ಕಾರವಾರ: ಕರಾವಳಿ ಕಡಲತೀರದಲ್ಲಿ ಕಳೆದ ಆರು ತಿಂಗಳಿನಿಂದ ಎಗ್ಗಿಲ್ಲದೆ ಅವೈಜ್ಞಾನಿಕ ಫಿಶಿಂಗ್ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಕಡಲ ಜೀವಿಗಳ ಪ್ರಾಣಕ್ಕೆ ಕುತ್ತು ತರುವ ಈ ಮೀನುಗಾರಿಕೆ ವಿರುದ್ಧ ಯಾವೊಬ್ಬ ಅಧಿಕಾರಿ ಇನ್ನು ಕ್ರಮ ಕೈಗೊಂಡಿಲ್ಲ. ಇದರಿಂದ ಕೆರಳಿದ ಕಡಲ ಮಕ್ಕಳು ಇಂದು(ಫೆ.2) ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕತ್ತಲಾಗುತ್ತಿದ್ದಂತೆ ದೊಡ್ಡ ಬೋಟ್‌ಗಳನ್ನ ಹತ್ತಿ, ಹೈವೋಲ್ಟೇಜ್ ಲೈಟ್‌ಗಳನ್ನ ಮತ್ತು ಅದಕ್ಕೆ ಬೇಕಾದ ಜನರೇಟರ್ ಹಾಕಿಕೊಂಡು ಸಮುದ್ರಕ್ಕೆ ಇಳಿಯುವ ದಂದೆಕೋರರು, ಕಡಲಾಳಕ್ಕೆ ಸುಮಾರು 2000 ವೋಲ್ಟೇಜ್ ಲೈಟ್‌ಗಳನ್ನ ಬಿಟ್ಟು ಮೀನುಗಾರಿಕೆ ಮಾಡುತ್ತಿದ್ದಾರೆ.
ಈ ಮೀನುಗಾರಿಕೆಯಿಂದ ಚಿಕ್ಕಪುಟ್ಟ ಮೀನುಗಳು, ಜೊತೆಗೆ ರಾತ್ರಿ ವೇಳೆ ಮೊಟ್ಟೆ ಇಡುವ ಮೀನುಗಳು ಮೊಟ್ಟೆ ಇಡದೆ ಸಾವನ್ನಪ್ಪುತ್ತಿವೆ. ಇನ್ನು ಕಡಲಿನ ಅನೇಕ ಜೀವಿಗಳ ಮೇಲೆ ಈ ಲೈಟ್ ಫಿಶಿಂಗ್ ಅಪಾಯಕಾರಿ ಪರಿಣಾಮ ಬೀರುತ್ತಿದ್ದು, ಇದು ಹೀಗೆ ಮುಂದುವರೆದರೆ ಅಳಿವಿನ ಅಂಚಿನಲ್ಲಿರುವ ಅನೇಕ ಕಡಲ ಜೀವಿಗಳು ನಾಶವಾಗುವ ಸಾಧ್ಯತೆ ಇದೆ. ಜೊತೆಗೆ ಮೀನಿನ ಸಂತತೆ ಕ್ರಮೇಣ ಕಡಿಮೆಯಾಗುತ್ತದೆ. ಹೀಗಾಗಿ ಕಡಲಜೀವಿಗಳ ಮೇಲೆ ಅಪಾಯಕಾರಿ ಪರಿಣಾಮ ಬೀರುವ ಈ ದಂದೆಗೆ ಬ್ರೇಕ್ ಹಾಕಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಕಾರವಾರ: ಮೀನು ಸಾಕಾಣಿಕೆಗಾಗಿ ಉಪ್ಪು ನೀರು ಸಂಗ್ರಹ; ಸುತ್ತಲಿನ ಬಾವಿಗಳಲ್ಲಿ ಮಾಯವಾದ ಸಿಹಿ ನೀರು
ಇನ್ನು ಜಿಲ್ಲೆಯ ಭಾಗದಲ್ಲಿ ಲಕ್ಷಕ್ಕೂ ಅಧಿಕ ಸಂಪ್ರದಾಯಿಕ ಮೀನುಗಾರರಿದ್ದಾರೆ. ಇವರು ಆಳ ಸಮುದ್ರಕ್ಕೆ ಹೋಗದೆ ಕೇವಲ 12 ನಾಟಿಕಲ್ ಮೈಲು ದೂರದಲ್ಲಿ ಮಾತ್ರ ಮೀನುಗಾರಿಕೆಯನ್ನ ಮಾಡುತ್ತಾರೆ. ಇದನ್ನೆ ನಂಬಿಕೊಂಡು ಬದುಕು ಸಾಗಿಸುವ ಈ ಮೀನುಗಾರರ ದುಡುಮೆಯ ಮೇಲೆ ಅವೈಜ್ಞಾನಿಕ ಬುಲ್ ಟ್ರಾಪ್, ಲೈಟ್ ಫಿಶಿಂಗ್ ಪರಿಣಾಮ ಬೀರುತ್ತಿದೆ.. ಹೀಗಾಗಿ ಇದನ್ನ ಬಂದ್ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಇನ್ನು ಈ ಅವೈಜ್ಞಾನಿಕ ಮೀನುಗಾರಿಕೆಯನ್ನ ಗೋವಾ, ಕೇರಳ ಹಾಗೂ ಶ್ರೀಲಂಕಾದ ದಂದೆಕೋರರು ನಡೆಸುತ್ತಿದ್ದು, ಈ ದಂದೆಯ ಬಗ್ಗೆ ದಾಖಲೆ ಸಮೇತ ಮೀನುಗಾರ ಇಲಾಖೆಯ ಅಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡಿದ್ರು ಯಾವುದೇ ಪ್ರಯೋಜನವಾಗಿಲ್ಲ.
ಇನ್ನು ಕಡಲನ್ನ ಕಾಯುವ ಕರಾವಳಿ ಕಾವಲು ಪಡೆ ಕೂಡ ಈ ದಂದೆ ತಡೆಯುವಲ್ಲಿ ವಿಫಲವಾಗಿದೆ. ದೇಶದಲ್ಲಿ ಬ್ಯಾನ್ ಇರುವ ಈ ಅಕ್ರಮ ದಂದೆಗೆ ಶೀಘ್ರದಲ್ಲಿ ಬ್ರೇಕ್ ಹಾಕಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳುತ್ತೆವೆ ಎಂದು ಮೀನುಗಾರರು ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ದೇಶದಲ್ಲಿ ಬ್ಯಾನ್ ಇರುವ ಲೈಟ್ ಫಿಶಿಂಗ್, ಬುಲ್ ಟ್ರಾಪ್ ಕರಾವಳಿ ಕಡಲತೀರದಲ್ಲಿ ಸದ್ದು ಮಾಡುತ್ತಿದೆ. ಈ ಅಕ್ರಮ ದಂದೆ ಕಂಡರೂ ಕಾಣದಂತೆ ಸಂಬಂಧಿಸಿದ ಇಲಾಖೆ ಜಾಣ ಕುರುಡತನ ಪ್ರದರ್ಶನ ಮಾಡುತ್ತಿರುವುದು ವಿಪರ್ಯಾಸವೆ ಸರಿ. ಇನ್ನಾದರೂ ಜಿಲ್ಲಾಡಳಿತ ನಿರ್ಲಕ್ಷ್ಯ ಬಿಟ್ಟು ಈ ಅಕ್ರಮ ದಂದೆಗೆ ಬ್ರೇಕ್ ಹಾಕುತ್ತಾ ಎಂಬುವುದನ್ನ ಕಾದು ನೋಡಬೇಕಿದೆ.
ವರದಿ: ವಿನಾಯಕ ಬಡಿಗೇರ ಟಿವಿ9 ಕಾರವಾರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ