AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಮುಖಂಡನ ಕೊಲೆಗೆ ಯತ್ನ: ತನಿಖೆ ಚುರುಕು, ನಾಲ್ವರ ಬಂಧನ

ಅಂಕೋಲಾದಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲ ನಾಯಕ ಹತ್ಯೆ ಯತ್ನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಗೋವಾ ಮೂಲದ ನಾಲ್ವರನ್ನ ಬಂಧಿಸಲಾಗಿದೆ. ಆರೋಪಿಗಳು ಅಟ್ಟಾಡಿಸಿ ಹೊಡೆದಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಘಟನೆ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಮುಖಂಡನ ಕೊಲೆಗೆ ಯತ್ನ: ತನಿಖೆ ಚುರುಕು, ನಾಲ್ವರ ಬಂಧನ
ಬಂಧಿತರುImage Credit source: tv9 kannada
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on: Mar 26, 2026 | 8:41 PM

Share

ಕಾರವಾರ, ಮಾರ್ಚ್​ 26: ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯ್ಕ (Gopalakrishna Naik) ಹತ್ಯೆ ಯತ್ನ ಘಟನೆಗೆ ಸಂಬಂಧಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈಗಾಗಲೇ ಬಂಧಿತ ನಾಲ್ವರ ವಿಚಾರಣೆ ತೀವ್ರಗೊಂಡಿದೆ. ಈ ನಡುವೆ ಬಂಧಿತರ ಫೋಟೋ ಮತ್ತು ಓಡಾಡುವ ದೃಶ್ಯ ವೈರಲ್ ಆಗಿದ್ದು, ಎಲ್ಲರೂ ಗೋವಾ ಮೂಲದವರಾಗಿದ್ದಾರೆ. ಆದರೆ ಯಾವ ಕಾರಣಕ್ಕೆ ದಾಳಿ ಮಾಡಿದ್ದಾರೆ ಎಂಬುದನ್ನ ತಿಳಿದುಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಕೊಲೆಗೆ ಯತ್ನಿಸಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯ್ಕ ಕೊಲೆಗೆ ಯತ್ನಿಸಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಹಾಡಹಗಲೇ ವ್ಯಕ್ತಿ ಓರ್ವನನ್ನ ಅಟ್ಟಾಡಿಸಿ ಹೊಡೆದಿರುವ ದೃಶ್ಯ ನಿಜಕ್ಕೂ ಎದೆ ಝಲ್ ಎಣಿಸುವಂತಹದು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಿನ್ನೆ ನಡೆದ ಘಟನೆ ಬೆನ್ನಲ್ಲೇ ಎಲ್ಲೆಡೆ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಮುಖಂಡನ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ

ದಶಕಗಳ ನಂತರ ಅಂಕೋಲಾದಲ್ಲಿ ಕಾಂಗ್ರೆಸ್ ಮುಖಂಡನೋರ್ವನ ಹತ್ಯೆ ಯತ್ನದ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆ ಹೇರ್ ಸಲೂನ್​ಗೆ ಬಂದು ವಾಪಾಸಾಗುತ್ತಿದ್ದ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯ್ಕ ಅವರ ಮೇಲೆ ಆರೇಳು ಜನರ ಗುಂಪು ಸುತ್ತವರಿದಿದೆ. ಅಲ್ಲದೆ ಅವರ ಹತ್ಯೆಗೆ ಪ್ರಯತ್ನಿಸಿತ್ತು. ಗೋಪಾಲರನ್ನ ರಕ್ಷಿಸಲು ಸಹೋದರ ರಾಘವೇಂದ್ರ ಮುಂದಾಗಿದ್ದರಿಂದ ಅದೃಷ್ಟವಶಾತ್ ಗೋಪಾಲ್ ಅವರು ಓಡಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಗಾಯಗೊಂಡಿರುವ ಅವರು ಸದ್ಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಲ್ವರ ಬಂಧನ

ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆಯಲಾಗಿತ್ತು. ದಾಳಿಕೋರರು ಅಂಕೋಲಾದಲ್ಲಿ ಓಡಾಡಿದ ದೃಶ್ಯ ಆಯಾ ಕಡೆಗಳಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ ಬಂಧಿತರ ಫೋಟೋ ಕೂಡ ವೈರಲ್ ಆಗಿದೆ. ಬಂಧಿತ ನಾಲ್ವರು ಗೋವಾ ಮೂಲದವರಾಗಿದ್ದಾರೆ. ಜಾಕೀರ್, ನೈಜಲ್, ಸದ್ದಾಂ ಹಾಗೂ ಇರ್ಪಾನ್ ಬಂಧಿತರು. ಘಟನೆಗೆ ಸಂಬಂಧಿಸಿದಂತೆ ಎರಡು ಬೈಕ್ ಹಾಗೂ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ದೀಪನ್ ಎಂ ಎನ್​ ಹೇಳಿದ್ದಾರೆ.

ಬಂಧಿತರು ಗೋವಾದವರಾಗಿದ್ದು, ಓರ್ವ ಬೌನ್ಸರ್, ಇನ್ನೋರ್ವ ವೆಲ್ಡರ್, ಮತ್ತೋರ್ವ ರಿಯಲ್ ಎಸ್ಟೇಟ್ ಮತ್ತು ಇನ್ನೋರ್ವ ಡ್ರೈವರ್ ಆಗಿದ್ದಾರೆ. ಆದರೆ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ನಾಲ್ಕು ತಂಡಗಳನ್ನ ರಚನೆ ಮಾಡಿದ್ದಾರೆ. ಗೋವಾ ಸೇರಿದಂತೆ ಇತರೆಡೆ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಆರೋಪಿಗಳು ಆಗಾಗ ಅಂಕೋಲಾಕ್ಕೆ ಬಂದು ಹೋಗುತ್ತಿದ್ದರು. ಮೂರು ದಿನಗಳ ಹಿಂದೆ ಇಲ್ಲಿನ ಅಂಕೋಲಾದಲ್ಲಿ ಬೀಡುಬಿಟ್ಟದ್ದು ನಿನ್ನೆ ಬೆಳಗಿನ ವೇಳೆ ಹತ್ಯೆಗೆ ಪ್ರಯತ್ನಿಸಿದ್ದಾರೆ. ಒಟ್ಟಿನಲ್ಲಿ ಹತ್ಯೆಗೆ ಯತ್ನಿಸಿರುವುದು ರಾಜಕೀಯ ಕಾರಣಕ್ಕಾ, ವ್ಯವಹಾರ ಸಂಬಂಧನಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ಕಾರವಾರ: ಪ್ರವಾಸಿಗರು ಹೆಚ್ಚಳದ ಮಧ್ಯೆ ದರ ಸಮರ: ಏಜೆಂಟರು ಮತ್ತು ಕಂಪನಿಗಳ ನಡುವೆ ಬಿಗ್ ಫೈಟ್

ಒಟ್ಟಿನಲ್ಲಿ ಹಾಡಹಗಲೇ ಅಂಕೋಲಾ ಪಟ್ಟಣದಲ್ಲಿ ನಡೆದ ಈ ದಾಳಿ ಎಲ್ಲರನ್ನ ಬೆಚ್ಚಿಬೀಳಿಸಿದೆ. ರಾಜಕೀಯದಲ್ಲಿ ಕಳೆದ ಕೆಲ ದಿನಗಳಿಂದ ಯುವ ಸಮುದಾಯದ ಸ್ನೇಹವನ್ನ ಗಳಿಸುತ್ತಿದ್ದ ಗೋಪಾಲಕೃಷ್ಣ ಅವರಿಗೆ ಸಹಿಸಲಾಗದವರು ಅಥವಾ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡವರಿಂದ ಈ ಕೃತ್ಯ ನಡೆದಿದೆಯಾ ಎಂಬುದು ಗೊತ್ತಾಗಬೇಕಿದೆ. ಪೊಲೀಸರು ಪ್ರಕರಣ ಸಂಬಂಧ ತನಿಖೆಯನ್ನ ಚುರುಕುಗೊಳಿಸಿದ್ದು, ಮುಂದಿನ ದಿನಗಳಲ್ಲಿ ಯಾವ ಸಂಬಂಧ ಈ ಘಟನೆ ನಡೆದಿದೆ ಎಂಬುದು ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us