ಕಾರವಾರ, (ಮೇ 26): ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸುಂದರ ಯುವತಿಯರ ಸ್ನೇಹ ಗಿಟ್ಟಿಸಿಕೊಂಡು ಅವರೊಂದಿಗೆ ಪ್ರೀತಿಯ ನಾಟಕವಾಡಿ ಫೋಟೋ ತೆಗೆಸಿಕೊಂಡು ಅವುಗಳನ್ನು ಅಶ್ಲೀಲವೆಂಬಂತೆ ಎಡಿಟ್ ಮಾಡಿ ಬೆದರಿಸಿ ಅತ್ಯಾಚಾರವೆಸಗುತ್ತಿದ್ದ ಕಾಮುಕರ ಗುಂಪಿನ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಆರೋಪಿಗಳನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಮೂವರು ಪೊಲೀಸರಿಗೆ ಗಾಯಗಳಾಗಿವೆ.
ಅತ್ಯಾಚಾರ, ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅರ್ಜುನ್ ಅಲಿಯಾಸ್ ಅರುಣ ಲಕ್ಷ್ಮಣ ಗೌಡ (27) ಎನ್ನುವಾತನನ್ನು ಬಂಧಿಸಲು ವಾರೆಂಟ್ನೊಂದಿಗೆ ಹೋಗಿದ್ದ ಮೂವರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮಳಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಯ ತಾಯಿ ನಾಗವೇಣಿ ಲಕ್ಷ್ಮಣ ಗೌಡ (50) ಹಾಗೂ ಸಂಬಂಧಿ ಬಾಲಚಂದ್ರ ಗೌಡ (42) ಎಂಬುವರು ಪೊಲೀಸರ ಮೇಲೆಯೇ ಕಲ್ಲು ತೂಡಿದ್ದಾರೆ. ಕಲ್ಲು ಹಾಗೂ ಹೆಂಚು ತುಂಡುಗಳ ದಾಳಿಯಿಂದ ಬನವಾಸಿ ಪೊಲೀಸ್ ಠಾಣೆಯ ಜಗದೀಶ ಕೆ., ಮಂಜಪ್ಪ ಪಿ. ಮಂಜುನಾಥ ಡಿ. ನಡುವಿನಮನೆ ಎಂಬವರಿಗೆ ಗಾಯಗಳಾಗಿವೆ.
ಇನ್ನು ಕಲ್ಲು ತೂರಿದ ಆರೋಪಿಯ ಸಂಬಂಧಿ ಬಾಲಚಂದ್ರ ಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಆದ್ರೆ, ಆರೋಪಿ ತಾಯಿ ನಾಗವೇಣಿ ಲಕ್ಷ್ಮಣಗೌಡ ಪರಾರಿಯಾಗಿದ್ದಾಳೆ. ಇನ್ನು ಪೊಲೀಸರು ಬಂಧಿಸಲು ಬಂದಾಗ ಕಲ್ಲು ತೂರಿದ್ದ ಆರೋಪಿ ನಂತರ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಪೊಲೀಸರು ಆರೋಪಿ ಅರ್ಜುನ್ ಅಲಿಯಾನ್ ಅರುಣ್ ಗೌಡನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಈ ಬಗ್ಗೆ ಶಿರಸಿ ಗ್ರಾಮೀಣ ಪೊಲಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಅರ್ಜುನ್ ಅಲಿಯಾಸ್ ಅರುಣ ಲಕ್ಷ್ಮಣ ಗೌಡ (27) ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ಹೊಂದಿರುವ ಕರಾವಳಿ ಮೂಲದ ಸುಂದರ ಯುವತಿಯರ ಜೊತೆಗೆ ಚಾಟ್ ಮಾಡುತ್ತಾ ಅವರನ್ನು ಪಟಾಯಿಸುತ್ತಿದ್ದ. ಕೆಲವು ದಿನ ಯುವತಿಯರೊಂದಿಗೆ ಚಾಟ್ ಮಾಡುತ್ತಾ ಅವರ ಮೊಬೈಲ್ ನಂಬರ್ ಪಡೆದು ವಿಡಿಯೋ ಕಾಲ್ ಮಾಡುತ್ತಾ ಆತ್ಮೀಯತೆ ಬೆಳೆಸಿಕೊಂಡು ಪ್ರೀತಿಯ ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಯುವತಿಯರೊಂದಿಗೆ ಖಾಸಗಿ ಫೋಟೋ ತೆಗೆದುಕೊಂಡರೆ, ಇನ್ನು ಕೆಲವರ ಸಾಮಾನ್ಯ ಫೋಟೋ ತೆಗೆದುಕೊಳ್ಳುತ್ತಿದ್ದ.
ನಂತರ ಅಶ್ಲೀಲವಾಗಿ ಎಡಿಟ್ ಮಾಡಿ ಅವುಗಳನ್ನು ಯುವತಿಯರಿಗೆ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಇದೀಗ ಕೊನೆಗೂ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:45 pm, Sun, 26 May 24