Uttara Kannada: ಜಿಲ್ಲಾಕೇಂದ್ರಕ್ಕೆ ಸಂಪರ್ಕಿಸುವ ಮೂರ್ನಾಲ್ಕು ರಸ್ತೆಗಳಲ್ಲೇ ಗುಡ್ಡಕುಸಿತದ ಭಯ; ಜೀವ ಕೈಯಲ್ಲಿ ಹಿಡಿದು ವಾಹನ ಸವಾರರ ಸಂಚಾರ
ಅದು ಕರಾವಳಿ ಹಾಗೂ ಪಶ್ಚಿಮ ಘಟ್ಟಗಳ ಸರಣಿಯನ್ನ ಹೊಂದಿರುವ ವಿಶಿಷ್ಟ ಜಿಲ್ಲೆ. ಕರಾವಳಿ ಹಾಗೂ ಘಟ್ಟದ ಭಾಗಗಳಿಗೆ ಸಂಚರಿಸಲು ಇರುವ ಮೂರ್ನಾಲ್ಕು ರಸ್ತೆಗಳೇ ಪ್ರಮುಖ ಕೊಂಡಿಯಾಗಿದ್ದು, ಇದೀಗ ಆ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಆತಂಕ ಎದುರಾಗಿದೆ. ಕಳೆದ ಬಾರಿ ಮಳೆಗಾಲದಲ್ಲಿ ಎದುರಾಗಿದ್ದ ಭೂಕುಸಿತ ಪ್ರಕರಣಗಳು ಇದೀಗ ಮತ್ತೆ ಮರುಕಳಿಸುತ್ತಿದ್ದು, ಯಾವಾಗ ರಸ್ತೆಯ ಮೇಲೆ ಕಲ್ಲು, ಮಣ್ಣು ಕುಸಿದುಬೀಳುತ್ತೋ ಎಂದು ಸವಾರರು ಜೀವ ಕೈಯಲ್ಲಿ ಹಿಡಿದು ಸಾಗುವಂತಾಗಿದೆ.
ಉತ್ತರ ಕನ್ನಡ: ಒಂದೆಡೆ ಹೆದ್ದಾರಿಗೆ ಹೊಂದಿಕೊಂಡಿರುವ ಗುಡ್ಡಗಳನ್ನ ಬೇಕಾಬಿಟ್ಟಿಯಾಗಿ ಕೊರೆದಿರುವುದು. ಇನ್ನೊಂದೆಡೆ ರಸ್ತೆಯ ಪಕ್ಕದಲ್ಲಿ ಅಲ್ಲಲ್ಲಿ ಬಿದ್ದಿರುವ ಮಣ್ಣು, ಬೃಹತ್ ಬಂಡೆಗಲ್ಲುಗಳು. ಮತ್ತೊಂದೆಡೆ ಇದೇ ರಸ್ತೆಗೆ ಹೊಂದಿಕೊಂಡೇ ಸಂಚರಿಸುತ್ತಿರುವ ವಾಹನಗಳು. ಈ ದೃಶ್ಯಗಳು ಕಂಡುಬಂದಿದ್ದು ಕರಾವಳಿ ಜಿಲ್ಲೆಯ ಉತ್ತರ ಕನ್ನಡದ(Uttara Kannada) ಕಾರವಾರದಲ್ಲಿ. ಜಿಲ್ಲೆಯ ಕರಾವಳಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾರ್ಯ ಆರಂಭವಾಗಿ ದಶಕಗಳೇ ಕಳೆಯುತ್ತಾ ಬಂದಿದೆ. ಆದರೆ, ಇನ್ನೂ ಸಹ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲವಾಗಿದ್ದು, ಕಾಮಗಾರಿಗಾಗಿ ಅಲ್ಲಲ್ಲಿ ಗುಡ್ಡಗಳನ್ನ ಕೊರೆದು ಹಾಗೆಯೇ ಬಿಡಲಾಗಿದೆ. ಈ ಗುಡ್ಡಗಳಿಂದ ಬೇಸಿಗೆಯಲ್ಲಿ ಅಷ್ಟೇನೂ ಆತಂಕ ಇಲ್ಲವಾದರೂ, ಮಳೆಗಾಲದಲ್ಲಿ ಇವು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸುತ್ತವೆ. ಅದರಲ್ಲೂ ಕರಾವಳಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವುದರಿಂದ ಅಪಾಯಕಾರಿ ರೀತಿಯಲ್ಲಿ ಕೊರೆದಿರುವ ಗುಡ್ಡಗಳು ಕುಸಿದು ಹೆದ್ದಾರಿಗಿಯೇ ಬೀಳುವ ಆತಂಕ ಎದುರಾಗಿದ್ದು, ಮಳೆ ಆರಂಭವಾದಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಮಳೆಗಾಲ ಆರಂಭಕ್ಕೂ ಮುನ್ನ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.
ಇನ್ನು ಕಳೆದ 2021ರಲ್ಲಿ ಸುರಿದ ಭಾರೀ ಮಳೆಗೆ ಅಣಶಿ ಹಾಗೂ ಅರಬೈಲ್ ಘಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿ ಹೆದ್ದಾರಿ ಸಂಪರ್ಕವೇ ಕಡಿತಗೊಂಡಿತ್ತು. ಅಲ್ಲದೇ ಪ್ರತಿವರ್ಷ ಮಳೆಗಾಲದ ಅವಧಿಯಲ್ಲಿ ಹೆದ್ದಾರಿಯ ಅಲ್ಲಲ್ಲಿ ಅಗಲೀಕರಣಕ್ಕಾಗಿ ಕೊರೆದ ಗುಡ್ಡಗಳಿಂದ ಕಲ್ಲು, ಮಣ್ಣು ಕುಸಿದು ಬಿದ್ದು ಸಂಚಾರ ಅಸ್ತವ್ಯಸ್ತವಾದ ಘಟನೆಗಳು ನಡೆದಿತ್ತು. ಅದರಂತೆ ಈ ಬಾರಿಯೂ ಸಹ ಕೆಲವೆಡೆ ಅಪಾಯಕಾರಿ ರೀತಿಯಲ್ಲಿ ಗುಡ್ಡಗಳನ್ನ ಕೊರೆದು ಬಿಡಲಾಗಿದ್ದು, ಇದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ. ಇನ್ನು ಈ ಬಗ್ಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ ‘ಈಗಾಗಲೇ ಮಳೆಗಾಲದಲ್ಲಿ ಹೆದ್ದಾರಿ ಸುರಕ್ಷತೆ ವಿಚಾರವಾಗಿ ಐಆರ್‌ಬಿ, ನೌಕಾನೆಲೆ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಅಲ್ಲದೇ ಗುಡ್ಡ ಕುಸಿತ ಉಂಟಾದಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಿ ಸಂಚಾರಕ್ಕೆ ಅಡೆತಡೆ ಉಂಟಾಗದಂತೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಕಾರವಾರ: ಕಳಚೆ ಗ್ರಾಮದಲ್ಲಿ ಭೂಕುಸಿತ; ಗುಡ್ಡ ಕುಸಿದಿದ್ದರಿಂದ 30 ರಿಂದ 40 ಅಡಿಕೆ ಮರಗಳು ನಾಶ
ಒಟ್ಟಾರೇ ಪ್ರತಿ ಮಳೆಗಾಲದಲ್ಲೂ ಹೆದ್ದಾರಿ ಅಗಲೀಕರಣದ ಅವ್ಯವಸ್ಥೆಯಿಂದಾಗಿ ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿಯಿದ್ದು, ಈ ಬಾರಿಯಾದರೂ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನ ಸಮರ್ಪಕವಾಗಿ ಕೈಗೊಳ್ಳುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ವರದಿ: ವಿನಾಯಕ ಬಡಿಗೇರ ಟಿವಿ9 ಕಾರವಾರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ