ದೀಪಾವಳಿ ಹಬ್ಬದಂದು ಕುಮಟಾದಲ್ಲಿ ವಿಶಿಷ್ಟ ಹೊಂಡೆಯಾಟ; ಇಲ್ಲಿದೆ ಅದರ ಝಲಕ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 15, 2023 | 2:51 PM

ಹಿಂದೂಗಳ ಪವಿತ್ರ ಹಬ್ಬದಲ್ಲಿ ಒಂದಾಗಿರುವ ದೀಪಗಳ ಹಬ್ಬವು, ಅನೇಕ ಧಾರ್ಮಿಕ ಆಚರಣೆಗಳನ್ನು ಒಳಗೊಂಡಿರುವ ವಿಶೇಷ ಹಬ್ಬವಾಗಿದೆ. ಎಲ್ಲೆಡೆ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ದೀಪಾವಳಿಯ ವೇಳೆ ಆಡಲ್ಪಡುವ ಮನರಂಜನಾ ಆಟಗಳಲ್ಲಿ ಹೊಂಡೆಯಾಟವು ಒಂದಾಗಿದ್ದು, ಈ ಆಟದಲ್ಲಿ ಎರಡು ದಿನಗಳ‌ ಕಾಲ ಒಬ್ಬರಿಗೊಬ್ಬರು ಪರಸ್ಪರ ಪಪ್ಪಾಯಿಂದ ಹೊಡೆದಾಡುಕೊಳ್ಳತ್ತಾರೆ. ಅರೇ ಇದೇ‌ನಪ್ಪಾ ಪಪ್ಪಾಯಿಯಲ್ಲಿ ಹೊಡೆದಾಟ ಅಂತೀರಾ? ಇಲ್ಲಿದೆ ನೋಡಿ.

ಉತ್ತರ ಕನ್ನಡ, ನ.15: ಜಿಲ್ಲೆಯ ಕುಮಟಾ(Kumta) ಪಟ್ಟದಲ್ಲಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಹೊಂಡೆಯಾಟ(Hondeyata) ಇಂದಿಗೂ ಜೀವಂತವಾಗಿದೆ. ದೀಪಾವಳಿಯ ಕೊನೆಯ 2 ದಿನಗಳು ಬಹುತೇಕ ಎಲ್ಲ ಸಮಾಜದವರು ಸಾಂಪ್ರದಾಯಿಕ ಪಪ್ಪಾಯಿ ಹೊಂಡೆಯಾಟ ಆಡುತ್ತಾರೆ. ನಾಮಧಾರಿ, ಕೋಮಾರಪಂತ, ಹಾಲಕ್ಕಿ ಗೌಡ ಸಮುದಾಯದ ಯುವಕರು ಹೊಂಡೆಯಾಟದಲ್ಲಿ ತೊಡಗಿಕೊಳ್ಳುವುದು ವಿಶೇಷ. ದೇವರಹಕ್ಕಲದ ಶಾಂತಿಕಾ ಪರಮೇಶ್ವರಿ ದೇವಸ್ಥಾನದಿಂದ ಆರಂಭವಾಗುವ ಹೊಂಡೆಯಾಟ ಸುಭಾಸ ರಸ್ತೆ ಮಾರ್ಗವಾಗಿ ಪಿಕಪ್ ಬಸ್ಟ್ಯಾಂಡ್ ತಲುಪುತ್ತದೆ. ಅಲ್ಲಿ ಶಶಿಹಿತ್ತಲ-ಗುಂದಾ ಕಡೆಯಿಂದ ಬಂದ ಕೋಮಾರಪಂತ ಸಮುದಾಯದ ಯುವಕರು, ಒಟ್ಟಿಗೆ ಸೇರಿಕೊಂಡು ಹೊಂಡೆಯಾಡುತ್ತಾರೆ. ಅಲ್ಲಿಂದ ರಥಬೀದಿ, ಮೂರುಕಟ್ಟೆ ಮಾರ್ಗವಾಗಿ ತೆರಳುವಾಗ ಹಾಲಕ್ಕಿ ಮತ್ತು ಮುಕ್ತಿ ಸಮಾಜದ ನಂತರ ಈ ಹೊಂಡೆಯಾಟ ಗಿಬ್ ಸರ್ಕಲ್ಲಿನ ಹುಲಿದೇವರ ಕಟ್ಟೆಯಲ್ಲಿ ಕೊನೆಗೊಳ್ಳುತ್ತದೆ.

ಈ ಹಿಂದೆ ಕಲ್ಲಿನಿಂದ ಹೊಂಡೆಯಾಟ

ಈ ಹಿಂದೆ ಕಲ್ಲಿನಿಂದ ಹೊಂಡೆಯಾಡುವ ಪದ್ಧತಿ ಇತ್ತು. ಕಲ್ಲಿನ ಹೊಡೆತಕ್ಕೆ ಕೆಲವರು ಪ್ರಾಣ ಕಳೆದುಕೊಳ್ಳುತ್ತಿದ್ದರಿಂದ ಅಂದಿನ ಬ್ರಿಟಿಷ್ ಸರ್ಕಾರ ಈ ಅನಿಷ್ಟ ಪದ್ಧತಿಯನ್ನು ನಿಷೇಧಿಸಿತ್ತು. ಬಳಿಕ ತೆಂಗಿನಕಾಯಿಯಿಂದ ಹೊಂಡೆಯಾಟ ನಡೆಯುತ್ತಿತ್ತು. ಕಾಲ ಕಳೆದಂತೆ ಈಗ ಪಪ್ಪಾಯಿ ಬಳಸಿಕೊಂಡು ಹೊಂಡೆಯಾಡುವ ಪದ್ಧತಿ ಶುರುವಾಗಿದೆ. ಇಂದಿನ ಆಧುನಿಕ ‌ಯುಗದಲ್ಲಿಯೂ ಕೂಡ ಪ್ರಚಲಿತದಲ್ಲಿರುವುದು ಒಂದು ವಿಶೇಷವಾಗಿದೆ.

ಇದನ್ನೂ ಓದಿ:ತಾಂಡದಲ್ಲಿ ದೀಪಾವಳಿ ಸಂಭ್ರಮ;ಬೆಟ್ಟಹತ್ತಿ ಹೂ ತಂದು ದೇವಸ್ಥಾನದ ಎದುರು ನೃತ್ಯ

ಇನ್ನು ಈ ಹೊಂಡೆಯಾಟವನ್ನು ನೋಡಲು ನೂರಾರು ಜನರು ಸೇರುತ್ತಾರೆ. ಆಟಗಾರರಿಗೆ ಚಪ್ಪಾಳೆ ತಟ್ಟಿ ಪ್ರೊತ್ಸಾಹಿಸುತ್ತಾರೆ. ಕವಣೆಯಲ್ಲಿ ಪಪ್ಪಾಯಿಯನ್ನು ಇಟ್ಟು, ಕೈಯಲ್ಲಿ ಕಂಬಳಿ ಸುತ್ತಿಕೊಂಡು ಕುಳಿತ ವ್ಯಕ್ತಿಗೆ ಹೊಡೆಯುವಾಗ ಹೊಡೆತವನ್ನು ಕುಳಿತ ವ್ಯಕ್ತಿಯು ತಪ್ಪಿಸಿಕೊಳ್ಳಬೇಕಾಗುತ್ತದೆ. ಒಮ್ಮೊಮ್ಮೆ ಈ ಹೊಡೆತದಿಂದ ಪೆಟ್ಟು ತಗಲುವುದು ಸಾಮಾನ್ಯವಾಗಿರುತ್ತದೆ. ಈ ಪಪ್ಪಾಯಿ ಕವಣೆಯಲ್ಲಿ ಸುತ್ತಿಕೊಂಡು ರಭಸದಿಂದ ಹೊಡೆಯುವಾಗ ಆ ಪಪ್ಪಾಯಿ ಸಿಡಿದು ಜನರಿಗೆ ತಗುಲಿದಾಗ, ನೆರೆದ ಜನರು ಕೂಹು ಹೊಡೆದು ರಂಜಿಸುತ್ತಾರೆ. ಉಪ್ಪಿನ ಗಣಪತಿ, ದೇವರಹಕ್ಕಲ, ಚಿತ್ರಿಗಿ, ನೆಲ್ಲಿಕೇರಿ ಹಳೆ ಬಸ್ ನಿಲ್ದಾಣ, ಶಶಿಹಿತ್ತಲ-ಗುಂದಾ, ಬಸ್ತಿಪೇಟೆ, ಉಪ್ಪಾರಕೇರಿ, ಹಳಕಾರ ಸೇರಿದಂತೆ ಪಟ್ಟಣದ ವಿವಿಧ ಕಡೆಯ ಜನರು ಕೂಡ ಆಟದಲ್ಲಿ ತೊಡಗಿಕೊಳ್ಳುತ್ತಾರೆ.‌

ಹೀಗೆ ಒಬ್ಬರ ನಂತರ ಇನ್ನೊಬ್ಬರು ಸರದಿಯಂತೆ ಕಾಯಿ ಪಪ್ಪಾಯಿಂದ ಹೊಡೆಯುತ್ತಾ ಸಾಗುತ್ತಾರೆ. ದೀಪಾವಳಿ ಸಂದರ್ಭದಲ್ಲಿ ಕುಮಟಾದಲ್ಲಿ ಮಾತ್ರ ವಿಶೇಷವಾಗಿ ಕಂಡುಬರುವ ಪಪ್ಪಾಯಿ ಹೊಂಡೆಯಾಟ ಸಾರ್ವಜನಿಕರು ರೋಮಾಂಚನಗೊಳ್ಳುವಂತೆ ಮಾಡುತ್ತದೆ. ಒಟ್ಟಾರೆಯಾಗಿ ಇಂದಿನ ಆಧುನಿಕ ಯುಗದಲ್ಲಿಯೂ ಸಹ ನೂರಾರು ವರ್ಷಗಳಿಂದ ದೀಪಾವಳಿ ಹಬ್ಬದಲ್ಲಿ ಆಚರಿಸಿಕೊಂಡು ಬರಲಾಗುತ್ತಿರುವ. ಸ್ನೇಹದ ಸಂಕೇತವಾಗಿರುವ ಈ‌ ಹೊಂಡೆ‌ ಆಟವನ್ನು ಇದೀಗ ಯುವ ಪೀಳಿಗೆ ಮುಂದುವರೆಸಿಕೊಂಡು ಬರುತ್ತಿದ್ದು, ನಿಜಕ್ಕೂ ಸಂತೋಷ ಸಂಗತಿ. ಇದೇ‌ ರೀತಿ ಮುಂದೇಯು ಸಹ ಇಂತಹ ಆಚರಣೆಗಳು ನಡೆಯತ್ತಿರಲಿ ಎನ್ನುವುದು ಎಲ್ಲರ ಆಶಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ