ಕಾರವಾರ: ಅವೈಜ್ಞಾನಿಕವಾಗಿ ಗುಡ್ಡ ಕೊರೆದು ರಸ್ತೆ ನಿರ್ಮಾಣ; ಗುಡ್ಡ ಕುಸಿತದ ಭೀತಿಯಲ್ಲಿ ಗ್ರಾಮಸ್ಥರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 22, 2023 | 12:07 PM

ಕಾರವಾರ ತಾಲೂಕಿನ ಬೈತಖೋಲ್ ಗುಡ್ಡದ ಬಳಿ ನೌಕಾನೆಲೆಯಿಂದ ಬೃಹತ್ ಪ್ರಮಾಣದಲ್ಲಿ ಗುಡ್ಡ ಕೊರೆದು ರಸ್ತೆ ಕಾಮಗಾರಿಯೊಂದನ್ನು ನಡೆಸುತ್ತಿದ್ದು ಇದು ಸ್ಥಳೀಯರಲ್ಲಿ ಗುಡ್ಡ ಕುಸಿತದ ಆತಂಕ ಸೃಷ್ಟಿಸಿದೆ. ಕೂಡಲೇ ಕಾಮಗಾರಿಯನ್ನ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

ಕಾರವಾರ: ಅವೈಜ್ಞಾನಿಕವಾಗಿ ಗುಡ್ಡ ಕೊರೆದು ರಸ್ತೆ ನಿರ್ಮಾಣ; ಗುಡ್ಡ ಕುಸಿತದ ಭೀತಿಯಲ್ಲಿ ಗ್ರಾಮಸ್ಥರು
ಪ್ರಿತಂ ಮಾಸೂರಕರ್, ಬೈತಖೋಲ್ ನಿರಾಶ್ರಿತರ ಸಂಘದ ಅಧ್ಯಕ್ಷ
Follow us on

ಉತ್ತರ ಕನ್ನಡ: ಜಿಲ್ಲೆಯ ಕಾರವಾರ ತಾಲೂಕಿನ ಅರಗಾ ಗ್ರಾಮದಲ್ಲಿ ನಿರ್ಮಾಣವಾದ ಈ ಕದಂಬ ನೌಕಾನೆಲೆಗೆ ಈ ಹಿಂದೆ ಸಾವಿರಾರು ಕುಟುಂಬಗಳು ತಮ್ಮ ಮನೆ ಜಮೀನುಗಳನ್ನು ಬಿಟ್ಟುಕೊಟ್ಟು ನಿರಾಶ್ರಿತರಾಗಿವೆ. ಇದರ ನಡುವೆ ತಾಲೂಕಿನ ಬೈತಖೋಲ್ ಭೂದೇವಿ ಗುಡ್ಡ ವ್ಯಾಪ್ತಿಯ ವಾಚ್ ಟವರ್​ಗೆ ಸಂಪರ್ಕ ಕಲ್ಪಿಸಲು ಬೃಹತ್ ಪ್ರಮಾಣದಲ್ಲಿ ಗುಡ್ಡವನ್ನು ಕೊರೆದು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಕಳೆದ ಒಂದು ತಿಂಗಳಿಂದ ನಿರಂತರವಾಗಿ ಕಾಮಗಾರಿ ನಡೆಸುತ್ತಿದ್ದು ಇದೀಗ ಗುಡ್ಡದ ಬುಡದಲ್ಲಿರುವ ನೂರಾರು ನಿವಾಸಿಗಳಿಗೆ ಆತಂಕ ಶುರುವಾಗಿದೆ. ಕಾರವಾರ ಸೂಕ್ಷ್ಮ ಪ್ರದೇಶವಾಗಿದ್ದು ಇಂತಹ ಪ್ರದೇಶದಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸುವುದರಿಂದ ಮಳೆಗಾಲದಲ್ಲಿ ಗುಡ್ಡ ಕುಸಿಯುವ ಭೀತಿ ಇದೀಗ ಸ್ಥಳೀಯರನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿರುವ ಸ್ಥಳಿಯರು ಕಾಮಗಾರಿ ಸ್ಥಗಿತಕ್ಕೆ ಆಗ್ರಹಿಸಿದ್ದಾರೆ.

ಇನ್ನು 2009 ರಲ್ಲಿ ನೌಕಾನೆಲೆಯಿಂದ ಇದೇ ಪ್ರದೇಶದಲ್ಲಿ ಗುಡ್ಡ ತೆರವು ಮಾಡಿದಾಗ ಗುಡ್ಡದ ನೀರು ಹರಿದುಹೋಗಲು ಸಾಧ್ಯವಾಗದೇ ಮಳೆಗಾಲದಲ್ಲಿ ಗುಡ್ಡ ಕುಸಿದು 8-10 ಮನೆಗಳಿಗೆ ಹಾನಿಯಾಗಿತ್ತು. ಆದರೆ ಇದೀಗ ಯಾವುದೇ ಪರವಾನಿಗೆ ಇಲ್ಲದೆ ದೇಶದ ರಕ್ಷಣೆಗಾಗಿ ಮಾಡಲಾಗುತ್ತಿದೆ ಎಂದು ಗುಡ್ಡ ತೆರವು ಮಾಡುತ್ತಿದ್ದಾರೆ. ಆದರೆ ಈ ರೀತಿ ಅವೈಜ್ಞಾನಿಕ ಕಾಮಗಾರಿ ಮಾಡಿ ಅವಘಡಗಳು ಸಂಭವಿಸಿದಲ್ಲಿ ಸುಮಾರು 200 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಲಿದೆ. ಅಲ್ಲದೆ ಜನರ ಪ್ರಾಣಕ್ಕೆ ಅಪಾಯವಿದ್ದರು ಜಿಲ್ಲಾಡಳಿತ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಕೂಡಲೇ ಈ ಬಗ್ಗೆ ಸಭೆ ನಡೆಸಿ ಕಾಮಗಾರಿ ಸ್ಥಗಿತಗೊಳಿಸಲು ಅಗತ್ಯ ಕ್ರಮ‌ಕೈಗೊಳ್ಳಬೇಕು. ಇಲ್ಲದೆ ಇದ್ದಲ್ಲಿ ನಮ್ಮ ಪ್ರಾಣ ರಕ್ಷಣೆಗಾಗಿ ಬೃಹತ್ ಪ್ರತಿಭಟನೆ ನಡೆಸಲಿದ್ದು ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ಇದನ್ನೂ ಓದಿ:Video: ಉತ್ತರಾಖಂಡ್​ನಲ್ಲಿ ಮತ್ತೊಮ್ಮೆ ಗುಡ್ಡಕುಸಿತ; ಕಲ್ಲು-ಮಣ್ಣು ರಸ್ತೆಗೆ ಬೀಳುವ ವೇಗನೋಡಿ ಬೆಚ್ಚಿಬಿದ್ದ ಜನರು

ಒಟ್ಟಾರೆ ದೇಶದ ರಕ್ಷಣೆ ನೆಪದಲ್ಲಿ ಅವೈಜ್ಞಾನಿಕವಾಗಿ ಬೃಹತ್ ಗುಡ್ಡ ಕೊರೆದು ಸ್ಥಳೀಯ ನಿವಾಸಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಗಂಭೀರ ಆರೋಪ ಕೇಳಿಬರುತ್ತಿದೆ. ಕೂಡಲೇ ಜಿಲ್ಲಾಡಳಿತ, ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯ ಸತ್ಯಾಸತ್ಯತೆ ತಿಳಿದು ಬಗೆಹರಿಸುವ ಮೂಲಕ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕಾಗಿದೆ.

ವರದಿ: ವಿನಾಯಕ ಬಡಿಗೇರ ಟಿವಿ9 ಕಾರವಾರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ