ಪ್ರಧಾನಿ ಮೋದಿಗೆ ಶಿರಸಿಯ ಕುಶಲಕರ್ಮಿಗಳು ರಚಿಸಿದ ಶ್ರೀಗಂಧದ ಹಾರ ಉಡುಗೊರೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

| Updated By: shruti hegde

Updated on: Aug 04, 2021 | 8:13 AM

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿರಸಿಯ ಗುಡಿಗಾರರು ತಯಾರಿಸಿದ ಗಂಧದ ಹಾರಗಳನ್ನೇ ಉಡುಗೊರೆ ನೀಡಲು ಒಂದು ವಿಶೇಷ ಕಾರಣವಿದೆ.

ಪ್ರಧಾನಿ ಮೋದಿಗೆ ಶಿರಸಿಯ ಕುಶಲಕರ್ಮಿಗಳು ರಚಿಸಿದ  ಶ್ರೀಗಂಧದ ಹಾರ ಉಡುಗೊರೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
ಪ್ರಧಾನಿ ಮೋದಿ ಕೊರಳಲ್ಲಿ ಶಿರಸಿಯ ಕುಶಲಕರ್ಮಿಗಳು ರಚಿಸಿದ ಗಂಧದ ಹಾರ
Follow us on

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗ ವಿಶೇಷ ಉಡುಗೊರೆಯೊಂದನ್ನು ನೀಡಿದ್ದರು. ಪ್ರಧಾನಿ ಮೋದಿ ಕೊರಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೀಡಿದ ಶ್ರೀಗಂಧದ ಹಾರವಿತ್ತು. ಈ ಭೇಟಿಯ ಚಿತ್ರದಲ್ಲಿ ಪ್ರಧಾನಿ ಮೋದಿ (PM Narendra Modi)  ಕೊರಳಲ್ಲಿದ್ದ ಶ್ರೀಗಂಧದ ಸರ ಎದ್ದುಕಾಣುತ್ತಿತ್ತು. ಅಂದಹಾಗೆ ಆ ಶ್ರೀಗಂಧದ ಹಾರ ಕರ್ನಾಟಕದ ಉತ್ತರ ಕನ್ನಡದ ಶಿರಸಿಯಲ್ಲಿ ತಯಾರಾದದ್ದು ಎಂಬ ಅಂಶವೊಂದು ಬೆಳಕಿಗೆ ಬಂದಿದೆ. ಶಿರಸಿಯ  ಕುಶಲಕರ್ಮಿಗಳು ಅಥವಾ ಗುಡಿಗಾರರು ತಯಾರಿಸಿದ ಶ್ರೀಗಂಧದ ಹಾರವನ್ನು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಉಡುಗೊರೆಯಾಗಿ ನೀಡಿದ್ದಾರೆ.

ಈ ಹಾರಕ್ಕೆ ಮಣಿಪುಷ್ಪ ಹಾರ ಎಂದೂ ಸಹ ಕರೆಯಲಾಗುತ್ತದೆ. ಇದು  ದುಬಾರಿ ಶ್ರೀಗಂಧದ ಮಾಲೆಯಾಗಿದೆ.  ಮಾಣಿಕ್ಯದ ಮಣಿಯನ್ನು ಹೋಲುವ ಕೆಂಪು ಬಣ್ಣದ ಚುಕ್ಕೆಯನ್ನು ಹೊಂದಿದೆ. ಹಾರದ ಪ್ರತಿ ಮಣಿಗೆ ₹ 2,145 ದರವಿದೆ. ಹಾರದ ಸಂಕೀರ್ಣವಾದ ರಚನೆ ಹೆಚ್ಚು ಗಮನಸೆಳೆಯುವಂತಿದೆ.

ಈ ಹಿಂದೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡುವ ಮುನ್ನ ದೆಹಲಿಗೆ ಭೇಟಿ ನೀಡಿದ್ದ ವೇಳೆಯೂ ಇಂತಹುದೇ ಮಾಣಿಕ್ಯದಂತಹ ಮಣಿ ಇರುವ ಹಾರವನ್ನು ಉಡುಗೊರೆ ನೀಡಿದ್ದರು. ಮತ್ತು 10 ಲಕ್ಷದಷ್ಟು ಮೌಲ್ಯದ ಹಾರ ಅದಾಗಿತ್ತು ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಅಂದಹಾಗೆ ಈ ಶ್ರೀಗಂಧದ ಹಾರಗಳನ್ನು ಶಿರಸಿಯ ಗುಡಿಗಾರರು ತಯಾರಿಸಿದ್ದಾರೆ. ರಾಜ್ಯ ಸರ್ಕಾರ ನಡೆಸುವ ದೆಹಲಿಯಲ್ಲಿರುವ ಕಾವೇರಿ ಎಂಪೋರಿಯಂ ಈ ಹಾರಗಳನ್ನು ಉತ್ಪಾದಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿರಸಿಯ ಗುಡಿಗಾರರು ತಯಾರಿಸಿದ ಹಾರಗಳನ್ನೇ ಉಡುಗೊರೆ ನೀಡಲು ಒಂದು ವಿಶೇಷ ಕಾರಣವಿದೆ. ಸಿಎಂ ಬಸವರಾಜ ಬೊಮ್ಮಾಯಿ ಮೂಲತಃ ಹಾವೇರಿಯ ಶಿಗ್ಗಾವಿಯವರು. ಅವರಿಗೆ ಉತ್ತರ ಕರ್ನಾಟಕದ ಮೇಲೆ ವಿಶೇಷ ಒಲವಿದೆ. ಹೀಗಾಗಿ ಈ ಭಾಗಕ್ಕೆ ಸೇರುವ ಉತ್ತರ ಕನ್ನಡದ ಶಿರಸಿಯ ಕಲಾವಿದರು ತಯಾರಿಸಿದ ಗಂಧದ ಹಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ್ದಾರೆ ಎಂದು ಕಾವೇರಿ ಎಂಪೋರಿಯಂನ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರಮಟ್ಟದ ನಾಯಕರೊಬ್ಬರಿಗೆ ಇದೇ ಮೊದಲ ಬಾರಿಗೆ ಮಣಿಪುಷ್ಪ ಅಥವಾ ಮಾಣಿಕ್ಯದ ಮಣಿಗಳನ್ನು ಹೊಂದಿರುವ ಹಾರವನ್ನು ಉಡುಗೊರೆಯನ್ನಾಗಿ ನೀಡಲಾಗಿದೆ ಎಂದು ಕಾವೇರಿ ಹ್ಯಾಂಡಿಕ್ರಾಫ್ಟ್ ಎಂಪೋರಿಯಂನ ಎಂಡಿ ಡಿ.ರೂಪಾ ತಿಳಿಸಿದ್ದಾರೆ. ಕಾವೇರಿ ಎಂಪೋರಿಯಂ ಸ್ಥಳೀಯ ಕುಶಲಕರ್ಮಿಗಳಿಗೆ ಸದಾ ಬೆಂಬಲ ನೀಡಲಿದೆ ಎಂದು ಸಹ ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 

E-RUPI: ಇ-ರುಪಿ ಡಿಜಿಟಲ್ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ; ಏನಿದರ ವಿಶೇಷತೆ?

ರಾಜಕೀಯ ಲಹರಿ: ನನ್ನಿಷ್ಟದವನಿಗೆ ನಾನೇ ಕೊಡಬಲ್ಲೆ ಸಚಿವ ಸ್ಥಾನ, ಹೀಗಾಗಿ ನೇಮಕಕ್ಕೂ ಮುನ್ನವೇ ಬಸನಗೌಡ ಪಾಟೀಲ್ ಯತ್ನಾಳ್ ಶಿಕ್ಷಣ ಸಚಿವ!

(CM Basavaraj Bommai gifts unique Sirsi garland to PM Narendra Modi)

Published On - 11:38 pm, Tue, 3 August 21