ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಮನೆಗೆ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಭೇಟಿ

ಅನಂತ್ ಕುಮಾರ್ ಹೆಗಡೆ ಹಾಗೂ ಆನಂದ್ ಅಸ್ನೋಟಿಕರ್ ಅವರಿಬ್ಬರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಪರಸ್ಪರ ಎದುರಾಳಿಯಾಗಿದ್ದರು. ಪರಸ್ಪರ ಹೇಳಿಕೆ ಕೊಡುವ ಮೂಲಕ ಬದ್ಧವೈರಿಗಳಂತೆ ಇದ್ದ ಈ ಇಬ್ಬರೂ ನಾಯಕರ ಭೇಟಿ, ಜಿಲ್ಲೆಯಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಮನೆಗೆ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಭೇಟಿ
ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಮನೆಗೆ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಭೇಟಿ

ಕಾರವಾರ: ಉತ್ತರ ಕನ್ನಡ ( Uttara Kannada) ಲೋಕಸಭಾ ಸಂಸದ ಅನಂತಕುಮಾರ ಹೆಗಡೆ (Anantkumar Hegde) ಮತ್ತು ಮಾಜಿ ಸಚಿವ, ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ (Anand Asnotikar) ರಾಜಕೀಯವಾಗಿ ಬದ್ಧ ವೈರಿಗಳೆಂಬುದು ಎಲ್ಲರಿಗೂ ತಿಳಿದಿದ್ದ ವಿಚಾರ. ಆದರೆ ಇಂದು ರಾಜಕೀಯ ಮರೆತು ಸಂಸದ ಹೆಗಡೆ (Anantkumar Hegde) ಆನಂದ್ (Anand Asnotikar) ಅವರ ಮನೆಗೆ ಭೇಟಿ ನೀಡಿದ್ದಾರೆ.ಹೌದು, ದಶಕಗಳಿಂದ ರಾಜಕೀಯವಾಗಿ ಬದ್ಧ ವೈರಿಗಳಾಗಿರುವ ಸಂಸದ ಹೆಗಡೆ ಹಾಗೂ ಆನಂದ್ ಅವರ ಅಪರೂಪದ ಸಮಾಗಮಕ್ಕೆ ಕಾರವಾರ (Karwar) ತಾಲೂಕಿನ ಫಾದ್ರಿಬಾಗದಲ್ಲಿರುವ ಆನಂದ್ ಅವರ ನಿವಾಸ ಸಾಕ್ಷಿಯಾಯಿತು. ಈ ವೇಳೆ ಇಬ್ಬರ ಬೆಂಬಲಿಗರೂ ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡರು. ಆನಂದ್ ಅವರ ತಾಯಿ, ವಿಧಾನ ಪರಿಷತ್ ಮಾಜಿ ಸದಸ್ಯೆ ಶುಭಲತಾ ಅಸ್ನೋಟಿಕರ್ ಅವರಿಗೆ ಇತ್ತೀಚೆಗಷ್ಟೇ ಹೃದಯಕ್ಕೆ ಸ್ಟಂಟ್ ಅಳವಡಿಸಲಾಗಿದೆ. ಕಿಡ್ನಿ ಸಮಸ್ಯೆಯಿಂದಾಗಿ ಡಯಾಲಿಸಿಸ್  (Kidney Dialysis) ಕೂಡ ನಡೆಯುತ್ತಿದೆ. ಸದ್ಯ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಅವರು, ಕೊಂಚ ಚೇತರಿಸಿಕೊಳ್ಳುತ್ತಿದ್ದಾರೆ. ಇಂದು ಕಾರವಾರದಲ್ಲಿ (Karwar)  ದಿಶಾ ಸಭೆಗಾಗಿ ಆಗಮಿಸಿದ್ದ ಸಂಸದ ಹೆಗಡೆ, ಆನಂದ್ ಅವರ ಮನೆಗೆ ಶಾಸಕಿ ರೂಪಾಲಿ ನಾಯ್ಕ್ (Rupali Naik) ಅವರೊಂದಿಗೆ ಭೇಟಿ ನೀಡಿದರು. ಮನೆಗೆ ಆಗಮಿಸಿದ ಸಂಸದರನ್ನು ಆನಂದ್ ಮನೆಯ ಪ್ರವೇಶ ದ್ವಾರದಲ್ಲೇ ನಿಂತು ಸ್ವಾಗತಿಸಿಕೊಂಡರು. ಬಳಿಕ ತಾಯಿಯವರಿದ್ದ ಕೊಠಡಿಗೆ ಕರೆದೊಯ್ದರು.

ಈ ವೇಳೆ ಸಂಸದ ಹೆಗಡೆ ಶುಭಲತಾ ಅಸ್ನೋಟಿಕರ್ ಅವರ ಆರೋಗ್ಯ ವಿಚಾರಿಸಿದರು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಿದರು. ಆನಂದ್ ಅವರಿಗೂ ತಾಯಿಯ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಿದರು. ಇದೇ ವೇಳೆ ಆನಂದ್ ಕೂಡ ತಾಯಿಯವರ ಆರೋಗ್ಯದ ಬಗ್ಗೆ ಹಾಗೂ ನಡೆಯುತ್ತಿರುವ ಚಿಕಿತ್ಸೆಯ ಕುರಿತು ಸಂಸದರಿಗೆ ಮಾಹಿತಿ ಒದಗಿಸಿದರು. ಸಂಸದ ಹೆಗಡೆ ಹೊರಡುವ ಮುನ್ನ ಸಿಹಿ ನೀಡಿ ಅವರನ್ನು ಆನಂದ್ ಬೀಳ್ಕೊಟ್ಟರು. ಇದೇ ಸಂದರ್ಭದಲ್ಲಿ ಮನೆಯ ಆವರಣದಲ್ಲಿದ್ದ ಮಾಜಿ ಶಾಸಕ ದಿ.ವಸಂತ್ ಅಸ್ನೋಟಿಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ತೆರಳಿದರು. ಈ ವೇಳೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಅನಂತಕುಮಾರ ನನ್ನ ಅಣ್ಣ ಇನ್ನು ಸಂಸದ ಅನಂತಕುಮಾರ ಭೇಟಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಆನಂದ್ ಅಸ್ನೋಟಿಕರ್, ವೈಯಕ್ತಿಕವಾಗಿ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ಅವರನ್ನು ಬ್ರದರ್ (ಅಣ್ಣ) ಅಂತಲೇ ಕರೆಯುತ್ತೇನೆ. ಅವರು ಸಂಸದರಾಗಿರುವುದರಿಂದ ಕೇಂದ್ರದಿಂದ ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಅಭಿವೃದ್ಧಿ ಆಗಲೆಂದು ನಿರೀಕ್ಷಿಸುತ್ತೇನೆ ಅಷ್ಟೇ ಎಂದರು. ಎರಡು- ಮೂರು ವರ್ಷದಿಂದ ನನ್ನ ತಾಯಿ ಅನಾರೋಗ್ಯದಿಂದಾಗಿ ಆಪರೇಷನ್ ಗೆ ಕೂಡ ಒಳಗಾಗಿದ್ದರು. ಅವರ ಆರೋಗ್ಯ ವಿಚಾರಿಸಲು ಸಂಸದ ಅನಂತಕುಮಾರ ಹೆಗಡೆಯವರು ಸೌಜನ್ಯದ ಭೇಟಿ ನೀಡಿದರು. ಈ ವೇಳೆ ತಾಯಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಸ್ಥಳೀಯ ವೈದ್ಯರಿಂದ ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದಲ್ಲಿ ಅಥವಾ ಸರ್ಕಾರದಿಂದ ಯಾವುದೇ ಸಹಕಾರ ಬೇಕಾದರೂ ತಾವಿದ್ದೇವೆ ಎಂದು ಧೈರ್ಯ ನೀಡಿದ್ದಾರೆ ಎಂದರು.

ಅಮ್ಮ ಈ ಹಿಂದೆ ಅನಂತಕುಮಾರ ಅವರಿಗಾಗಿ ಸ್ವತಃ ಪ್ರಚಾರ ಕೈಗೊಂಡಿದ್ದರು‌. ಅಮ್ಮನಿಗೆ ಅನಂತಕುಮಾರ ಅವರ ಬಗ್ಗೆ ವೈಯಕ್ತಿಕವಾಗಿ ಒಳ್ಳೆಯ ಅಭಿಪ್ರಾಯವಿದೆ. ಹೀಗಾಗಿ ಅವರನ್ನು ಭೇಟಿಯಾಗಲು ಸಂಸದರು ಬಂದಿದ್ದರು. ಇದರಲ್ಲಿ ರಾಜಕೀಯದಲ್ಲಿ ಯಾವುದೇ ಪ್ರಶ್ನೆ ಇಲ್ಲ. ಅನಂತಕುಮಾರರಿಗಾಗಿ ತಾಯಿ ಬೆಂಬಲ ನೀಡಿದ್ದರು. ಮೊದಲಿನಿಂದಲೂ ಅಮ್ಮ ಹಾಗೂ ಅನಂತಕುಮಾರ ಅವರ ನಡುವೆ ಉತ್ತಮ ಬಾಂಧವ್ಯ ಇದೆ. ಹೀಗಾಗಿ ಸೌಜನ್ಯದ ಭೇಟಿ ಮಾಡಿದ್ದಾರೆ. ರಾಜಕೀಯದ ವಿಚಾರವಾಗಿ ಈ ವೇಳೆ ಯಾರೂ ಕೂಡ ಮಾತನಾಡಿಲ್ಲ ಎಂದು ಹೇಳಿದರು.

ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿಯವರಿಗೆ ಈಗಾಗಲೇ ಹೇಳಿದ್ದೀನಿ, ನನ್ನ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಚುನಾವಣೆ ಎದುರಿಸೋದು ಕಷ್ಟ ಇದೆ. ಮುಂದೆ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ತಮ್ಮ ಮಾರ್ಗದರ್ಶನ ಪಡೆದು ಮುಂದೆ ಹೆಜ್ಜೆ ಇಡುತ್ತೇನೆ ಎಂದಿದ್ದೇನೆ. ಚುನಾವಣೆಗೆ ನಿಲ್ಲುವ ಬಗ್ಗೆ, ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬುದರ ಬಗ್ಗೆ ಈವರೆಗೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ತಾಯಿಯವರ ಸ್ಥಿತಿ ಸ್ವಲ್ಪ ದಿನಗಳ ಹಿಂದಿನವರೆಗೆ ಗಂಭೀರ ಇತ್ತು. ಹೀಗಾಗಿ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವುದರೊಳಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದಿಲ್ಲ. ಕಾರ್ಯಕರ್ತರು, ಆರ್ ಎಸ್ಎಸ್ ಪ್ರಮುಖರು ಕಾರವಾರ- ಅಂಕೋಲಾ ಕ್ಷೇತ್ರದ ಅಭಿವೃದ್ಧಿಗಾಗಿ ಸ್ವತಂತ್ರವಾಗಿಯಾದರೂ ಸ್ಪರ್ಧಿಸುವಂಗೆ ಒತ್ತಾಯಿಸುತ್ತಿದ್ದಾರೆ. ಆದರೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.‌ ಚುನಾವಣೆಗೆ ಒಂದೂವರೆ ವರ್ಷ ಸಮಯವಿದೆ. ಆದರೆ ಮೂರ್ನಾಲ್ಕು ತಿಂಗಳಿದ್ದಾಗ ಜನರೆದುರು ಹೋಗುವುದು ಕೂಡ ಸರಿಯಲ್ಲ ಎಂದೂ ಹೇಳಿದರು.

ಒಂದು ಪಕ್ಷದಲ್ಲಿದ್ದಾಗ ಎದುರು ಪಕ್ಷದಲ್ಲಿರುವ ತಪ್ಪುಗಳನ್ನು ಜನರ ಮುಂದೆ ತರುವುದು ಸಹಜ. ಹೀಗಾಗಿ ನನ್ನ ಮತ್ತು ಅನಂತಕುಮಾರ ಅವರ ನಡುವೆ ರಾಜಕೀಯವಾಗಿ ಆರೋಪ- ಪ್ರತ್ಯಾರೋಪಗಳು ನಡೆದಿದೆ. ಆದರೆ ರಾಜಕೀಯಕ್ಕೂ ವೈಯಕ್ತಿಕ ಸಂಬಂಧಕ್ಕೂ ಸಂಬಂಧವಿರುವುದಿಲ್ಲ. ಈ ಹಿಂದೆ ನಾನು ಚುನಾವಣೆಗೆ ನಿಲ್ಲುವ ಒಂದು ತಿಂಗಳ ಹಿಂದೆ ಅನಂತಕುಮಾರ ಹಾಗೂ ಅವರ ಆಪ್ತ ಸಹಾಯಕರು ಗೋವಾ ವಿಮಾನ ನಿಲ್ದಾಣದಲ್ಲಿ ಸಿಕ್ಕಿದ್ದರು. ಟಿಕೆಟ್ ಗಾಗಿ ಸಾಲಿನಲ್ಲಿ ಕಾಯುತ್ತಿದ್ದರು. ನಾನೇ ಅಂದು ಸ್ವತಂ ನಿಂತು ಟಿಕೆಟ್ ಮಾಡಿಸಿಕೊಡುತ್ತೇನೆಂದು ಮಾಡಿಸಿಕೊಟ್ಟಿದ್ದೆ ಎಂದು ಕೂಡ ಸ್ಮರಿಸಿದರು.

ಲೇಖಕರು: ದೇವರಾಜ್​ ನಾಯ್ಕ್​

Published On - 1:46 pm, Mon, 8 November 21

Click on your DTH Provider to Add TV9 Kannada