ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಟ್ರಾಮಾ ಕೇರ್ ಸೆಂಟರ್ ಸ್ಥಾಪನೆಗೆ ಜಿಲ್ಲಾಡಳಿತ ಪ್ರಸ್ತಾವ: ಕೋಟಾ ಶ್ರೀನಿವಾಸ ಪೂಜಾರಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 31, 2022 | 2:58 PM

ಈ ಎರಡೂ ಕಾರ್ಯಕ್ರಮಗಳ ಅನುಷ್ಠಾಕ್ಕೆ ಪರಿಹಾರ ಕ್ರಮಗಳನ್ನು ಸೂಚಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿಯವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಟ್ರಾಮಾ ಕೇರ್ ಸೆಂಟರ್ ಸ್ಥಾಪನೆಗೆ ಜಿಲ್ಲಾಡಳಿತ ಪ್ರಸ್ತಾವ: ಕೋಟಾ ಶ್ರೀನಿವಾಸ ಪೂಜಾರಿ
ಸಚಿವ ಕೋಟಾ ಶ್ರೀನಿವಾಸ ಪೂಜಾರಿ
Follow us on

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸಲು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ಪ್ರಯತ್ನ ನಡೆಸಿದ್ದಾರೆ. ಕರಾವಳಿ, ಮಲೆನಾಡು ಹಾಗೂ ಬಯಲುಸೀಮೆಯಿಂದ ಸಮ್ಮಿಳಿತಗೊಂಡ ಭೌಗೋಳಿಕವಾಗಿ ದೊಡ್ಡದಾಗಿರುವ ಉತ್ತರ ಕನ್ನಡ ಜಿಲ್ಲೆಗೆ ತುರ್ತು ನಿಗಾ ಘಟಕ (ಟ್ರಾಮಕೇರ್ ಸೆಂಟರ್) ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವುದು ಉತ್ತರ ಕನ್ನಡ ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾಗಿತ್ತು.

ಉಸ್ತುವಾರಿ ಸಚಿವರು ಸಭೆ ನಡೆಸಿದಾಗೆಲ್ಲ ಇದು ಚರ್ಚೆಯ ಕಾರ್ಯಸೂಚಿಯ ಭಾಗವಾಗಿರುತ್ತಿತ್ತು. ಈ ಸಂಬಂಧ ಸರ್ಕಾರವು ಟ್ರಾಮಾಕೇರ್ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾತಿಗೆ ಉತ್ಸಾಹ ತೋರಿದ್ದರೂ ಜಿಲ್ಲಾ ಕೇಂದ್ರದಲ್ಲಿ ಜಾಗದ ಕೊರತೆ ಅಡ್ಡಿಯಾಗುತ್ತಿತ್ತು. ಇದೀಗ ಜಿಲ್ಲಾ ಉಸ್ತುವಾರಿ ಸಚಿವರ ಸತತ ಪ್ರಯತ್ನ ಹಾಗೂ ಸಲಹೆಗಳ ಮೇರೆಗೆ ಜಿಲ್ಲಾಡಳಿತ ಇದಕ್ಕೊಂದು ಪರಿಹಾರ ಕಂಡುಕೊಂಡಿದೆ. ಈ ಎರಡೂ ಕಾರ್ಯಕ್ರಮಗಳ ಅನುಷ್ಠಾಕ್ಕೆ ಪರಿಹಾರ ಕ್ರಮಗಳನ್ನು ಸೂಚಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿಯವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಪಿಎಂ ಅಭೀಮ್ ವತಿಯಿಂದ 50 ಹಾಸಿಗೆಗಳ ತುರ್ತು ನಿಗಾ ಘಟಕ / ಟ್ರಾಮಾಕೇರ್ ಸೆಂಟರ್ ಸ್ಥಾಪಿಸಲು 2021-22ನೇ ಸಾಲಿನಲ್ಲಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಈಗಾಗಲೇ ಅನುಮೋದನೆ ನೀಡಿದೆ. ಅದನ್ನು ಅಂಕೋಲ ತಾಲೂಕಿನ ಹಟ್ಟಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಥಾಪಿಸುವುದು ಸೂಕ್ತವೆಂದು ಅವರು ತಮ್ನ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.

ಹಟ್ಟಿಕೇರಿ ರಾಷ್ಟ್ರೀಯ ಹೆದ್ದಾರಿ ಸಮೀಪವೇ ಇದ್ದು ಉದ್ದೇಶಿತ ನೌಕಾನೆಲೆಯ ನಾಗರಿಕ ವಿಮಾನ ನಿಲ್ದಾಣದಿಂದ ಕೇವಲ 2 ಕಿಮೀ ದೂರದಲ್ಲಿದೆ. ಅಲ್ಲದೆ ಜಿಲ್ಲಾ ಕೇಂದ್ರದಿಂದ ಕೇವಲ 25 ನಿಮಿಷಗಳ ಪ್ರಯಾಣವಾಗಿರುವುದರಿಂದ ಇಲ್ಲಿ ಟ್ರಾಮಾಕೇರ್ ಸೆಂಟರ್ ಸ್ಥಾಪಿಸುವುದರಿಂದ ಜಿಲ್ಲೆಯ ಜನರಿಗೆ ಅತ್ಯಂತ ಅನುಕೂಲವಾಗಲಿದೆ ಎಂದು ಅವರು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲು ಕುಮಟಾ ತಾಲೂಕಿನ ಕುಮಟಾ ಹೋಬಳಿ ಹಾಗೂ ಮಿರ್ಜಾನ ಹೋಬಳಿಗಳ ಒಟ್ಟು ನಾಲ್ಕು ಕಡೆಗಳಲ್ಲಿ ಜಾಗವನ್ನು ಗುರುತಿಸಿದ್ದು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯೊಂದಿಗೆ ಇದನ್ನು ಸ್ಥಾಪಿಸಲು ಅನುಕೂಲಕರವಾಗಿದೆ ಎಂದು ಪ್ರಸ್ತಾವನೆಯಲ್ಲಿ ಗಮನ ಸೆಳೆಯಲಾಗಿದೆ. ಇದರಿಂದ ಮುಂಡಗೋಡೆಯ ಹಳಿಯಾಳ, ಶಿರಸಿ ಸೇರಿದಂತೆ ಜಿಲ್ಲೆಯ ದೂರದೂರಿನಿಂದ ರೋಗಿಗಳನ್ನು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ಕರೆದೊಯ್ಯುವುದು ತಪ್ಪುತ್ತದೆ. ಹೆಚ್ಚಿನ ಜೀವಹಾನಿಯನ್ನು ತಪ್ಪಿಸಬಹುದು ಎಂದು ಅವರು ಹೇಳಿದ್ದಾರೆ.

Published On - 2:50 pm, Sun, 31 July 22