ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಳಿ ಮಳೆಗೆ ಅಪಾರ ಆಸ್ತಿ ಹಾನಿ; ನಡುಗಡ್ಡೆಯಾದ ಕೆಲ ಗ್ರಾಮಗಳು
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರವೂ ಮಳೆ ಮುಂದುವರೆದಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಸೋಮವಾರ ಹಲವೆಡೆ ಬಿರುಸಿನ ಮಳೆಯಾಗಿದ್ದು ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಗ್ರಾಮಗಳಿಗೆ ನೀರು ನುಗ್ಗಿದೆ. ಹಾಗೇ ಗಾಳಿ-ಮಳೆಗೆ ಮನೆಗಳ ಛಾವಣಿ ಕುಸಿದಿವೆ.
ಉತ್ತರ ಕನ್ನಡ: ಜಿಲ್ಲೆಯಲ್ಲಿ ಮಂಗಳವಾರವೂ ಮಳೆ (Rain) ಮುಂದುವರೆದಿದ್ದು, ಹವಾಮಾನ ಇಲಾಖೆ (Meteorological Department) ರೆಡ್ ಅಲರ್ಟ್ ಘೋಷಿಸಿದೆ. ಸೋಮವಾರ ಹಲವೆಡೆ ಬಿರುಸಿನ ಮಳೆಯಾಗಿದ್ದು ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ಮುಂದಿನ ಒಂದು ದಿನದಲ್ಲಿ ಜಿಲ್ಲೆಯಾದ್ಯಂತ 11.5 ಸೆಂ.ಮೀ.ನಿಂದ 20 ಸೆಂ.ಮೀ. ಮಳೆ ಸುರಿಯುವ ಸಾಧ್ಯತೆ ಇದ್ದು, ಜತೆಗೆ ಗಾಳಿ ಗಂಟೆಗೆ 45-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಗ್ಗು ಪ್ರದೇಶದಲ್ಲಿನ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು. ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಸೂಚಿಸಲಾಗಿದೆ.
ಕಾಳಿನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಸೋಮವಾರ ಕದ್ರಾ ಜಲಾಶಯದ ಕ್ರಸ್ಟ್ ಗೇಟ್‍ನಿಂದ 61 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗಿದೆ. ಕೊಡಸಳ್ಳಿ, ಬೊಮ್ಮನಳ್ಳಿ ಜಲಾಶಯದಿಂದ ಕ್ರಸ್ಟ್ ಗೇಟ್ ಮೂಲಕ ನೀರು ಬಿಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಮಳೆಯಿಂದ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ 39 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.
ಅಬ್ಬರದ ಮಳೆಯ ಜತೆಗೆ ಗಾಳಿಯ ವೇಗವೂ ಹೆಚ್ಚಿದ್ದ ಕಾರಣ ಅರಬ್ಬಿ ಸಮುದ್ರದಲ್ಲಿ ಆಳೆತ್ತರದ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿವೆ. ಇದರಿಂದ ಕಡಲ್ಕೊರೆತದ ಸಮಸ್ಯೆ ಉಲ್ಬಣಗೊಂಡಿದೆ. ಕಡಲ್ಕೊರೆತ ನಿಯಂತ್ರಣಕ್ಕೆ ಟ್ಯಾಗೋರ್ ಕಡಲತೀರದಲ್ಲಿ ಹಾಕಿದ್ದ ಬಂಡೆಕಲ್ಲುಗಳ ಮೇಲಿನ ಮಣ್ಣು ಕೊಚ್ಚಿಕೊಂಡು ಹೋದ ಪರಿಣಾಮ ಮೂರು ಅಡಿ ಆಳದಲ್ಲಿದ್ದ ಕಲ್ಲುಗಳು ಗೋಚರಿಸುತ್ತಿವೆ.
ಗೋಡೆ ಕುಸಿತ: 1.75 ಲಕ್ಷ ರೂ. ಹಾನಿ
ಹಳಿಯಾಳ ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಕಾರಣ ಪಟ್ಟಣದಲ್ಲಿ ಮನೆಯೊಂದರ ಮೇಲೆ ಮರ ಉರುಳಿ ಚಾವಣಿ ಹಾನಿಯಾಗಿದೆ. ತಾಲ್ಲೂಕಿನಾದ್ಯಂತ ಒಟ್ಟು ಏಳು ಮನೆಗಳ ಗೋಡೆಗಳು ಕುಸಿದು ಬಿದ್ದು ಸುಮಾರು 1.75 ಲಕ್ಷ ರೂ. ಮೌಲ್ಯದ ಆಸ್ತಿ ಹಾನಿಯಾಗಿದೆ.
ಇದನ್ನೂ ಓದಿ: Karnataka Rains: ಕರ್ನಾಟಕದ ಹಲವೆಡೆ ಭಾರೀ ಮಳೆ; ಡಿಸಿಗಳ ಜತೆ ಸಿದ್ದರಾಮಯ್ಯ ವಿಡಿಯೋ ಸಂವಾದ
ಸೋಮವಾರ ಸುರಿದ ವಿಪರೀತ ಮಳೆಯಿಂದಾಗಿ ಪಟ್ಟಣದ ದಲಾಯತ್ ಗಲ್ಲಿಯಲ್ಲಿರುವ ಅಬ್ದುಲ್ ಗಫಾರ ಬೇಪಾರಿ ಎಂಬುವವರ ಮನೆಯ ಮೇಲೆ ಭಾರಿ ಗಾತ್ರದ ಮರ ಬಿದ್ದು, ಮನೆಯ ಚಾವಣಿ ಹಾನಿಯಾಗಿದೆ. ತಾಲ್ಲೂಕಿನ ದುಸಗಿ ಗ್ರಾಮದ ನಾಮದೇವ ಈರಪ್ಪಾ ಸಾಂಬ್ರೇಕರ, ಬಾಬು ಸೋಮನಿಂಗ ಶೀರೋಜಿ, ತೇರಗಾಂವ ಗ್ರಾಮದ ಲಕ್ಷ್ಮಿ ನಾಗೇಶ ಚಾಪೋಲಕರ, ತಿಮ್ಮಾಪುರ ಗ್ರಾಮದ ಶಾಂತಾರಾಮ ಅರ್ಜುನ ವೆಂಕಟಾಪುರ, ಗ್ರಾಮ ಅಜಿಮನಾಳ ತಾಂಡಾದ ಲೋಕೇಶ ಭೀಮಪ್ಪಾ ಲಮಾಣಿ, ನಾಗಪ್ಪ ಭೀಮಪ್ಪಾ ಲಮಾಣಿ, ಮುರ್ಕವಾಡ ಗ್ರಾಮದ ರಮೇಶ ದಾಮೋದರ ಸಡೇಕರ ಅವರ ಮನೆಗಳ ಗೋಡೆ ಕುಸಿದು ಹಾನಿಯಾಗಿವೆ. ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಯಲ್ಲಾಪುರ ತಾಲೂಕಿನಲ್ಲಿ ಸೋಮವಾರದ ಮಳೆಗೆ ಅಪಾರ ಹಾನಿಯಾಗಿದೆ. ಹಳ್ಳದಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಮದನೂರು ಗ್ರಾಮದ ಗೋಯಾ ಬಾಬು ಕೊಕರೆ ಮತ್ತು ಮಾಳು ಬಾಬು ಕೊಕರೆ ಅವರಿಗೆ ಸೇರಿದ 2 ಎಮ್ಮೆಗಳು ಹಳ್ಳದಲ್ಲಿ ಕೊಚ್ಚಿಹೋಗಿ ಮೃತಪಟ್ಟಿವೆ.
ಗೇರಾಳ ಗ್ರಾಮದ ನಾಗವೇಣಿ ನಾಗಪ್ಪ ಗೌಡ ಇವರ ಮನೆ ಕುಸಿದು 10 ಸಾವಿರ ರೂ. ಹಾನಿಯಾಗಿದೆ. ಮಂಚಿಕೇರಿಯ ಉಡಚವ್ವ ಬೊವಿವಡ್ಡರ, ಮದನೂರಿನ ಯಲ್ಲವ್ವ ಗೋಪಾಲ ತಳವಾರ ಮತ್ತು ತೆರೆಜಾ ರುಜಾಯ ಸಿದ್ದಿ ಇವರ ಮನೆ ಕುಸಿದು ಹಾನಿಯಾಗಿದೆ. ಕಿರವತ್ತಿಯ ಇಂದಿರಾ ನಗರದ ಲಕ್ಷ್ಮಿ ಮಂಜುನಾಥ ವಾಲ್ಮೀಕಿ ಇವರ ಮನೆ ಭಾನುವಾರ ಕುಸಿದಿದ್ದು 15 ರೂ. ಸಾವಿರ ಹಾನಿಯಾಗಿದೆ.
ಭಾನುವಾರ ಬೆಳಿಗ್ಗೆಯಿಂದ ಸೋಮವಾರದವರೆಗೆ ಯಲ್ಲಾಪುರ ತಾಲ್ಲೂಕಿನಲ್ಲಿ 17.3 ಸೆಂ.ಮೀ. ಮಳೆಯಾಗಿದೆ. ಮುಂಡಗೋಡ ತಾಲೂಕಿನಲ್ಲಿ ಸೋಮವಾರ ಬಿರುಸಿನ ಮಳೆಯಾಗಿದೆ. ಗ್ರಾಮೀಣ ಭಾಗಗಳಲ್ಲಿ ಕೆಲವು ಕೆರೆಗಳು ಭರ್ತಿಯಾಗಿದ್ದು ಹೆಚ್ಚುವರಿ ನೀರು ಭತ್ತದ ಗದ್ದೆಗಳಿಗೆ ನುಗ್ಗಿ ಬೆಳೆ ಹಾನಿಯಾಗಿದೆ. ಹುನಗುಂದ ಗ್ರಾಮದಲ್ಲಿ ನಜೀರಸಾಬ ಮುಲ್ಲಾನವರ, ಅಂಬವ್ವ ಮುಳೆ, ದಾದಾಪೀರ ಹುಬ್ಬಳ್ಳಿ ಎಂಬುವರ ಮನೆಯ ಗೋಡೆ ಕುಸಿದಿದೆ. ಹುಲಿಹೊಂಡ ಗ್ರಾಮದಲ್ಲಿ ರಾಜು ಸೊಪ್ಪನವರ ಮನೆ ಹಾನಿಯಾಗಿದೆ. ಅರಿಶಿಣಗೇರಿ ಗ್ರಾಮದ ರಾಜು ಅಬ್ರಹಾಂ
ಅವರ ಮನೆ ಗೋಡೆ ಬಿದ್ದಿದೆ. ಮಳಗಿಯ ಇಂದಿರಾನಗರದಲ್ಲಿ ಎರಡು ಮನೆಗಳಿಗೆ ಹಾನಿಯಾಗಿವೆ. ಗೊಟಗೋಡಿಕೊಪ್ಪದಲ್ಲಿ ಮೂರು ಮನೆಗಳಿಗೆ ಹಾನಿಯಾಗಿದ್ದು, ಹಾನಿಯಾದ ಸ್ಥಳಗಳಿಗೆ ಪಂಚಾಯತ್ ರಾಜ್ ಎಂಜಿನಿಯರ್ ಪ್ರದೀಪ ಭಟ್ಟ ಹಾಗೂ ಕಂದಾಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ನಿರಂತರ ಮಳೆಗೆ ಗಂಗಾವಳಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅಂಕೋಲ ತಾಲೂಕಿನ ಹಿಚ್ಕಡ್, ಕೂರ್ವೆ, ದಂಡಿಯಾ ಗ್ರಾಮಗಳಿಗೆ ನೆರೆ ಆತಂಕ ಶುರುವಾಗುದೆ. ಗಂಗಾವಳಿ ನದಿ ಅಬ್ಬರಕ್ಕೆ ಕೂರ್ವೆ ಗ್ರಾಮ ಸಂಪರ್ಕ ಕಳೆದುಕೊಂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ