KSRTC ಬಸ್- ಕಾರು ಮಧ್ಯೆ ಭೀಕರ ಅಪಘಾತ: ಹೊಸ ವರ್ಷ ಪಾರ್ಟಿಗೆ ಬಂದ ನಾಲ್ವರು ದುರಂತ ಅಂತ್ಯ
ಕೆಎಸ್ಆರ್ಟಿಸಿ ಬಸ್ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಹೊಸ ವರ್ಷದ ಪಾರ್ಟಿಗೆ ಬಂದವರು ದುರಂತ ಅಂತ್ಯ ಕಂಡಿದ್ದಾರೆ.
ಕಾರವಾರ: ಕೆಎಸ್ಆರ್ಟಿಸಿ ಬಸ್ (KSRTC Bus) ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ (Road Accident) ಸಂಭವಿಸಿದ್ದು, ಕಾರಿನಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು(ಜನವರಿ 01) ಉತ್ತರ ಕನ್ನಡ ಜಿಲ್ಲೆ ಅಂಕೋಲಾ(ankola) ತಾಲೂಕಿನ ಬಾಳೆಗುಳಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ. ಅರುಣ್ ಪಾಂಡ್ಯನ್, ನಿಪುಲ್, ಮೊಹಮ್ಮದ್, ಶೇಖರನ್ ಮೃತ ದುರ್ದೈವಿಗಳು.
ಇನ್ನು ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮಿಳುನಾಡು ಮೂಲದ ಇವರು ಗೋವಾದಲ್ಲಿ ನ್ಯೂ ಇಯರ್ ಪಾರ್ಟಿ ಮುಗಿಸಿ ಗೋಕರ್ಣಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಹುಬ್ಬಳ್ಳಿ ಕಡೆಯಿಂದ ಗೋಕರ್ಣಕ್ಕೆ ತೆರಳುತಿದ್ದ ಬಸ್ ಹಾಗೂ ಅಂಕೋಲ ಭಾಗದಿಂದ ಯಲ್ಲಾಪುರ ಕಡೆಗೆ ತೆರಳುತಿದ್ದ ಕಾರು ಮಧ್ಯೆ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅಂಕೋಲಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹಗಳನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ.
ಕಾರು ಡಿಕ್ಕಿ; ಬಸ್ಗಾಗಿ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿನಿ ಸಾವು
ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕಿನ ನಿಚ್ಛಣಿಕೆ ಗ್ರಾಮದಲ್ಲಿ ನಡೆದುಕೊಂಡು ಹೊರಟಿದ್ದ ಮೂವರು ವಿದ್ಯಾರ್ಥಿನಿಯರಿಗೆ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿನಿ ಮೃತಪಟ್ಟಿದ್ದು ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 8ನೇ ತರಗತಿಯ ವಿದ್ಯಾರ್ಥಿನಿ ಅಕ್ಕವ್ವ ಹೂಲಿಕಟ್ಟಿ ಮೃತ ದುರ್ದೈವಿ.
ಬಸ್ ವ್ಯವಸ್ಥೆ ಇಲ್ಲದಕ್ಕೆ ಈ ಮೂವರು ವಿದ್ಯಾರ್ಥಿನಿಗಳು ನಿನ್ನೆ ಪ್ರತಿಭಟನೆ ನಡೆಸಿದ್ದರು. ಮೃತ ಅಕ್ಕವ್ವ 15 ದಿನದ ಹಿಂದೆ ಶಾಸಕ ಮಹಾಂತೇಶ ದೊಡ್ಡಗೌಡರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರು. ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಬಸ್ ವ್ಯವಸ್ಥೆ ಕಲ್ಪಿಸಿಲ್ಲ. ಬಸ್ ಇಲ್ಲದಿದ್ದಕ್ಕೆ ನಡೆದುಕೊಂಡು ಹೊರಟಿದ್ದ ಮೂವರು ವಿದ್ಯಾರ್ಥಿನಿಯರಿಗೆ ಕಾರು ಡಿಕ್ಕಿಯಾಗಿ ಅವಘಡ ಸಂಭವಿಸಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 4:50 pm, Sun, 1 January 23