿನ ಮನಸ್ತಾಪ ಇನ್ನೂ ತಾರಕಕ್ಕೆ ಹೋಗುತ್ತಿರುವಂತೆ ಕಾಣುತ್ತಿದೆ. ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಸುತ್ತೂರು ಶ್ರೀಗಳನ್ನು ಭೇಟಿಮಾಡಿ ಅಳಲು ತೋಡಿಕೊಂಡಿದ್ದಾರೆ. ಸುತ್ತೂರ ಮಠದ ಕಾರ್ಯಕ್ರಮದಲ್ಲಿ ಶ್ರೀಗಳ ಸಮ್ಮುಖದಲ್ಲಿ ವೇದಿಕೆಯಲ್ಲಿ ಅಳಲು ತೋಡಿಕೊಂಡಿದ್ದ ಶಿಲ್ಪನಾಗ್ ಇದೀಗ ಪ್ರತ್ಯೇಕವಾಗಿ ಶ್ರೀಗಳ ಜತೆ ಮಾತುಕತೆ ನಡೆಸುತ್ತಿದ್ದು, ಶ್ರೀಗಳ ಕಚೇರಿಯಲ್ಲಿ ಪ್ರಕರಣದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಮೈಸೂರಿನ ಸದ್ಯದ ಬೆಳವಣಿಗೆ ಬಗ್ಗೆ ಅವರೊಂದಿಗೆ ಸಚಿವ ಎಸ್ಟಿ. ಸೋಮಶೇಖರ್ ಕೂಡಾ ಮಾತುಕತೆ ನಡೆಸಿರುವುದು ತಿಳಿದುಬಂದಿದೆ.
ಇತ್ತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಮ್ಮ ನಡೆ ಸಮರ್ಥಿಸಿಕೊಳ್ಳಲು ದಾಖಲೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಸಿಎಸ್ ಮುಂದೆ ತಮ್ಮ ನಡೆ ಸಮರ್ಥನೆಗೆ ಡಿಸಿ ಸಿದ್ಧವಾಗುತ್ತಿದ್ದು, ಇಂದಿನ ಕೊವಿಡ್ ನಿರ್ವಹಣೆ ಸಭೆಯಲ್ಲಿ ವಿಷಯ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಪಾಲಿಕೆ ಆಯುಕ್ತೆ ಬಳಿ ತಾವು ಉತ್ತರ ಕೇಳಿರುವ ಬಗ್ಗೆ ದಾಖಲೆ ಸಿದ್ಧಪಡಿಸಿಕೊಂಡಿರುವ ಜಿಲ್ಲಾಧಿಕಾರಿ, 2 ಗಂಟೆಗೆ ರಾಜ್ಯ ಉಸ್ತುವಾರಿ ಕಾರ್ಯದರ್ಶಿ ಜತೆ ನಡೆಯಲಿರುವ ಸಭೆಯಲ್ಲಿ ಅವುಗಳನ್ನು ಮುಂದಿಡುವ ಸಾಧ್ಯತೆ ಇದೆ.
ನಾಲ್ವಡಿ ಕೃಷ್ಣರಾಜ ಜಯಂತಿ ಕಾರ್ಯಕ್ರಮದ ಬಳಿಕ ಕಚೇರಿಯಲ್ಲಿ ಉಳಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಭೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಸಭೆ ನಡೆಯಲಿದ್ದು, ಕೊವಿಡ್ ನಿಯಂತ್ರಣದ ಬಗ್ಗೆ ಪರಿಶೀಲನಾ ಸಭೆ ಇದಾಗಿದೆ. ಸಭೆಯಲ್ಲಿ ಅಧಿಕಾರಿಗಳ ಕಿತ್ತಾಟದ ಬಗ್ಗೆ ಚರ್ಚೆ ಸಾಧ್ಯತೆ ಇದ್ದು, ಒಂದು ವೇಳೆ ವಿಚಾರ ಪ್ರಸ್ತಾಪವಾದಲ್ಲಿ ಮುಖ್ಯಕಾರ್ಯದರ್ಶಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂದೂರಿ ವಿವರ ನೀಡಲಿದ್ದಾರೆ. ಈಗಾಗಲೇ ಕೆಲವು ದಾಖಲೆಗಳನ್ನು ಮಾಧ್ಯಮಗಳಿಗೆ ನೀಡಿ ತಮ್ಮನ್ನು ಸಮರ್ಥಿಸಿಕೊಂಡಿರುವ ಜಿಲ್ಲಾಧಿಕಾರಿಗಳು, ಸಭೆಯಲ್ಲಿ ತಮ್ಮ ನಡೆ ಸಮರ್ಥಿಸಿಕೊಳ್ಳಲು ಎಲ್ಲಾ ದಾಖಲೆಗಳನ್ನು ಮುಖ್ಯಕಾರ್ಯದರ್ಶಿಗೆ ನೀಡಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ಐಎಎಸ್ vs ಐಎಎಸ್: ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಆರೋಪಕ್ಕೆ ಡಿಸಿ ರೋಹಿಣಿ ಸಿಂಧೂರಿ ಸ್ಪಷ್ಟನೆ