AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಂದಾಪುರದಲ್ಲಿ 5 ಕೋತಿಗಳ ಸಾವು: ಮಲೆನಾಡಲ್ಲಿ ಮಂಗನ ಕಾಯಿಲೆ ಆತಂಕ

ಕುಂದಾಪುರದ ಹೊಸಂಗಡಿ ಭಾಗದಲ್ಲಿ ಐದು ಮಂಗಗಳ ನಿಗೂಢ ಸಾವು ಸ್ಥಳೀಯರಲ್ಲಿ ಮಂಗನ ಕಾಯಿಲೆ ಆತಂಕ ಹೆಚ್ಚಿಸಿದೆ. ಆರೋಗ್ಯ ಇಲಾಖೆ ಸ್ಯಾಂಪಲ್ ಸಂಗ್ರಹಿಸಿದ್ದರೂ ಸಾವಿಗೆ ನಿಖರ ಕಾರಣ ತಿಳಿಸಿಲ್ಲ. 2019ರಲ್ಲಿ ಭೀಕರವಾಗಿ ಕಾಡಿದ ಕಾಯಿಲೆ ಮತ್ತೆ ಕಾಣಿಸಿಕೊಳ್ಳುವ ಭೀತಿ ಎದುರಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳಿಗೆ ಒತ್ತಾಯಿಸಲಾಗಿದೆ.

ಕುಂದಾಪುರದಲ್ಲಿ 5 ಕೋತಿಗಳ ಸಾವು: ಮಲೆನಾಡಲ್ಲಿ ಮಂಗನ ಕಾಯಿಲೆ ಆತಂಕ
ಪ್ರಾತಿನಿಧಿಕ ಚಿತ್ರ
ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on: Jan 08, 2026 | 8:11 PM

Share

ಉಡುಪಿ, ಜನವರಿ 08: ಮಲೆನಾಡು ಜಿಲ್ಲೆಗಳಲ್ಲಿ ಮಂಗನ ಕಾಯಿಲೆ (Monkeypox virus) ಆತಂಕ ಹೆಚ್ಚುತ್ತಿರುವ ನಡುವೆ ಕುಂದಾಪುರ ತಾಲ್ಲೂಕಿನ ಹೊಸಂಗಡಿ ಭಾಗದಲ್ಲಿ ಮಂಗಗಳ ಮೃತ ದೇಹ ಪತ್ತೆಯಾಗಿದೆ. ಇದರಿಂದ ಕಳೆದ ಒಂದು ವಾರದಲ್ಲಿ ಆ ಪ್ರದೇಶದಲ್ಲಿ ಸಾವನ್ನಪ್ಪಿದ ಮಂಗಗಳ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆ ಹಾಗೂ ಅರಣ್ಯ ಇಲಾಖೆ ತೀವ್ರ ನಿಗಾ ವಹಿಸಿ ಸ್ಯಾಂಪಲ್‌ ಕಲೆ ಹಾಕಿದೆ. ಆದರೆ ಇದುವರೆಗೂ ಮಂಗಗಳ ಸಾವಿಗೆ ನಿಖರ ಕಾರಣ ಪತ್ತೆಯಾಗದ ಹಿನ್ನಲೆ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ರಾಜ್ಯದಲ್ಲಿ ಮತ್ತೊಮ್ಮೆ ಮಂಗನ ಕಾಯಿಲೆ ಸದ್ದು ಮಾಡುತ್ತಿದೆ. ಮಲೆನಾಡು ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ತೀವ್ರತೆ ಹೆಚ್ಚಿದ ಹಿನ್ನೆಲೆಯಲ್ಲಿ ಈ ಕಾಯಿಲೆ ನೆರೆ ಜಿಲ್ಲೆ ಉಡುಪಿಯಲ್ಲೂ ಭೀತಿ ಹುಟ್ಟಿಸಿದೆ. ಮುಖ್ಯವಾಗಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇತ್ತೀಚೆಗೆ ಮಂಗಗಲು ಸಾವನ್ನಪ್ಪಿರುವ ಪ್ರಕರಣಗಳು ಸಹಜವಾಗಿಯೇ ಈ ಭಾಗದ ಜನರಲ್ಲಿ ಆತಂಕವನ್ನು ಹೆಚ್ಚುವಂತೆ ಮಾಡಿದೆ.

ಇದನ್ನೂ ಓದಿ: ಮಂಗನ ಕಾಯಿಲೆ ಭೀತಿ: ಶಿವಮೊಗ್ಗದ ಬಳಿಕ, ಶಿರಸಿಯಲ್ಲೂ ಲ್ಯಾಬ್​​ ಆರಂಭಕ್ಕೆ ನಿರ್ಧಾರ

ಕಳೆದ ದಿನಗಳ ಅಂತರದಲ್ಲಿ ಜಿಲ್ಲೆಯ ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಾರೂರುರಲ್ಲಿ ಐದು ಕೋತಿಗಳು ಸಾವನ್ನಪ್ಪಿದೆ. ಐದರಲ್ಲಿ ನಾಲ್ಕು ಮಂಗಗಳು ಸಂಪೂರ್ಣವಾಗಿ ಕೊಳೆತು ಹೋಗಿದ್ದು, ಒಂದು ಮಂಗದ ಶವ ಪರೀಕ್ಷೆ ನಡೆಸಿ ಸ್ಯಾಂಪಲ್‌ ಸಂಗ್ರಹಿಸಿ ಪರಿಶೀಲನೆ ಕಳುಹಿಸುವ ಕೆಲಸವನ್ನು ಜಿಲ್ಲಾ ಆರೋಗ್ಯ ಇಲಾಖೆ ನಡೆಸಿದೆ. ಸದ್ಯ ಕಳೆದ ವರ್ಷದಂತೆ ಇದೇ ಪ್ರದೇಶದಲ್ಲಿ ಐದು ಮಂಗಗಳು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.

30 ವರ್ಷಗಳ ಬಳಿಕ ಮಂಗನ ಕಾಯಿಲೆ

ಸದ್ಯ ಹೊಸಂಗಡಿ ಭಾಗದಲ್ಲಿ ಮಂಗಗಳ ಸಾವಿನ ಬಳಿಕ ಮತ್ತೆ ಆತಂಕ ಮನೆ ಮಾಡಿದೆ. 2019ರಲ್ಲಿ ಉಡುಪಿ ಜಿಲ್ಲೆಗೆ ಸುಮಾರು 30 ವರ್ಷಗಳ ಬಳಿಕ ಮಂಗನ ಕಾಯಿಲೆ ಕಾಣಿಸಿಕೊಂಡಿತ್ತು. ಮಂಗನ ಕಾಯಿಲೆಯ ಅಬ್ಬರಕ್ಕೆ ಕರಾವಳಿ ಮತ್ತು ಮಲೆನಾಡಿನ ಜನ ತತ್ತರಿಸಿ ಹೋಗಿದ್ದರು. ಮಣಿಪಾಲದ ಕೆಎಂಸಿ ಆಸ್ಪತ್ರೆಯೊಂದರಲ್ಲೇ 73 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿತ್ತು. 2019ರಲ್ಲಿ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 12 ಮಂದಿ ಕೆಎಫ್‌ಡಿ ಸೋಂಕಿಗೆ ಬಲಿಯಾಗಿದ್ದು, 344 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಉತ್ತರ ಕನ್ನಡ ಜಿಲ್ಲೆಯ 85 ಮಂದಿಗೆ ಸೋಂಕು ದೃಢಪಟ್ಟು ಮೂವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.

ಉಡುಪಿಯಲ್ಲಿ ಇಬ್ಬರು, ಮೈಸೂರು, ಬೆಳಗಾವಿ, ಚಿಕ್ಕಮಗಳೂರು ಹಾಗೂ ಹಾವೇರಿಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿತ್ತು. ಕಳೆದ ವರ್ಷವು ಕೂಡ ಓರ್ವ ಮಹಿಳೆ ಮಂಗನ ಕಾಯಿಲೆಯಿಂದ ಮೃತಪಟ್ಟಿರುವ ವಿಚಾರ ಮಾಸುವ ಮುನ್ನವೇ ಮತ್ತೆ ಜಿಲ್ಲೆಯಲ್ಲಿ ಮಂಗಗಳು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.

ಮಂಗಗಳ ಸಾವಿಗೆ ಕಾರಣ ತಿಳಿಸದ ಆರೋಗ್ಯ ಇಲಾಖೆ

ಇನ್ನು ಆರೋಗ್ಯ ಇಲಾಖೆ ಸತ್ತ ಮಂಗನ ದೇಹದ ಸ್ಯಾಂಪಲ್‌ ಪಡೆದು ತೆರಳಿದ ಬಳಿಕ ಇದುವರೆಗೂ ಸಾವಿಗೆ ಕಾರಣ ತಿಳಿಸದೆ ಇರುವುದು ಹೊಸಂಗಡಿ ಭಾಗದ ಸ್ಥಳೀಯರ ಆತಂಕ ಹೆಚ್ಚುವಂತೆ ಮಾಡಿದೆ. ಇನ್ನು ಕಾರೂರುನಲ್ಲಿರುವ ನೀರಿನ ಮೂಲದ ಬಳಿಯೇ ಐದು ಮಂಗಳ ಶವ ಪತ್ತೆಯಾಗಿರುವುದು ಮತ್ತು ಪ್ರತಿ ವರ್ಷವು ಕೂಡ ಇದೇ ಪರಿಸರದಲ್ಲಿ ಮಂಗಗಳು ಸಾಯುತ್ತಿರುವುದು ಸ್ಥಳೀಯರಲ್ಲಿ ಸಾಕಷ್ಟು ಪ್ರಶ್ನೆ ಹುಟ್ಟು ಹಾಕಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಮತ್ತೆ ವಕ್ಕರಿಸಿದ ಮಂಗನ ಕಾಯಿಲೆ: ಕಾಡಿನಂಚಿನ ಜನರಲ್ಲಿ ಆತಂಕ

ಒಟ್ಟಾರೆಯಾಗಿ ಮಾರಣಾಂತಿಕ ಮಂಗನ ಕಾಯಿಲೇ ಮಲೆನಾಡಿನಲ್ಲಿ ಹೆಚ್ಚುತ್ತಿರುವ ಹಿನ್ನಲೆ ಪಶ್ಚಿಮ ಘಟ್ಟದ ಗಡಿ ಭಾಗದ ಜನರಿಗೆ ಆತಂಕ ಹೆಚ್ಚಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಶೀಘ್ರದಲ್ಲಿ ಮಂಗಗಳ ಸಾವಿಗೆ ನಿಖರ ಕಾರಣದ ಜೊತೆಗೆ ಹೊಸಂಗಡಿ ಸಿದ್ಧಾಪುರ ಭಾಗದಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.