ರೋಹಿಣಿ ಸಿಂಧೂರಿ ಅಂತಹ ದುರಹಂಕಾರಿ ಜಿಲ್ಲಾಧಿಕಾರಿ ಯಾರಿಗೂ ಸಿಗುವುದು ಬೇಡ -ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಕೆಲಸಕ್ಕೆ ಗುಡ್​ಬೈ

ರೋಹಿಣಿ ಸಿಂಧೂರಿ ಅಂತಹ ದುರಹಂಕಾರಿ ಜಿಲ್ಲಾಧಿಕಾರಿ ಯಾರಿಗೂ ಸಿಗುವುದು ಬೇಡ -ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಕೆಲಸಕ್ಕೆ ಗುಡ್​ಬೈ
ರೋಹಿಣಿ ಸಿಂಧೂರಿ

IAS versus IAS in Mysuru: ಇಂತಹ (ರೋಹಿಣಿ ಸಿಂಧೂರಿ) ದುರಂಹಕಾರಿ ಜಿಲ್ಲಾಧಿಕಾರಿ ಯಾರಿಗೂ ಸಿಗುವುದು ಬೇಡ ಎಂದು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ನೇರವಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಮರ ಸಾರಿದ್ದಾರೆ. ಒಬ್ಬ ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ರೋಹಿಣಿ ಸಿಂಧೂರಿ ವಿರುದ್ಧ ಆಯುಕ್ತೆ ಶಿಲ್ಪಾನಾಗ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

sadhu srinath

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 03, 2021 | 7:16 PM

ಮೈಸೂರು: ಮೈಸೂರಿನಲ್ಲಿ ಜನಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿ ಮಧ್ಯೆ ಬೀದಿ ರಂಪಾಟ ನಡೆಯುತ್ತಿರುವುದು ಮಧ್ಯೆ ಇದೀಗ ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ಐಎಎಸ್ vs ಐಎಎಸ್ ವಾರ್​ ಶುರುವಾಗಿದೆ. ಇಂತಹ (ರೋಹಿಣಿ ಸಿಂಧೂರಿ) ದುರಂಹಕಾರಿ ಜಿಲ್ಲಾಧಿಕಾರಿ ಯಾರಿಗೂ ಸಿಗುವುದು ಬೇಡ ಎಂದು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ನೇರವಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಮರ ಸಾರಿದ್ದಾರೆ. ಒಬ್ಬ ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿಗೆ ತೊಂದರೆ ಕೊಡುವುದು ಸರಿಯಲ್ಲ. ಜಿಲ್ಲಾಧಿಕಾರಿ ನನ್ನ ಮೇಲಿನ ಕೋಪಕ್ಕೆ ಬೇರೆ ಅಧಿಕಾರಿಗಳಿಗೆ ತೊಂದರೆ ಕೊಡುತ್ತಿದ್ದಾರೆ. ಒಬ್ಬ ಅಧಿಕಾರಿಯ ಇಗೋ ದಿಂದಾಗಿ ಪರ್ಸನಲ್‌ ಆಗಿ ಟಾರ್ಗೆಟ್ ಮಾಡಲಾಗಿದೆ. ಎಲ್ಲರಿಗೂ ಒಂದು ಸಹನೆ ಇರುತ್ತದೆ. ಪ್ರತಿದಿನ ನಮ್ಮ ಅಧಿಕಾರಿಗಳನ್ನು ಸಭೆ ಕರೆದು ಅವಮಾನ‌ ಮಾಡಲಾಗುತ್ತಿದೆ ಎಂದು ರೋಹಿಣಿ ಸಿಂಧೂರಿ ವಿರುದ್ಧ ಆಯುಕ್ತೆ ಶಿಲ್ಪಾ ನಾಗ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾದ ಎರಡನೇ ಅಲೆಯ ಕೊನೆಯಲ್ಲಿದ್ದೇವೆ. ನಾನೀಗ ನೋವಿನ ವಿಚಾರದಲ್ಲಿ ಮಾತನಾಡುತ್ತಿದ್ದೇನೆ ಎಂದು ಗದ್ಗದಿತರಾಗಿ ಮಾತು ಆರಂಭಿಸಿದ ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರು ಮೈಸೂರು ಮಹಾನಗರ ಪಾಲಿಕೆ‌ ಮೇಲೆ ಯುದ್ಧ ನಡೆಯುತ್ತಿದೆ. ಅವರಿಂದ ಒಂದು‌ ರೀತಿ ನೋವನ್ನುಂಟು‌ ಮಾಡುವ ಕೆಲಸವಾಗುತ್ತಿದೆ. 2014ರ ಬ್ಯಾಚಿನ ಅಧಿಕಾರಿಯಾಗಿ ಹಲವು ಅಧಿಕಾರಿಗಳ ಜೊತೆ ಕೆಲಸ ಮಾಡುತ್ತಿದ್ದೇನೆ. ಆದರೆ ಈ ರೀತಿ ಅವಮಾನ ಆಗಿರಲಿಲ್ಲ. ಪ್ರತಿ ಅಧಿಕಾರಿಗೂ ಕರೆ ಮಾಡಿ ಅವಮಾನ ಮಾಡುತ್ತಾರೆ. ನನಗೆ ಅಧಿಕಾರಿಯಾಗಿ ಯಾವುದೇ ಕೆಲಸ ಮಾಡಲು ಆಸಕ್ತಿ ಇಲ್ಲದಾಗಿದೆ ಎಂದು ರೋಹಿಣಿ ಸಿಂಧೂರಿ ತಮಗೆ ಕಾಟ ಕೊಡುತ್ತಿರುವುದರ ಬಗ್ಗೆ ಶಿಲ್ಪಾ ನಾಗೇಶ್ ಬಿಡಿಸಿ ಬಿಡಿಸಿ ಹೇಳಿದ್ದಾರೆ.

ಮೈಸೂರಿನಂತಹ ಒಳ್ಳೆಯ ಸಿಟಿಯಲ್ಲಿ ಗಲೀಜು ಎಬ್ಬಿಸುತ್ತಿರುವುದು ನೋವು ತಂದಿದೆ: ಶಿಲ್ಪಾನಾಗ್ ಕಣ್ಣೀರು

Shilpa Nag, IAS

ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್

ಪ್ರತಿದಿನ‌ ಹಿರಿಯ ಅಧಿಕಾರಿಗಳಿಗೆ ಅವಮಾನ ಮಾಡುತ್ತಿದ್ದಾರೆ. ವೈಯಕ್ತಿಕ ದ್ವೇಷ ಇದ್ದರೆ ನನ್ನ ಮೇಲೆ ತೀರಿಸಿಕೊಳ್ಳಲಿ. ಮೈಸೂರು ಜನರ ಮೇಲೆ ತೀರಿಸಿಕೊಳ್ಳಬೇಡಿ. ಇಷ್ಟು‌ ದುರಂಹಕಾರ ಯಾರಿಗೂ ಇರಬಾರದು. ಉಸಿರುಗಟ್ಟುವ ವಾತಾವರಣದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಎಲ್ಲದಕ್ಕೂ ಒಂದು ಸಹನೆ ಇರುತ್ತದೆ. ಸಹೃದಯದ ಜನರಿದ್ದಾರೆ. ಒಳ್ಳೆಯ‌ ಮಾಧ್ಯಮ ಇದೆ. ಸಿವಿಲ್‌ ಸೊಸೈಟಿ ಜನರಿದ್ದಾರೆ. ಇಂತಹ ಒಳ್ಳೆಯ ಸಿಟಿಯಲ್ಲಿ ಗಲೀಜು ಎಬ್ಬಿಸುತ್ತಿರುವುದು ನೋವು ತಂದಿದೆ. ಮೈಸೂರು ಪಾಲಿಕೆ ಆಯುಕ್ತೆಯಾಗಿ ಅಲ್ಲ ಐಎಎಸ್‌ಗೆ ಗುಡ್‌ಬೈ ಹೇಳುತ್ತೇನೆ. ಮೈಸೂರಿನ ಜನರನ್ನು ಬಲಿಪಶು ಮಾಡಬೇಡಿ ಅಷ್ಟೇ ನನ್ನ ಮನವಿ ಎಂದು ಶಿಲ್ಪಾನಾಗ್ ಕಣ್ಣೀರು ಸುರಿಸಿದ್ದಾರೆ.

ಜಿಲ್ಲಾಧಿಕಾರಿ (ರೋಹಿಣಿ ಸಿಂಧೂರಿ) ಜಾತಿ ವಿಚಾರವಾಗಿಯೂ ನನ್ನ ಬಗ್ಗೆ ಮಾತನಾಡಿದ್ದಾರೆ. ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ನನಗೆ ನಿರಂತರವಾಗಿ ಅವಮಾನ ಮಾಡಿದ್ದಾರೆ. ನಾನು ಪ್ರೆಸ್ ಮೀಟ್ ಕರೆದಿರುವುದನ್ನು ಏಕೆ ಅಂತಾ ಎಲ್ಲರ ಬಳಿ ಕೇಳಿದ್ದಾರೆ. ಏಕೆ ಈ ರೀತಿ ಭಯ ಅವರಿಗೆ. ನಾನು ಐಎಎಸ್ ಅಧಿಕಾರಿಯಾದಾಗ ಒಂದು ಮೌಲ್ಯದೊಂದಿಗೆ ಬಂದಿದ್ದೇನೆ. ನಾನು‌ ಕರ್ನಾಟಕದವಳೇ. ನಾನು ಯಾರ ಶಿಫಾರಸ್ಸಿನಿಂದಲೂ ಬಂದಿಲ್ಲ. ಸೌಮ್ಯ ಸ್ವಭಾವದಿಂದ ನಡೆದುಕೊಂಡರೂ ಅವಮಾನ ಮಾಡಿದ್ದಾರೆ. ಅಧಿಕಾರಿಗಳು ಮತ್ತು ಪಾಲಿಕೆ ಸದಸ್ಯರು ಯಾವುದಕ್ಕೂ ಸೋಲಬೇಡಿ. ಜಿಲ್ಲಾಧಿಕಾರಿಯವರೇ ನಿಮ್ಮ ಚೀಪ್ ಮೆಂಟಾಲಿಟಿ ಸರಿ ಮಾಡಿಕೊಳ್ಳಿ. ಇಲ್ಲ ಮೈಸೂರು ಬಿಟ್ಟು ತೊಲಗಿ ಎಂದೂ ಶಿಲ್ಪಾನಾಗ್ ಅವರು ರೋಹಿಣಿ ಸಿಂಧೂರಿ ವಿರುದ್ಧ ಗುಡುಗಿದ್ದಾರೆ.

ನಾನು ಮಧ್ಯಮ ವರ್ಗದಿಂದ ಬಂದವಳೆ. ಐಎಎಸ್ ಮಾಡುವುದು ಸುಲಭವಲ್ಲ. ಚೀಪ್ ಲೆವೆಲ್‌ಗೆ ಇಳಿದಾಗ ಅದೇ ಚೀಪ್ ಲೆವೆಲ್‌ಗೆ ಹೋಗಿ ಫೈಟ್ ಮಾಡಲು ಆಗುವುದಿಲ್ಲ. ಹಾಗಾಗಿ ಐಎಎಸ್ ಕೆಲಸಕ್ಕೆ ರಾಜೀನಾಮೆ ನೀಡುತ್ತಿರುವೆ ಎಂದು ಶಿಲ್ಪಾನಾಗ್ ಇದೇ ವೇಳೆ ಪ್ರಕಟಿಸಿದರು.

ಜನಪ್ರತಿನಿಧಿಗಳು ಯಾವುದೇ ಕಾನೂನು ಬಾಹಿರ ಆದೇಶ ಕೊಟ್ಟಿಲ್ಲ:

ಸರ್ಕಾರಿ ಆಸ್ಪತ್ರೆಗೆ ಹೋದರೆ ಸರಿಯಾದ ಔಷಧ ಇಲ್ಲ. ಸಿಎಸ್‌ಆರ್ ಮೂಲಕ ಕೆಲಸ ಮಾಡುತ್ತಿದ್ದೆವು. ಅದಕ್ಕೆ ಬ್ರೇಕ್ ಹಾಕುವ ಕೆಲಸ‌ ಮಾಡುತ್ತಿದ್ದಾರೆ. ಅವರು (ರೋಹಿಣಿ ಸಿಂಧೂರಿ) ಹಠ, ಹಗೆ ಏಕೆ ಸಾಧಿಸುತ್ತಿದ್ದಾರೆ ಗೊತ್ತಿಲ್ಲ. ಟಾರ್ಗೆಟ್ ಮಾಡಿ ಬಲಿಪಶು ಮಾಡುವುದನ್ನು ಮಾಡುತ್ತಿದ್ದಾರೆ. ಅವರಿಗೆ ಸದಾ ಗೌರವ ಕೊಟ್ಟಿದ್ದೇನೆ. ನಗರದಲ್ಲಿ ಚೆನ್ನಾಗಿ ಕೆಲಸ ಆಗಿದೆ ಅಂತಾ ಅಸೂಯೆ ಆಗಿದ್ದರೆ ಅದು ನನಗೆ ಗೊತ್ತಿಲ್ಲ. ನಾನು ಹೇಳುವುದು ಇಷ್ಟೇ ಜನಪ್ರತಿನಿಧಿಗಳು ಯಾವುದೇ ಕಾನೂನು ಬಾಹಿರ ಆದೇಶ ಕೊಟ್ಟಿಲ್ಲ. ಬೇರೆ ಎಲ್ಲಾ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ರಾಜೀನಾಮೆ ನೀಡಿ ಬೇರೆ ನನ್ನ ಜೀವನ ನೋಡಿಕೊಳ್ಳುತ್ತೇನೆ. ಮೂರನೇ ಅಲೆಗೂ ನಾವು ಸಿದ್ದತೆ ಮಾಡಿಕೊಳ್ಳುತ್ತಿದ್ದೆವು. ಆದರೆ ಏಕೆ ಈ ರೀತಿ ಬಂದು ನಿಂತಿದೆ ಗೊತ್ತಿಲ್ಲ. ನಾನು ಬಿಟ್ಟು ಹೋದರೆ ಸರಿಯಾಗಬಹುದು ಅಂತಾ ಹೋಗುತ್ತಿದ್ದೇನೆ. ಸೀನಿಯರ್ ಅಧಿಕಾರಿಗಳಿಗೆ ಚೀಪ್ ಆಗಿ ಮಾತನಾಡುವುದು. ಹೋಗು ಬಾ ಅಂತಾ ಅವಮಾನ ಮಾಡುವುದು. ಸುಮ್ಮನೆ ನಾನಸೆನ್ಸ್ ಟಾಕ್ ಮಾಡಿಕೊಂಡು, ನಾನೇ ಸುಪ್ರೀಂ, ನಾನೇ ಜಿಲ್ಲಾಧಿಕಾರಿ ಅಂದುಕೊಂಡಿದ್ದಾರೆ ಅವರು (ರೋಹಿಣಿ ಸಿಂಧೂರಿ) ಎಂದು ಶಿಲ್ಪಾ ನಾಗ್ ತಮ್ಮ​ ಅಸಮಾಧಾನ ಹೊರಹಾಕಿದ್ದಾರೆ.

ಜಿಲ್ಲಾಧಿಕಾರಿ ರೋಹಿಣಿ ವಿರುದ್ಧ ಐಎಎಸ್ ಶಿಲ್ಪಾನಾಗ್ ಸಿಟ್ಟಿಗೆ ಕಾರಣವೇನು:

ಮೇ 31 ರಂದು ವಾರ್ಡ್ ಮಟ್ಟದ ಮಾಹಿತಿ ಈ ರೀತಿ ಇದೆ. ಎರಡು ವಾರ್ಡ್ ಮಾತ್ರ ರೆಡ್ ಜೋನ್‌ನಲ್ಲಿದೆ. ಜೂನ್ 1 ರಂದು ಮೈಸೂರಿನ ಎಲ್ಲಾ ವಾರ್ಡ್‌ಗಳಲ್ಲು ರೆಡ್ ಎಂದು ಜಿಲ್ಲಾಧಿಕಾರಿಯವರಿಂದ ಮಾಹಿತಿ ನೀಡಲಾಗಿದೆ. ಆದರೆ ಅದು ಸರಿಯಿಲ್ಲ.. ಮಾಹಿತಿ ಬೇರೆ ಇದೆ. ಮೈಸೂರು ಮಹಾನಗರ ಪಾಲಿಕೆ ಆಯುಕ್ತರು, ಪಾಲಿಕೆಯ ಸದಸ್ಯರು ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದು ಬಿಂಬಿಸುವ, ಬಣ್ಣ ಹಚ್ಚುವ ಕೆಲಸ ಜಿಲ್ಲಾಧಿಕಾರಿಗಳಿಂದ ನಡೆಯುತ್ತಿದೆ. ಇದರಿಂದ ನಮಗೆ ತುಂಬಾ ಬೇಜಾರಾಗಿದೆ. ಕೋವಿಡ್ ಮಿತ್ರ ಮೈಸೂರು ಮಹಾನಗರ ಪಾಲಿಕೆಯ ಕಾರ್ಯಕ್ರಮ. ಸಾರ್ವಜನಿಕರ ಸಹಕಾರದೊಂದಿಗೆ ಇದನ್ನು ಮಾಡಲಾಗಿದೆ. ಜಿಲ್ಲಾಡಳಿತದಿಂದ ಒಂದು ಮಾತ್ರೆ ಸಹಾ ಕೊಟ್ಟಿಲ್ಲ. ಎಲ್ಲವೂ ಪಾಲಿಕೆಯಿಂದಲೇ ಇದನ್ನು ಮಾಡಲಾಗಿದೆ ಎಂದು ಆಯುಕ್ತೆ ಶಿಲ್ಪಾನಾಗ್ ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದ್ದಾರೆ.

ಇನ್ನು ಕೋವಿಡ್ ಸೆಂಟರ್‌ ಮಾಡಿಲ್ಲ ಅನ್ನೋ ಆರೋಪ. ಆದರೆ 1500 ಕ್ಕೂ ಹೆಚ್ಚು ಬೆಡ್‌ಗಳ ಕೋವಿಡ್ ಸೆಂಟರ್ ಮಾಡಲಾಗಿದೆ. ಜಿಲ್ಲಾಡಳಿತದಿಂದ ಯಾವುದೇ ಸಹಕಾರ ನೀಡಿಲ್ಲ. ಯಾವುದೇ ಮಾತ್ರೆ, ಔಷಧಿಯನ್ನೂ ನೀಡಿಲ್ಲ. ಎಇಇ ಅವರನ್ನು ಅಮಾನತಿನಲ್ಲಿಡಲು ಹುನ್ನಾರ‌ ನಡೆಸಲಾಗುತ್ತಿದೆ. ಅವರು ತಮ್ಮ ಕಡೆಯವರು ಸಾವನ್ನಪ್ಪಿದಾಗಲೂ ಕೆಲಸ ಮಾಡಿದ್ದಾರೆ. 3 ಸಾವಿರ ಕಿಟ್ ರಘುಲಾಲ್ ಅವರು ನೀಡಿದ್ದರು. ಟಾಸ್ಕ್‌ಪೋರ್ಸ್‌ಗೆ ಕಿಟ್ ಅನ್ನು‌ ನೀಡಲಾಗಿತ್ತು. ಪೊಲೀಸರನ್ನು ಕಳುಹಿಸಿ ಇದನ್ನು ವಶಕ್ಕೆ ಪಡೆದಿದ್ದಾರೆ. ಒಬ್ಬ ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಶಿಲ್ಪಾ ನಾಗ್​ ಜಿಲ್ಲಾಧಿಕಾರಿ ವಿರುದ್ಧ ನೇರ ಆರೋಪ ಮಾಡಿದ್ದಾರೆ.

(ias versus ias in mysuru dc rohini sindhuri versus corporation commissioner shilpa nag)

Follow us on

Related Stories

Most Read Stories

Click on your DTH Provider to Add TV9 Kannada