ಕಳೆದೊಂದು ವಾರದಿಂದ ಹಳಿಯಾಳದಲ್ಲಿ ಸರಣಿ ಕಳ್ಳತನ, ಖದೀಮರನ್ನು ಹಿಡಿಲು ತಂಡ ರಚನೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 14, 2024 | 10:14 PM

ಕಳೆದ ಫೆ.13 ರಂದು ಬುರ್ಖಾ ಧರಿಸಿಕೊಂಡು ಬಂದ‌ ಮಹಿಳೆಯರ ಗ್ಯಾಂಗ್‌ ಚಿನ್ನವನ್ನ ಕಳ್ಳತನ ಮಾಡಿದ ಘಟನೆ ಹಳಿಯಾಳ (Haliyal)ದ ಶ್ರೀ ಪೇಟೆ ಬಸವೇಶ್ವರ ಅಂಗಡಿ ಸಂಕೀರ್ಣದಲ್ಲಿ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಹಳಿಯಾಳ(Haliyala) ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಸರಣಿ ಕಳ್ಳತನ ನಡೆಯುತ್ತಿದ್ದು, ವ್ಯಾಪಾರಸ್ಥರು ಆತಂಕದಲ್ಲಿದ್ದಾರೆ.

ಕಳೆದೊಂದು ವಾರದಿಂದ ಹಳಿಯಾಳದಲ್ಲಿ ಸರಣಿ ಕಳ್ಳತನ, ಖದೀಮರನ್ನು ಹಿಡಿಲು ತಂಡ ರಚನೆ
ಹಳಿಯಾಳದಲ್ಲಿ ಕಳ್ಳತನ ಮಾಡುತ್ತಿರುವ ಖದೀಮರು
Follow us on

ಉತ್ತರ ಕನ್ನಡ, ಮೇ.14: ಜಿಲ್ಲೆಯ ಹಳಿಯಾಳ(Haliyala) ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಸರಣಿ ಕಳ್ಳತನ ನಡೆಯುತ್ತಿದ್ದು, ವ್ಯಾಪಾರಸ್ಥರು ಆತಂಕದಲ್ಲಿದ್ದಾರೆ. ಪಟ್ಟಣದ ಮುರ್ಕವಾಡ, ಮಾರುಕಟ್ಟೆ ರಸ್ತೆ, ಫಿಶ್ ಮಾರ್ಕೆಟ್ , ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಕಳೆದ ಒಂದು ವಾರದಿಂದ 5 ಅಂಗಡಿ ಮತ್ತು 2 ಮನೆ ಕಳ್ಳತನವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಈ ಖತರ್ನಾಕ್ ಖದೀಮರು ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಳ್ಳತನ ನಡೆಸುತ್ತಿದ್ದಾರೆ.

ಎಲ್ಲೆಲ್ಲಿ ಕಳ್ಳತನ

ಬಸ್ ನಿಲ್ದಾಣದ ರಸ್ತೆಯಲ್ಲಿರುವ ಶಾರದಾ ಮೊಬೈಲ್ ಅಂಗಡಿಯ ಶಟರ್ ಮುರಿದು ಒಳಗೆ ನುಗ್ಗಿದ್ದ ಕಳ್ಳರು, ಅಂಗಡಿಯ ಸಿಸಿ ಕ್ಯಾಮೆರಾದ ಡಿವಿಆರ್ ಕದ್ದು ಅಂಗಡಿಯನ್ನು ದೋಚಲು ವಿಫಲ ಯತ್ನ ನಡೆಸಿದ್ದಾರೆ.

ಹಳಿಯಾಳ ಮುಖ್ಯ ರಸ್ತೆಯ ಮಾರ್ಕೆಟ್‌‌ನಲ್ಲಿರೋ ಮೇಘರಾಜ ಶೆಟ್ಟಿ ಮಾಲಿಕತ್ವದ ಅರಿಹಂತ ಎಲೆಕ್ಟ್ರಾನಿಕ್ಸ್ ಅಂಗಡಿಯ ಬಾಗಿಲನ್ನು ಮುರಿದಿದ್ದು, ಅಂಗಡಿಯಲ್ಲಿದ್ದ 15 ಸಾವಿರ ರೂ.ಗೂ ಅಧಿಕ ನಗದು ದೋಚಿ ಪರಾರಿಯಾಗಿದ್ದಾರೆ.

ಫಿಶ್ ಸರ್ಕಲ್‌ನ ಚರ್ಚ್ ಅಂಗಡಿ ಸಂಕೀರ್ಣದಲ್ಲಿರುವ ಸಾವೇರ ಕ್ರಾಸ್ಟಾ ಅವರ ಮಾಲಿಕತ್ವದ ಅಂಗಡಿಯಲ್ಲೂ ಕಳ್ಳತನ ನಡೆದಿದ್ದು, ಮೌಂಟ್ ಮೇರಿ ಬೇಕರಿಯ ಬಾಗಿಲನ್ನು ಚಾಣಾಕ್ಷತನದಿಂದ ಮುರಿದು ಒಳ ನುಗ್ಗಿ, ಅಂಗಡಿಯಲ್ಲಿದ್ದ ಒಂದು ಸಾವಿರ‌ ರೂ.ಗೂ ಅಧಿಕ ನಗದು ಎಗರಿಸಿದ್ದಾರೆ.

ಇದನ್ನೂ ಓದಿ:ಉಡುಪಿ: ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರಿಂದ ಧರ್ಮದೇಟು

ಹಳಿಯಾಳ ಮಾರ್ಕೆಟ್‌ನಲ್ಲಿರುವ ಲಕ್ಷ್ಮೀಕಾಂತ ಪೂಜಾರಿ ಎಂಬವರ ಶ್ರೀ ಲಕ್ಷ್ಮೀ ಪೋಟೋ ಸ್ಟುಡಿಯೋದಲ್ಲೂ ಬಾಗಿಲಿನ ಬೀಗ ಮುರಿದು ಅಂಗಡಿಯಲ್ಲಿದ್ದ 12 ಸಾವಿರ ರೂ. ಹಾಗೂ 30 ಸಾವಿರ ರೂ. ರೂ ಮೌಲ್ಯದ ಡಿಎಸ್‌ಎಲ್‌ಆರ್ ಕ್ಯಾಮೆರಾವನ್ನು ಕದ್ದಿದ್ದು, ನಂತರ ಅದೇ ಸ್ಟುಡಿಯೋಗೆ‌ ಮತ್ತೆ ಆಗಮಿಸಿದ ಕಳ್ಳರು, ಪುನಃ ಕಳ್ಳತನಕ್ಕೆ ಯತ್ನಿಸಿ ವಿಫಲರಾಗಿದ್ದಾರೆ.

ಜೊತೆಗೆ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರೋ ಶ್ರೀ ವೈನ್ಸ್ ಅಂಗಡಿಯ ಶಟರ್ಸ ಮುರಿದು 4 ಸಾವಿರ ರೂ. ದೋಚಿ ಪರಾರಿಯಾಗಿದ್ದಾರೆ.

ಇನ್ನು ಮುರ್ಕವಾಡ ಗ್ರಾಮದಲ್ಲಿ ಶಂಭಾಜೀ ಗುತ್ತೇನ್ನವರ ಮಾಲಿಕತ್ವದ ಮನೆಗೆ ನುಗ್ಗಿಯೂ‌ ಕಳ್ಳತನ ಮಾಡಿದ ಈ ಖದೀಮರು,
ಒಂದು ಚಿನ್ನದ ಮಂಗಲಸೂತ್ರ, ಮೂರು ಉಂಗುರ, ಇನ್ನಿತರ ಚಿನ್ನದ ಆಭರಣಗಳು ಸೇರಿದಂತೆ ಬೆಳ್ಳಿಯ ಕೆಲವು ವಸ್ತುಗಳನ್ನು ಎಗರಿಸಿದ್ದು, ಬಳಿಕ ಹನುಮಂತ ಶಿಂಧೆ ಎಂಬವವರ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿ ವಿಫಲರಾಗಿದ್ದಾರೆ.

ಇದರಿಂದ ಇಡೀ ಹಳಿಯಾಳ ಪಟ್ಟಣವೇ ಆತಂಕದಲ್ಲಿದ್ದು, ಯಾವಾಗ ಖದೀಮರು ನಮ್ಮ ಅಂಗಡಿ, ಮನೆಗಳನ್ನು ಕಳ್ಳತನ ಮಾಡುತ್ತಾರೋ ಎಂಬ ಭಯದಲ್ಲಿಯೇ ದಿನಕಳೆಯುವಂತೆ ಮಾಡಿದೆ. ಈ ಹಿನ್ನಲೆ ಸದ್ಯ ಕಳ್ಳರನ್ನು ಹಿಡಿಯಲು ಹಳಿಯಾಳ ಪೊಲೀಸರು ತಂಡವೊಂದನ್ನು ರಚನೆ ಮಾಡಿದ್ದು, ಖದೀಮರ ಹುಡುಕಾಟದಲ್ಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ