ಕಾರವಾರ, ಫೆಬ್ರವರಿ 2: ಉತ್ತರ ಕನ್ನಡ ಜಿಲ್ಲೆಯಲ್ಲಿ (Uttara Kannada) ಮಂಗನ ಕಾಯಿಲೆ (Kyasanur Forest Disease) ಪ್ರಕರಣ ಹೆಚ್ಚುತ್ತಿದ್ದು, ಕಳೆದ 10 ದಿನಗಳಲ್ಲಿ 21 ಜನರಿಗೆ ಸೋಂಕು ತಗುಲಿದೆ. ಸಿದ್ದಾಪುರ (Siddapur) ತಾಲೂಕಿನಲ್ಲಿ ಮಂಗನ ಕಾಯಿಲೆ ಕಂಡು ಬರುತ್ತಿದೆ. ಬಿಸಿಲು ಹೆಚ್ಚಾದಂತೆ ಕಾಯಿಲೆ ಹೆಚ್ಚಾಗುವ ಆತಂಕವೂ ಜನರಲ್ಲಿ ಮನೆ ಮಾಡಿದೆ. ಸೋಂಕು ಹರಡುವಿಕೆ ತಡೆಗೆ ಸದ್ಯ ರೋಗ ನಿರೋಧಕ ಲಸಿಕೆ ಇಲ್ಲ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ವಹಿಸಿಕೊಳ್ಳುವುದೊಂದೇ ದಾರಿ ಮತ್ತು ಅತೀ ಅವಶ್ಯಕ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನೀರಜ್ ‘ಟಿವಿ9’ಗೆ ತಿಳಿಸಿದ್ದಾರೆ.
ಮಂಗನ ಕಾಯಿಲೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಅರಣ್ಯಕ್ಕೆ ಹೋಗುವುದನ್ನು ಕಡಿಮೆ ಮಾಡಲು ಸೂಚನೆ ನೀಡುತ್ತಿದ್ದೇವೆ. ಜ್ವರ, ಕೆಮ್ಮು ಲಕ್ಷಣ ಕಂಡು ಬಂದಲ್ಲಿ ಸಂಪರ್ಕಿಸಲು ಸೂಚನೆ ನೀಡಿದ್ದೇವೆ. ಒಟ್ಟು 21 ಜನರ ಪೈಕಿ 8 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರು ಮಂಗಳೂರು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ ಆರು ಜನ ಸಿದ್ದಾಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ 13 ಜನ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಎರಡನೆ ಬಾರಿ ಮತ್ತೆ ಮಂಗನ ಕಾಯಿಲೆಗೆ ತುತ್ತಾದರೆ ಜ್ವರ ಹೆಚ್ಚಾಗಿ ರಕ್ತ ಸ್ರಾವ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಸದ್ಯ ಜನರು ಹೆಚ್ಚಿನ ಮುಂಜಾಗ್ರತೆ ವಹಿಸುವುದು ಅತೀ ಅಗತ್ಯ. ಈ ಹಿಂದೆ ಬಿಡುಗಡೆ ಮಾಡಿದ್ದ ಲಸಿಕೆ ಹೆಚ್ಚಿನ ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಆ ಲಸಿಕೆಯನ್ನು ಕೊಡುವುದನ್ನು ಈಗಾಗಲೇ ನಿಲ್ಲಿಸಿದ್ದೆವೆ. ಹೊಸ ಲಸಿಕೆ ಇದುವರೆಗೂ ಬಂದಿಲ್ಲ. ಲಸಿಕೆ ಬರುವ ವರೆಗೂ ಮುಂಜಾಗ್ರತೆ ಒಂದೇ ಪರಿಹಾರ ಎಂದು ಅವರು ತಿಳಿಸಿದ್ದಾರೆ.
ಸಿದ್ದಾಪುರದಲ್ಲಿ ಕಳೆದ 15 ದಿನದ ಹಿಂದೆ ಮಂಗ ಒಂದು ಸಾವನಪ್ಪಿತ್ತು. ಅದರ ಉಣ್ಣೆಯಿಂದ ಸಿದ್ದಾಪುರದಲ್ಲಿ ಮಂಗನ ಕಾಯಿಲೆ ಪತ್ತೆ ಆಗಿದೆ ಎನ್ನಲಾಗಿದೆ.
ಮಂಗನ ಕಾಯಿಲೆ ಎಂಬುದು ಮಂಗಗಳಿಗೆ ಸೋಂಕು ತಗುಲಿಸುವ ವೈರಸ್‌ನಿಂದ ಉಂಟಾಗುವ ಕಾಯಿಲೆಯಾಗಿದೆ. 1957 ರಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ ಇದು ಪತ್ತೆಯಾಗಿತ್ತು. ಅಂದಿನಿಂದ ವಾರ್ಷಿಕವಾಗಿ ಸುಮಾರು 400-500 ರಷ್ಟು ಪ್ರಕರಣಗಳು ಮಾನವರಲ್ಲಿ ಪತ್ತೆಯಾಗಿವೆ. ಈ ಸೋಂಕು ಪ್ರಾಣಿಗಳಿಂದ ವ್ಯಕ್ತಿಗಳಿಗೆ ಸಾಂಕ್ರಾಮಿಕವಾಗಿ ಹರಡುತ್ತದೆ. ಸೋಂಕು ತಗುಲಿದವರಲ್ಲಿ ಜ್ವರ, ತಲೆನೋವು ಮತ್ತು ಶೀತ ಕಂಡುಬರುತ್ತದೆ.
ವಾಕರಿಕೆ, ವಾಂತಿ, ಸ್ನಾಯು ಬಿಗಿತ, ಮಾನಸಿಕ ಅಸ್ವಸ್ಥತೆ, ನಡುಕ, ದೃಷ್ಟಿ ಮಂದವಾಗುವುದು, ತೀವ್ರ ತಲೆನೋವು ಮಂಗನ ಕಾಯಿಲೆಯ ಪ್ರಮುಖ ಲಕ್ಷಣಗಳಾಗಿವೆ. ಈ ರೋಗದ ಕಾಲಾವಧಿಯು ಸಾಮಾನ್ಯವಾಗಿ 3-8 ದಿನಗಳು. ಆದಾಗ್ಯೂ, ಇದು ಸೋಂಕಿತ ವ್ಯಕ್ತಿಯ ಪ್ರತಿರೋಧ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ.
ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಹೆಚ್ಚಿದ ಮಂಗನ ಕಾಯಿಲೆ; ಒಂದೇ ದಿನ 8 ಜನರಲ್ಲಿ ಪತ್ತೆ
ಮಂಗನಕಾಯಿಲೆ ತಗುಲಿದ ರೋಗಿಯು ಹೆಚ್ಚಿನ ಆಯಾಸವನ್ನು ಅನುಭವಿಸಬಹುದು ಅಥವಾ ತೀವ್ರವಾದ ಸ್ನಾಯು ನೋವುಗಳನ್ನು ಅನುಭವಿಸುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:31 am, Fri, 2 February 24