E-RUPI: ಇ-ರುಪಿ ಡಿಜಿಟಲ್ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ; ಏನಿದರ ವಿಶೇಷತೆ?

E-RUPI Benefits: ಮುಂದಿನ ದಿನಗಳಲ್ಲಿ ಆಹಾರ ವಿತರಣೆ, ಆರೋಗ್ಯ ಸೇವೆಗಳು ಸೇರಿದಂತೆ ಬೇರೆ ವಲಯಗಳಿಗೆ ಈ ಇ-ರುಪಿ ಸೇವೆಯನ್ನು ಅಳವಡಿಕೆ ಮಾಡಲಾಗುವುದು ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.

E-RUPI: ಇ-ರುಪಿ ಡಿಜಿಟಲ್ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ; ಏನಿದರ ವಿಶೇಷತೆ?
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 02, 2021 | 5:27 PM

ನವದೆಹಲಿ: ಭಾರತವನ್ನು ಡಿಜಿಟಲೀಕರಣ ಮಾಡಲು ಪಣ ತೊಟ್ಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಡಿಜಿಟಲ್ ಮೂಲಕ ಹಣ ಪಾವತಿ ಮಾಡುವ ಇ-ರುಪಿ (E-RUPI) ಸೇವೆಗೆ ಇಂದು ಚಾಲನೆ ನೀಡಿದ್ದಾರೆ. ಈಗಾಗಲೇ ಫೋನ್ ಪೇ, ಗೂಗಲ್ ಪೇ, ಪೇಟಿಎಂ, ವಾಟ್ಸಾಪ್ ಪೇ ಮುಂತಾದ ಡಿಜಿಟಲ್ ಪೇಮೆಂಟ್​ ಆಯ್ಕೆಗಳಿವೆಯಲ್ಲ ಎಂದು ನೀವು ಹುಬ್ಬೇರಿಸಬಹುದು. ಆದರೆ, ಈ ಇ-ರುಪಿ ಬಹಳ ವಿಶೇಷವಾಗಿದ್ದು, ಇದರ ಮೂಲಕ ಇಂಟರ್ನೆಟ್, ಸ್ಮಾರ್ಟ್​ಫೋನ್​ಗಳು ಇಲ್ಲದೆಯೂ ವೋಚರ್ ಮೂಲಕ ಹಣ ಪಾವತಿ ಮಾಡಲು ಸಾಧ್ಯವಿದೆ.

ಇಂದು ಈ ಇ-ರುಪಿ ಸೇವೆಗೆ ಚಾಲನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಆರಂಭಿಕವಾಗಿ ಈ ಸೇವೆ ಆರೋಗ್ಯಕ್ಕೆ ಸಂಬಂಧಿಸಿದ ಹಣ ಪಾವತಿಗೆ ಅನುಕೂಲವಾಗಲಿದೆ. ಖಾಸಗಿ ಕೇಂದ್ರಗಳಲ್ಲಿ ಹಣ ಪಾವತಿ ಮಾಡಿ ಕೊವಿಡ್ ಲಸಿಕೆ ಪಡೆಯುವವರು, ಅಥವಾ ಯಾರಾದರೂ ತಮ್ಮ ಸುತ್ತಮುತ್ತಲಿನ 100 ಜನರ ಕೊವಿಡ್ ಲಸಿಕೆಗೆ ಸಹಾಯ ಮಾಡುವವರಿದ್ದರೆ ಅವರು ಇ-ರುಪಿ ವೋಚರ್ ನೀಡಬಹುದು. ಆಗ ಆ ವೋಚರ್​ನಲ್ಲಿರುವ ಹಣವನ್ನು ಲಸಿಕೆಗೆ ಮಾತ್ರ ಬಳಕೆ ಮಾಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ಆಹಾರ ವಿತರಣೆ, ಆರೋಗ್ಯ ಸೇವೆಗಳು ಸೇರಿದಂತೆ ಬೇರೆ ವಲಯಗಳಿಗೆ ಈ ಇ-ರುಪಿ ಸೇವೆಯನ್ನು ಅಳವಡಿಕೆ ಮಾಡಲಾಗುವುದು ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.

ಪ್ರೀಪೇಯ್ಡ್​ ಆಗಿರುವ ಇ-ರುಪಿ ವೋಚರ್​ಗಳನ್ನು ಗಿಫ್ಟ್​ ಕಾರ್ಡ್​ಗಳ ರೀತಿ ಬಳಸಬಹುದು. ಕಾರ್ಡ್​ನ ಕೋಡ್​ ಅನ್ನು ಎಸ್​ಎಂಎಸ್ ಮೂಲಕ ಅಥವಾ ಕ್ಯೂ ಆರ್​ ಕೋಡ್ ಮೂಲಕ ಶೇರ್ ಮಾಡಬಹುದು. ಸದ್ಯಕ್ಕೆ ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಈ ವೋಚರ್ ಅನ್ನು ಬಳಸಲು ಅನುಮತಿ ನೀಡಲಾಗಿದೆ. ಮುಖ್ಯವಾಗಿ ಆರೋಗ್ಯ ಕ್ಷೇತ್ರವನ್ನು ಗುರಿಯಾಗಿರಿಸಿಕೊಂಡು ಈ ಡಿಜಿಟಲ್ ಸೇವೆಯನ್ನು ಚಾಲನೆಗೆ ತರಲಾಗಿದೆ. ಈ ವೋಚರ್ ಕೊಟ್ಟ ವ್ಯಕ್ತಿ ಇದನ್ನು ಯಾವ ಉದ್ದೇಶಕ್ಕಾಗ ನೀಡಿದ್ದಾರೋ ಅದಕ್ಕೆ ಮಾತ್ರ ಉಪಯೋಗಿಸಲು ಸಾಧ್ಯವಿರುತ್ತದೆ.

ಸ್ಮಾರ್ಟ್​ಫೋನ್ ಇಲ್ಲದವರು ಎಸ್​ಎಂಎಸ್ ಅಥವಾ ಕ್ಯೂ ಆರ್ ಕೋಡ್ ಬಳಕೆ ಮಾಡಿ ಹಣವನ್ನು ಪಾವತಿ ಮಾಡುವ ಆಯ್ಕೆ ಇದರಲ್ಲಿದೆ. ಇದರಿಂದ ಇಂಟರ್ನೆಟ್ ವ್ಯವಸ್ಥೆ ಇಲ್ಲದ ಫೋನ್​ಗಳನ್ನು ಬಳಸುವವರಿಗೆ ಕೂಡ ಡಿಜಿಟಲ್ ಪೇಮೆಂಟ್​ಗೆ ಅನುಕೂಲವಾಗಲಿದೆ. ನೆಟ್ ಬ್ಯಾಂಕಿಂಗ್, ಆನ್​ಲೈನ್ ಪೇಮೆಂಟ್ ಆ್ಯಪ್​ಗಳನ್ನು ಬಳಸದೆ ಸುಲಭವಾಗಿ ಹಣ ಪಾವತಿ ಮಾಡುವ ಆಯ್ಕೆಯೇ ಇ-ರುಪಿ. ಇದು ಇ-ವೋಚರ್ ಆಧಾರಿತವಾಗಿ ಕಾರ್ಯ ನಿರ್ವಹಿಸಲಿದೆ.

ಹಣಕಾಸು ಸೇವೆ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಯೋಗದಲ್ಲಿ ಉ-ರುಪಿಯನ್ನು ನ್ಯಾಷನಲ್ ಪೇಮೆಂಟ್ಸ್​ ಕಾರ್ಪೋರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದೆ. ಫೋನ್ ಪೇ, ಗೂಗಲ್ ಪೇ, ಪೇಟಿಎಂಗಳಿಗೆ ಇರುವಂತೆ ಇದಕ್ಕೂ ಯುಪಿಐ ಐಡಿ ಇರಲಿದೆ. ಕ್ಯೂಆರ್​ ಕೋಟ್ ಅಥವಾ ಎಸ್​ಎಂಎಸ್ ಆಧಾರಿತವಾದ ಇ-ವೋಚರ್ ಮೂಲಕ ಮೊಬೈಲ್ ಬಳಕೆದಾರರು ಹಣ ಪಾವತಿ ಮಾಡಬಹುದು.

ಕಾರ್ಪೋರೇಟ್ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ಈ ವೋಚರ್​ಗಳನ್ನು ನೀಡಬಹುದು. ಎಸ್​ಬಿಐ, ಹೆಚ್​ಡಿಎಫ್​ಸಿ, ಕೆನರಾ, ಆ್ಯಕ್ಸಿಸ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಇಂಡಸ್ ಇಂಡ್, ಐಸಿಐಸಿಐ ಬ್ಯಾಂಕ್​ಗಳಲ್ಲಿ ಈ ಇ-ರುಪಿ ವ್ಯವಸ್ಥೆಯಿದೆ.

ಇದನ್ನೂ ಓದಿ: e- RUPI: ಪ್ರಧಾನಿ ನರೇಂದ್ರ ಮೋದಿಯಿಂದ ಆಗಸ್ಟ್ 2ಕ್ಕೆ ಇ-ರುಪಿಗೆ ಚಾಲನೆ; ಏನಿದರ ವೈಶಿಷ್ಟ್ಯ ತಿಳಿಯಿರಿ

ಏನಿದು e-RUPI ವೋಚರ್? ಇದರ ಅನುಕೂಲಗಳೇನು? ಯಾವ ಬ್ಯಾಂಕ್​ಗಳಲ್ಲಿ ಸಿಗುತ್ತವೆ?

(E RUPI: Prime Minister Narendra Modi Launches E-RUPI Digital Voucher Based Digital Payment System Today)

Published On - 5:18 pm, Mon, 2 August 21