ಮಂಗನ ಕಾಯಿಲೆ ನಿಯಂತ್ರಣಕ್ಕಾಗಿ ಸಚಿವ ದಿನೇಶ್ ಗುಂಡೂರಾವ್ ಸಭೆ: ಕೆಎಫ್​ಡಿ ಟೆಸ್ಟಿಂಗ್​ ವಿಳಂಬವಾಗದಂತೆ ಸೂಚನೆ

ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಮಂಗನ ಕಾಯಿಲೆ ನಿಯಂತ್ರಣಕ್ಕೆ ಸರ್ಕಾರದಿಂದ ಕಸರತ್ತು ಮಾಡಲಾಗುತ್ತಿದೆ. ಈ ಹಿನ್ನೆಲೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್​ ಇಂದು ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳ ತಾಲೂಕುಗಳಲ್ಲಿ ಮಂಗನ ಕಾಯಿಲೆ ನಿಯಂತ್ರಣ ಕುರಿತಂತೆ ಮಲೆನಾಡು ಭಾಗದ ಶಾಸಕರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ಮಾಡಿ ಕೆಲ ನಿರ್ಣಯಗಳನ್ನು ಕೈಗೊಂಡಿದ್ದಾರೆ.

ಮಂಗನ ಕಾಯಿಲೆ ನಿಯಂತ್ರಣಕ್ಕಾಗಿ ಸಚಿವ ದಿನೇಶ್ ಗುಂಡೂರಾವ್ ಸಭೆ: ಕೆಎಫ್​ಡಿ ಟೆಸ್ಟಿಂಗ್​ ವಿಳಂಬವಾಗದಂತೆ ಸೂಚನೆ
ಸಚಿವ ದಿನೇಶ್ ಗುಂಡೂರಾವ್ ಸಭೆ
Follow us
ಗಂಗಾಧರ​ ಬ. ಸಾಬೋಜಿ
|

Updated on: Feb 19, 2024 | 8:15 PM

ಬೆಂಗಳೂರು, ಫೆಬ್ರವರಿ 19: ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳ ತಾಲೂಕುಗಳಲ್ಲಿ ಮಂಗನ ಕಾಯಿಲೆ  (monkey disease) ನಿಯಂತ್ರಣ ಕುರಿತಂತೆ ಮಲೆನಾಡು ಭಾಗದ ಶಾಸಕರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಮಹತ್ವದ ಸಭೆ ನಡೆಸಿದರು. ಮಂಗನ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕೈಗೊಂಡ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ಮಾಡಿದ್ದು ಕಾಯಿಲೆ ನಿಯಂತ್ರಣಕ್ಕೆ ಹೆಚ್ಚಿನ ಕ್ರಮಗಳ ಕುರಿತು ಶಾಸಕರ ಅಭಿಪ್ರಾಯ ಆಲೀಸಿದರು.

ಮಂಗನ ಕಾಯಿಲೆ ರೋಗಲಕ್ಷಣಗಳು ಕಂಡುಬಂದ ತಕ್ಷಣ ಟೆಸ್ಟಿಂಗ್ ಶೀಘ್ರಗತಿಯಲ್ಲಿ ನಡೆಸುವಂತೆ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಕೆಎಫ್.ಡಿ ಪಾಸಿಟಿವ್ ಬಂದವರನ್ನ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ. ಶಿರಸಿಯಲ್ಲಿ ಕೆಎಫ್.ಡಿ ಟೆಸ್ಟಿಂಗ್​ಗೆ ಪ್ರಯೋಗಾಲಯ ಸ್ಥಾಪನೆ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.

ಇದನ್ನೂ ಓದಿ: ಮಂಗನ ಕಾಯಿಲೆ ವೈರಸ್ ಹಬ್ಬಿದ್ದು ಎಲ್ಲಿಂದ? ಮೃತಪಟ್ಟವರ ಟ್ರ್ಯಾಕ್​ನಿಂದ ಮೂಲ ಪತ್ತೆ

ಸಭೆಯಲ್ಲಿ ಸಚಿವರಾದ ಮಧು ಬಂಗಾರಪ್ಪ, ಸಚಿವರಾದ ಮಂಕಾಳ ಎಸ್‌. ವೈದ್ಯ, ಶಾಸಕರಾದ ಆರಗ ಜ್ಞಾನೇಂದ್ರ, ಹೆಚ್‌.ಡಿ.ತಮ್ಮಯ್ಯ, ಬೇಳೂರು ಗೋಪಾಲಕೃಷ್ಣ, ನಯನ ಮೋಟಮ್ಮ ಸೇರಿದಂತೆ ಜನಪ್ರತಿನಿಧಿಗಳು, ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯ ಪ್ರಮುಖ ಅಂಶಗಳು ಹೀಗಿವೆ

  1. ರಾಜ್ಯದಲ್ಲಿ ಸದ್ಯ 103 ಮಂಗನ ಕಾಯಿಲೆ ಪ್ರಕರಣಗಳು ಸಕ್ರಿಯವಾಗಿದ್ದು, ಪಾಸಿಟಿವ್‌ ಪ್ರಕರಣಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.
  2. ಈಗಾಗಲೇ ಮಂಗನ ಕಾಯಿಲೆಯಿಂದ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ತಲಾ 1 ಸಾವು ಸಂಭವಿಸಿದ್ದು, ಮರಣ ಪ್ರಮಾಣ ತಗ್ಗಿಸಲು ಆಯಾ ಜಿಲ್ಲೆಗಳ ಡಿಹೆಚ್‌ಒ ಗಳಿಗೆ ಹೆಚ್ಚಿನ ಹೊಣೆ ನೀಡಲಾಗಿದೆ. ರಾಜ್ಯದಲ್ಲಿ ಕೆಎಫ್‌ಡಿ ಪರೀಕ್ಷೆ, ಪಾಸಿಟಿವ್‌, ಮರಣ, ಡಿಸ್ಚಾರ್ಜ್‌ ಕುರಿತಾಗಿ ದೈನಂದಿನ ಬುಲೆಟಿನ್‌ ಹೊರಗಿಸಲಾಗುತ್ತಿದೆ. VDL ಶಿವಮೊಗ್ಗ ಮತ್ತು MIV ಮಣಿಪಾಲದಲ್ಲಿನ ಪ್ರಯೋಗಾಲಯಗಳನ್ನು KFD ಪರೀಕ್ಷೆಗೆ ಗುರುತಿಸಲಾಗಿದ್ದು, ಶೀಘ್ರವಾಗಿ ಮಾದರಿಗಳನ್ನು ಸಂಸ್ಕರಿಸಿ ಪರೀಕ್ಷೆ ನಡೆಸಿ ವರದಿ ನೀಡಲಾಗುತ್ತಿದೆ.
  3. ಕಳೆದ 1 ತಿಂಗಳಿನಿಂದ ಮಂಗನ ಕಾಯಿಲೆಗೆ ಲಸಿಕೆ ನೀಡಲಾಗುತ್ತಿದ್ದು ಮುಂದಿನ 2 ತಿಂಗಳಿಗಾಗುವಷ್ಟು ಲಸಿಕೆ ಲಭ್ಯವಿದೆ.
  4. ಶಿರಸಿ ಹಾಗೂ ಸಾಗರದಲ್ಲಿ ಮಂಗನ ಕಾಯಿಲೆ ಪತ್ತೆಹಚ್ಚಲು ಹೊಸ ಪರೀಕ್ಷಾ ಕೇಂದ್ರಗಳ ಸ್ಥಾಪನೆ.
  5. ಮಂಗನ ಕಾಯಿಲೆಗೆ ಲಸಿಕೆ ಕಂಡುಹಿಡಿಯುವ ನಿಟ್ಟಿನಲ್ಲಿ ICMR ಜೊತೆ ಮಾತುಕತೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಲಸಿಕೆ ಲಭ್ಯ.
  6. ಮಂಗನ ಕಾಯಿಲೆಯ ತ್ವರಿತ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್‌ಗಳ ಹೆಚ್ಚಳ.
  7. ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ ಸಹಯೋಗದಲ್ಲಿ ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರ ಮೂಲಕ ಮಂಗನ ಕಾಯಿಲೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.