ಪ್ರವಾಸಿ ತಾಣಗಳಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯುತ್​ ದೀಪವಿಲ್ಲದೆ ರಾತ್ರಿ ಸಂಚಾರ ದುಸ್ತರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 16, 2022 | 6:20 PM

ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ಬ್ಲ್ಯೂ ಫ್ಯ್ಲಾಗ್ ಇಕೋ ಬೀಚ್ ಹಾಗೂ ಅದರ ಮುಂದೆಯೇ ಅರಣ್ಯ ಇಲಾಖೆಗೆ ಸೇರಿದ ಕಾಂಡ್ಲಾ ಬೋರ್ಡ್ ವಾಕ್ ಇದೆ. ಆದರೆ ಇಲ್ಲಿಂದ ಹತ್ತಿರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ವಿದ್ಯುತ್ ದೀಪದ ವ್ಯವಸ್ಥೆಯೇ ಇಲ್ಲದೆ ಅಪಘಾತಗಳು ಸಂಭವಿಸುತ್ತಿದೆ.

ಪ್ರವಾಸಿ ತಾಣಗಳಿಗೆ ಸಂಪರ್ಕಿಸುವ  ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯುತ್​ ದೀಪವಿಲ್ಲದೆ ರಾತ್ರಿ ಸಂಚಾರ ದುಸ್ತರ
ಕಾರವಾರ
Follow us on

ಕಾರವಾರ: ಉತ್ತರ ಕನ್ನಡ ಜಿಲ್ಲೆಯು ದಟ್ಟಾಡವಿಗಳಿಂದ ಕೂಡಿದ್ದು ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಕತ್ತಲು ಆವರಿಸುತ್ತಿದ್ದಂತೇ ಹಿಂತಿರುಗುವಾಗ ಪ್ರವಾಸಿಗರು ಅಪಘಾತಕ್ಕೀಡಾಗುತ್ತಿರು ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಾರಣ ಹೆದ್ದಾರಿಯಲ್ಲಿ ವಿದ್ಯುತ್ ದೀಪ ಇಲ್ಲದಿರುವುದು.

ಹೌದು.. ಇಲ್ಲಿರುವ ಹಲವು ಪ್ರವಾಸಿ ತಾಣಗಳ ಪೈಕಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಹೊನ್ನಾವರದ ಕಾಸರಕೋಡಿನ ಬ್ಲ್ಯೂ ಫ್ಲ್ಯಾಗ್ ಇಕೋ ಬೀಚ್ ಹಾಗೂ ಅದರ ಮುಂದೆ ರಸ್ತೆಯ ಇನ್ನೊಂದು ಕಡೆಯಿರುವ ಕಾಂಡ್ಲಾ ಬೋರ್ಡ್ ವಾಕ್ ಸಾಕಷ್ಟು ಖ್ಯಾತಿ ಪಡೆದಿದೆ. ಈ ಕಾರಣದಿಂದಲೇ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು  ಕುಟುಂಬ ಹಾಗೂ ಗೆಳೆಯರೊಂದಿಗೆ ಈ ಸ್ಥಳಗಳಿಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಾರೆ.  ಆದ್ರೆ,  ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯುತ್ ದೀಪದ ವ್ಯವಸ್ಥೆಯೇ ಇಲ್ಲವಾಗಿದೆ. ಇದಕ್ಕೆ ಸಾಕ್ಷ್ಯವೆಂಬಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದಿಗೂ ಹೆಲ್ಮೆಟ್, ಬೈಕ್ ಮಡಗಡ್ ತುಂಡುಗಳು ಹಾಗೂ ಮಕ್ಕಳ ಚಪ್ಪಲಿಯನ್ನು ಕಾಣಬಹುದಾಗಿದೆ.

ಹೊನ್ನಾವರ ಕರವೇ ವಿಭಾಗದ ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿ, ಈ ರಾಷ್ಟ್ರೀಯ ಹೆದ್ದಾರಿಯನ್ನು ಐಆರ್‌ಬಿ ಕಂಪನಿ ನಿರ್ಮಾಣ ಮಾಡಿದೆ. ನಿಯಮ ಬದ್ಧವಾಗಿ ಈ ಪ್ರದೇಶದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕಿತ್ತು. ಆದರೆ, ಇಲ್ಲಿ ಒಂದೇ ಒಂದು ವಿದ್ಯುತ್ ದೀಪ ಅಳವಡಿಸಿಲ್ಲ. ಈ ರಾಷ್ಟ್ರೀಯ ಹೆದ್ದಾರಿಯ ಒಂದು ಕಡೆ ಪ್ರವಾಸೋದ್ಯಮ ಇಲಾಖೆಗೆ ಸೇರಿರುವ ಅಂತಾರಾಷ್ಟ್ರೀಯ ಮಾನ್ಯತೆಯ ಇಕೋ ಬೀಚ್ ಇದ್ದು ಹಾಗೂ ಮತ್ತೊಂದು ಕಡೆ ಅರಣ್ಯ ಇಲಾಖೆಗೆ ಸೇರಿದ ಕಾಂಡ್ಲಾ ಬೋರ್ಡ್ ವಾಕ್ ಇದೆ. ಅರಣ್ಯ ಇಲಾಖೆ ಅಥವಾ ಐಆರ್‌ಬಿ ಕಂಪೆನಿಯಾಗಲೀ ಎಷ್ಟು ದಿನಗಳಾದರೂ ಇಲ್ಲಿನ ದೀಪದ ಅಳವಡಿಕೆಯ ಬಗ್ಗೆ ಯೋಚನೆಯನ್ನು ಮಾಡಿಲ್ಲ. ಇಲ್ಲಿನ ಸಾರ್ವಜನಿಕರು ಅನೇಕ ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ. ಇನ್ನು ಜನಪ್ರತಿನಿಧಿಗಳು ತಮಗೆ ಯಾವುದೇ ಸಂಬಂಧವಿಲ್ಲದಂತಿದ್ದಾರೆ.

ಒಟ್ಟಿನಲ್ಲಿ ಐಆರ್‌ಬಿ, ಜಿಲ್ಲಾಡಳಿತ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಕಷ್ಟು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನಾದರೂ ವಿದ್ಯುತ್ ದೀಪ ಅಳವಡಿಸಿ ಜನಸಾಮಾನ್ಯರ ಪ್ರಾಣ ರಕ್ಷಿಸಬೇಕಾಗಿದೆ.

ವರದಿ:ವಿನಾಯಕ ಬಡಿಗೇರ ಟಿವಿ 9 ಕಾರವಾರ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Wed, 16 November 22