ಕಾರವಾರ: ಸಮುದ್ರದಲ್ಲಿ ಮುಳುಗುತ್ತಿದ್ದ ಆರು ಮಕ್ಕಳನ್ನು ಲೈಫ್ ಗಾರ್ಡ್ ಹಾಗೂ ಟೂರಿಸ್ಟ್ ಮಿತ್ರ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ನಡೆದಿದೆ. ಹುಬ್ಬಳ್ಳಿಯಿಂದ ಪ್ರವಾಸಕ್ಕೆ ಆಗಮಿಸಿದ್ದ ಒಂದೇ ಕುಟುಂಬದ 4 ಮಕ್ಕಳು ಸೇರಿ ಒಟ್ಟು ಆರು ಮಂದಿ ಕಡಲತೀರದಲ್ಲಿ ಆಟವಾಡುತ್ತಿದ್ದರು. ಆದರೆ ಒಮ್ಮೆಲೆ ಬಂದ ಅಲೆಯಿಂದ ಎಲ್ಲರೂ ಕೊಚ್ಚಿ ಹೋಗಿದ್ದಾರೆ.
ತಕ್ಷಣ ಕುಟುಂಬದ ಇತರರು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಪ್ರವಾಸಿಗರು ಅಪಾಯದಲ್ಲಿರುವ ಮಾಹಿತಿ ತಿಳಿದು ರಕ್ಷಣೆಗೆ ಧಾವಿಸಿದ ಲೈಫ್‌ಗಾರ್ಡ್ ಮತ್ತು ಟೂರಿಸ್ಟ್ ಮಿತ್ರ ಸಿಬ್ಬಂದಿ ಆರು ಜನರನ್ನೂ ರಕ್ಷಿಸಿದ್ದಾರೆ. ಮಕ್ಕಳು ನೀರು ಕುಡಿದಿದ್ದರಿಂದ ಪ್ರಜ್ಞೆ ತಪ್ಪಿದ್ದರು. ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿದ್ದರಿಂದ ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. ಪ್ರವಾಸಿಗರು ಹುಬ್ಬಳ್ಳಿ ಮೂಲದವರು ಎಂಬುದು ತಿಳಿದುಬಂದಿದೆ.
ಪ್ರವಾಸಿಗರೇ ಗಮನಿಸಿ, ಗೋಕರ್ಣ ಸಮುದ್ರ ತೀರದಲ್ಲಿ 144 ಸೆಕ್ಷನ್ ಜಾರಿ
ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಎಲ್ಲಾ ಬೀಚ್ಗಳ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 13ರಂದು 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಸೆಪ್ಟೆಂಬರ್ 13ರಿಂದ ಒಂದು ತಿಂಗಳ ಕಾಲ ಗೋಕರ್ಣದ ಎಲ್ಲಾ ಸಮುದ್ರ ತೀರಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿಲಾಗಿದ್ದು, ಪ್ರವಾಸಿಗರು ಮುಂದಿನ ಒಂದು ತಿಂಗಳ ಕಾಲ ಸಮುದ್ರ ತೀರಗಳನ್ನು ಪ್ರವೇಶಿಸುವಂತಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಆದೇಶ ಹೊರಡಿಸಿದ್ದಾರೆ.
ಗೋಕರ್ಣ ಬೀಚ್‌ಗಳಲ್ಲಿ ಪ್ರವಾಸಿಗರು ಸಾವನ್ನಪ್ಪುವುದನ್ನು ತಪ್ಪಿಸಲು 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಅನುಮತಿ ಪಡೆಯದೇ ಇನ್ನು ಮುಂದೆ ಯಾರೂ ಗೋಕರ್ಣ ಬೀಚ್‌ಗೆ ತೆರಳುವಂತಿಲ್ಲ. ಈಗಾಗಲೇ ರಾಜ್ಯ ಹಾಗೂ ಹೊರ ರಾಜ್ಯದ ಹಲವು ಪ್ರವಾಸಿಗರು ಗೋಕರ್ಣದಲ್ಲಿ ಸಮುದ್ರಕ್ಕಿಳಿದು ಜೀವ ಕಳೆದುಕೊಂಡಿದ್ದರು. ಪೊಲೀಸರು ಹಾಗೂ ಲೈಫ್ ಗಾರ್ಡ್ಸ್ ಸಿಬ್ಬಂದಿ ತಡೆದರೂ ಬೇರೆಡೆಯಿಂದ ಕಣ್ಣು ತಪ್ಪಿಸಿ ಸಮುದ್ರಕ್ಕಿಳಿದು ನೀರು ಪಾಲಾಗುತ್ತಿದ್ದರು. ಈ ಕಾರಣದಿಂದ ಸೇಫ್ ಬೀಚ್ ಹಾಗೂ ಡೇಂಜರ್ ಬೀಚ್ ಎಂದು ಎರಡು ವಿಭಾಗವನ್ನಾಗಿ ಪೊಲೀಸರು ಸಮುದ್ರ ತೀರವನ್ನು ವಿಂಗಡಿಸಿದ್ದಾರೆ. ಆದರೂ ಸದ್ಯದ ಮಟ್ಟಿಗೆ ಯಾರೂ ಸಮುದ್ರಕ್ಕಿಳಿಯದಂತೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ವಾರಾಂತ್ಯಗಳಂದು ಬೆಂಗಳೂರು ಮತ್ತಿತರ ನಗರಗಳು ಮತ್ತು ಉತ್ತರ ಕರ್ನಾಟಕದ ಭಾಗದಿಂದ ನೂರಾರು ಪ್ರವಾಸಿಗರು ಗೋಕರ್ಣಕ್ಕೆ ಆಗಮಿಸುತ್ತಾರೆ. ಇತ್ತೀಚಿನ ಕೆಲವು ದಿನಗಳಲ್ಲಿ ಹಲವು ಪ್ರವಾಸಿಗರು ಸಮುದ್ರ ಪಾಲಾದ ಘಟನೆ ನಡೆದಿದೆ. ಅಲ್ಲದೇ ಇತ್ತೀಚಿಗಷ್ಟೇ ಸೆಲ್ಪಿ ತೆಗೆಯಲು ಹೋದ ಪ್ರವಾಸಿಗನೋರ್ವ ಸಮುದ್ರದಲ್ಲಿ ಎಲ್ಲರ ಎದುರೇ ಕೊಚ್ಚಿಕೊಂಡು ಹೋದ ಘಟನೆಯೂ ನಡೆದಿತ್ತು.
ಇದನ್ನೂ ಓದಿ:
Explained: ನಾಯಿ ಮಾಂಸ ನಿಷೇಧಿಸಲು ದಕ್ಷಿಣ ಕೊರಿಯಾ ಅಧ್ಯಕ್ಷ ಚಿಂತನೆ; ಕಾರಣವೇನು? ಇಲ್ಲಿದೆ ಕುತೂಹಲಕಾರಿ ಮಾಹಿತಿ
ಪೂರ್ತಿ ಸಂಬಳ ನನಗೇ ಕೊಡು ಎಂದು ಪತ್ನಿಯನ್ನು ಥಳಿಸುವ ಪತಿ; ವಿದೇಶಕ್ಕೆ ಹೋದರೂ ಸರಿಯಾಗದ ವರ್ತನೆ, ಪೊಲೀಸರಿಗೆ ದೂರು
Published On - 6:08 pm, Mon, 4 October 21