ಅಧಿಕಾರಿ ಮನಪರಿವರ್ತನೆಗೆ ಅರ್ಜಿದಾರರ ಪರವಾಗಿ ಭಿಕ್ಷೆ ಬೇಡಿ ಲಂಚ ನೀಡಲು ಮುಂದಾದ ಯುವಕ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 26, 2021 | 9:52 PM

ಭ್ರಷ್ಟಾಚಾರ ಕುರಿತು ಹೋರಾಟ ಮಾಡುವುದಕ್ಕಿಂತ ಅಧಿಕಾರಿಗಳ ಮನಪರಿವರ್ತನೆ ಮಾಡುವುದು ಮುಖ್ಯ ಎಂದು ಭಾವಿಸಿ ಜನರಿಂದ ಭಿಕ್ಷೆ ಬೇಡಿ ಅಧಿಕಾರಿಯ ಬೇಡಿಕೆ ಪೂರೈಸಲು ನಿರ್ಧರಿಸಿದೆ ಎಂದು ಅವರು ಹೇಳಿದರು.

ಅಧಿಕಾರಿ ಮನಪರಿವರ್ತನೆಗೆ  ಅರ್ಜಿದಾರರ ಪರವಾಗಿ ಭಿಕ್ಷೆ ಬೇಡಿ ಲಂಚ ನೀಡಲು ಮುಂದಾದ ಯುವಕ
ಉತ್ತರ ಕನ್ನಡ ಜಿಲ್ಲಾಡಳಿತದ ಆದೇಶದ ಅನ್ವಯ ಸರ್ಕಾರಿ ಕಚೇರಿಗಳಲ್ಲಿ ಸಿಸಿ ಟಿವಿ ಕಡ್ಡಾಯಗೊಳಿಸುವಂತೆ ಕೋರಿ ಅಚ್ಯುತಕುಮಾರ ಯಲ್ಲಾಪುರದ ತಹಶೀಲ್ದಾರ್ ಶ್ರೀಕೃಷ್ಣ ಕಾಮೇಕರ್ ಅವರಿಗೆ ಮನವಿ ಮಾಡಿದರು.
Follow us on

ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ): ಸಾರ್ವಜನಿಕರ ಕೆಲಸ ಮಾಡಿಕೊಡಲು ಲಂಚ ಬಯಸಿದ ಅಧಿಕಾರಿಯ ಮನಪರಿವರ್ತನೆ ಮಾಡುವುದಕ್ಕಾಗಿ ವ್ಯಕ್ತಿಯೊಬ್ಬರು ಜನರಿಂದ ಭಿಕ್ಷೆ ಬೇಡಿ ಹಣ ನೀಡಲು ಮುಂದಾದ ಘಟನೆ ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ನಡೆದಿದೆ.

ತಟಗಾರ ಗ್ರಾಮದ ಸರ್ವೆ ನಂ 12ರಲ್ಲಿನ ಕ್ಷೇತ್ರವನ್ನು ಉಪ ನೋಂದಣಾಧಿಕಾರಿ ಕಚೇರಿ ಮೂಲಕ ಗಜಾನನ ಭಟ್ಟ ಹಾಗೂ ನಾರಾಯಣ ಭಟ್ಟ ಎಂಬ ಸಹೋದರರಿಬ್ಬರು ವಿಭಾಗ ಮಾಡಿಕೊಂಡಿದ್ದರು. ಇದನ್ನು ಪಹಣಿ ಪತ್ರಿಕೆಯಲ್ಲಿ ದಾಖಲು ಮಾಡಲು ಕಂದಾಯ ಇಲಾಖೆ ಅಧಿಕಾರಿಯೊಬ್ಬರು 2 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಗಜಾನನ ಭಟ್ಟ ಅವರ ಪುತ್ರ ಅಚ್ಯುತಕುಮಾರ ಎಂಬುವವರು ಮಂಗಳವಾರ ಸಾರ್ವಜನಿಕರಿಂದ ಭಿಕ್ಷೆ ಬೇಡಿ ಅಧಿಕಾರಿಗೆ ಅವರು ಬಯಸಿದ ಹಣ ನೀಡಲು ಮುಂದಾದರು.

ಭ್ರಷ್ಟಾಚಾರ ಕುರಿತು ಹೋರಾಟ ಮಾಡುವುದಕ್ಕಿಂತ ಮೊದಲು ಅಧಿಕಾರಿಗಳ ಮನಪರಿವರ್ತನೆ ಮಾಡುವುದು ಮುಖ್ಯ ಎಂದು ಭಾವಿಸಿ ಜನರಿಂದ ಭಿಕ್ಷೆ ಬೇಡಿ ಅಧಿಕಾರಿಯ ಬೇಡಿಕೆ ಪೂರೈಸಲು ನಿರ್ಧರಿಸಿದೆ ಎಂದು ಅಚ್ಯುತಕುಮಾರ ಈ ವೇಳೆ ತಿಳಿಸಿದರು. ಅಚ್ಯುತಕುಮಾರ ಅವರು ಸರ್ಕಾರಿ ಕಚೇರಿಗಳಲ್ಲಿ ಸಿಸಿ ಟಿವಿ ಕಡ್ಡಾಯ ಮಾಡಬೇಕು ಎಂದು ಮೂರು ವರ್ಷದ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದರು. ಜಿಲ್ಲಾಡಳಿತ ಆ ವೇಳೆ ಸರ್ಕಾರಿ ಕಚೇರಿಗಳಲ್ಲಿ ಸಿಸಿ ಟಿವಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಆದರೆ, ಎಲ್ಲ ಕಚೇರಿಗಳಲ್ಲಿ ಆ ಆದೇಶ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ.

ಈ ಆದೇಶದ ಅನ್ವಯ ಯಲ್ಲಾಪುರದ ತಹಶೀಲ್ದಾರ್ ಕಚೇರಿಯ ಎಲ್ಲಡೆ ಸಿಸಿ ಟಿವಿ ಅಳವಡಿಸುವಂತೆ ಅವರು ತಹಶೀಲ್ದಾರ್ ಶ್ರೀಕೃಷ್ಣ ಕಾಮೇಕರ್ ಅವರಿಗೆ ಮನವಿ ಮಾಡಿದರು. ತಹಶೀಲ್ದಾರ್ ಶ್ರೀಕೃಷ್ಣ ಕಾಮೇಕರ್ ಅವರು ಮನವಿಗೆ ಪೂರಕವಾಗಿ ಸ್ಪಂದಿಸಿದರು.

ಭ್ರಷ್ಟಾಚಾರ ತಡೆಗೆ ಸರ್ಕಾರಿ ಕಚೇರಿಯ ಎಲ್ಲಡೆ ಸಿ.ಸಿ ಟಿವಿ ಕಡ್ಡಾಯ ಆಗಬೇಕು. ಈ ಕುರಿತು ಜಿಲ್ಲಾಡಳಿತ ಆದೇಶ ಹೊರಡಿಸಿದ್ದರೂ ಪಾಲನೆಯಾಗಿಲ್ಲ. ಪ್ರಸ್ತುತ ಜನರಿಂದ ಸ್ವೀಕೃತವಾದ 136 ರೂಪಾಯಿಯನ್ನು ಜಿಲ್ಲಾಧಿಕಾರಿ ಅಧೀನದಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪೃಕೃತಿ ವಿಕೋಪ ನಿಧಿಗೆ ನೀಡಲಾಗುವುದು ಎಂದು ಅಚ್ಯುತಕುಮಾರ ಹೇಳಿದರು.

ಇದನ್ನೂ ಓದಿ: Uttara Kannada Flood: ಉತ್ತರ ಕನ್ನಡ ಪ್ರವಾಹ; ಭೂಕುಸಿತಕ್ಕೆ ತತ್ತರಿಸಿದ ಯಲ್ಲಾಪುರದ ಗ್ರಾಮಗಳು
ಇದನ್ನೂ ಓದಿ: ನೀರೇ ಇರದ ಬೇಡ್ತಿಯಿಂದ ಯಲ್ಲಾಪುರಕ್ಕೆ ಕುಡಿಯುವ ನೀರಿನ ಯೋಜನೆ; ಬೇಡ್ತಿ-ವರದಾ ಜೋಡಣೆ ಎಷ್ಟು ಸರಿ?

Published On - 8:32 pm, Tue, 26 October 21