Monkeypox virus - Kyasanur Forest Disease (ಮಂಗನ ಕಾಯಿಲೆ)
ಮಂಗನಕಾಯಿಲೆ ಎಂಬುದು ಕೋತಿಗಳಿಂದ ಹರಡುವ ಸೋಂಕಾಗಿದೆ. ಮೊದಲ ಬಾರಿಗೆ ಈ ರೋಗ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರಿನಲ್ಲಿ 1957ರಲ್ಲಿ ಪತ್ತೆಯಾಯಿತು. ಅಂದಿನಿಂದ ಇದಕ್ಕೆ ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್ಡಿ) ಎಂದು ಕರೆಯಲಾಗುತ್ತಿದೆ. ವೈರಸ್ ಅಂಟಿರುವ ಮಂಗನ ಮೈಮೇಲಿರುವ ಸಣ್ಣ ಹುಳಗಳು ಮನುಷ್ಯರನ್ನು ಕಚ್ಚಿದಾಗ ಮಂಗನಕಾಯಿಲೆ ಉಂಟಾಗುತ್ತದೆ. ಕಾಡಿಗೆ ಹೋದಾಗ ಜಿಗಟೆ, ನೊಣಗಳಿಂದ ಮನುಷ್ಯರಿಗೆ ಈ ರೋಗ ಹರಡುತ್ತದೆ. ಈ ರೋಗಕ್ಕೆ ಇನ್ನೂ ಔಷಧಿ ಕಂಡುಹಿಡಿದಿಲ್ಲ. ಮಂಗನಕಾಯಿಲೆ ಮಾರಣಾಂತಿಕ ರೋಗವಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳಿಂದ ಈ ರೋಗ ಬಾರದಂತೆ ತಡೆಯಬಹುದಾಗಿದೆ. ಮಲೇರಿಯಾದ ಲಕ್ಷಣಗಳನ್ನೇ ಹೊಂದಿರುವ ಮಂಗನಕಾಯಿಲೆ ದಟ್ಟವಾದ ಕಾಡುಗಳಿರುವ ಮಲೆನಾಡು ಪ್ರದೇಶದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಈ ಸೋಂಕು ತಗುಲಿದವರಲ್ಲಿ ಜ್ವರ, ತಲೆನೋವು, ಶೀತ ಕಂಡುಬರುತ್ತದೆ. ಇದನ್ನು ನಿರ್ಲಕ್ಷ್ಯ ಮಾಡಿದರೆ ಸೋಂಕು ಹೆಚ್ಚಾಗಿ ಪ್ರಾಣಕ್ಕೇ ಅಪಾಯ ಉಂಟಾಗಬಹುದು. ಪ್ರತಿ ವರ್ಷ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಂಗನಕಾಯಿಲೆಯಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇರುವುದು ಆಘಾತಕಾರಿ ಸಂಗತಿ.