AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕನ್ನಡ ಸುಸಜ್ಜಿತ ಆಸ್ಪತ್ರೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ, ಎಮ್ಮೆ ಚರ್ಮದ ಜನಪ್ರತಿನಿಧಿಗಳಿಗೆ ಕೊನೆಯ ಎಚ್ಚರಿಕೆ!

Bangalore Freedom Park - ಬಾರದ ಜನಪ್ರತಿಧಿಗಳ ಫೋನ್ ಸ್ವಿಚ್ ಆಫ್: ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾ ಸ್ಥಳದಿಂದಲೇ ಜಿಲ್ಲೆಯನ್ನು ಪ್ರತಿನಿಧಿಸುವ ರೂಪಾಲಿ ನಾಯ್ಕ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಸುನೀಲ್ ನಾಯ್ಕ, ದಿನಕರ ಶೆಟ್ಟಿ, ಸಚಿವ ಶಿವರಾಮ ಹೆಬ್ಬಾರ್, ಆರ್ ವಿ ದೇಶಪಾಂಡೆ, ಅನಂತ್ ಕುಮಾರ್ ಹೆಗಡೆ ಅವರನ್ನು ಸಂಪರ್ಕ ಮಾಡುವ ಯತ್ನ ಮಾಡಿದರೂ ಒಬ್ಬೇ ಒಬ್ಬರೂ ಕರೆಗೆ ಸ್ಪಂದಿಸಲಿಲ್ಲ.

ಉತ್ತರ ಕನ್ನಡ ಸುಸಜ್ಜಿತ ಆಸ್ಪತ್ರೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ, ಎಮ್ಮೆ ಚರ್ಮದ ಜನಪ್ರತಿನಿಧಿಗಳಿಗೆ ಕೊನೆಯ ಎಚ್ಚರಿಕೆ!
ಉತ್ತರ ಕನ್ನಡ ಸುಸಜ್ಜಿತ ಆಸ್ಪತ್ರೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ, ಎಮ್ಮೆ ಚರ್ಮದ ಜನಪ್ರತಿನಿಧಿಗಳಿಗೆ ಕೊನೆಯ ಎಚ್ಚರಿಕೆ!
TV9 Web
| Edited By: |

Updated on:Jul 30, 2022 | 6:24 PM

Share

ಬೆಂಗಳೂರು: #WeNeedEmergencyHospitalInUttaraKannada #NoHospitalNoVote ಹ್ಯಾಷ್ ಟ್ಯಾಗ್​ ಗಳ ಮುಖೇನ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದ್ದ ಹೋರಾಟಗಾರರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಸುಸಜ್ಜಿತ ಆಸ್ಪತ್ರೆಗಾಗಿ ಹಕ್ಕೊತ್ತಾಯ ಮಾಡಿದರು.

ಉತ್ತರ ಕನ್ನಡ ಹಿತಾಸಕ್ತಿ ಬಳಗ, ಉತ್ತರ ಕನ್ನಡ ಸಂಘ ಬೆಂಗಳೂರು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷಬೇಧವಿಲ್ಲದೆ ಬೆಂಗಳೂರಿನ ಉತ್ತರ ಕನ್ನಡ ನಿವಾಸಿಗಳು ಪಾಲ್ಗೊಂಡು ಸರ್ಕಾರ ಮತ್ತು ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವದವರೇ ಆದ ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷಗಳ ನಂತ್ರ ಆಸ್ಪತ್ರೆ ಗಾಗಿ ಬಂದು ಹೋರಾಟ ಮಾಡುತ್ತಾ ಇದ್ದೇವೆ ಎಂದರೆ ನಮ್ಮನ್ನು ನಾವೇ ದೂಷಿಸಿಕೊಳ್ಳಬೇಕಿದೆ. ಒಬ್ಬ ಶಾಸಕ ಕೂಡ ಈ ಪ್ರತಿಭಟನೆಗೆ ಬಂದಿಲ್ಲ. ಅನಂತ್ ಕುಮಾರ್ ಹೆಗಡೆ ಯನ್ನು ಐದಾರು ಸಾರಿ ಸಂಸದರಾಗಿ ಜಿಲ್ಲೆಯ ಜನ ಗೆಲ್ಲಿಸಿದ್ದಾರೆ ಆದರೆ ಅವರಿಂದ ನಯಾ ಪೈಸೆ ಉಪಯೋಗವಾಗಿಲ್ಲ.

ನನಗೆ ಪದೇ ಪದೇ ರಾಜ್ಯ ಸರ್ಕಾರವನ್ನು ಬೈಯುವ ಪರಿಸ್ಥಿತಿ ಬಂದಿದೆ. ಉತ್ತರ ಕನ್ನಡದಲ್ಲಿ ಟೂರಿಸಂ ಅಭಿವೃದ್ಧಿ ಮಾಡಿದ್ರೇ ಬೆಂಗಳೂರಿಗೆ ಉದ್ಯೋಗ ಅರಸಿ ಬರಬೇಕಾದ ಸ್ಥಿತಿಯೇ ಇರುತ್ತಿರಲಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಮಾಡಿರುವ ದುಡ್ಡು ಎಷ್ಟಿದೆ ಅಂದ್ರೇ ನೀವ್ಯಾರು ವೋಟು ಮಾಡದೇ ಇದ್ರೂ ಅವ್ರು ಗೆಲ್ಲುತ್ತಾರೆ. ನಮ್ಮ ಶಾಸಕರು ತುಲಾಭಾರ ಮಾಡುವಷ್ಟು ದುಡ್ಡು ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

  1. ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು, ನಡು ಮದ್ಯದಲಿ ಅಡಿಕೆ ತೆಂಗುಗಳ ಮಡಿಲು ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ ಇದುವೆ ನಮ್ಮ ಉತ್ತರ ಕನ್ನಡ ಜಿಲ್ಲೆ…ಚುಟುಕು ಬ್ರಹ್ಮ ಕವಿ ದಿನಕರ ದೇಸಾಯಿ ಉತ್ತರ ಕನ್ನಡ ಜಿಲ್ಲೆಯನ್ನು ವರ್ಣಿಸುವುದು ಹೀಗೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆಯಲ್ಲಿ ಒಂದೂ ಸುಸಜ್ಜಿತ ಆಸ್ಪತ್ರೆ ಇಲ್ಲ. ಹೌದು ಈ ಸತ್ಯವನ್ನು ಇಲ್ಲಿಯವರೆಗೂ ಜನರು ಒಪ್ಪಿಕೊಂಡೇ ಬದುಕಿ ಬಂದಿದ್ದಾರೆ. ಈಗ ಸಹನೆಯ ಕಟ್ಟೆ ಒಡೆದಿದ್ದು, ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಕುಮಟಾದ ಶಾಸಕ ದಿನಕರ ಶೆಟ್ಟಿ ಅವರ ಜತೆ ಮಾತನಾಡಿದ್ದೇನೆ. ಸರ್ಕಾರಕ್ಕೆ ಆಗದೇ ಇದ್ದರೇ ಖಾಸಗಿ ಸಹಭಾಗಿತ್ವದಲ್ಲಿ ಮಾಡೋಣ ಅಂತಲೂ ಕೇಳಿಕೊಂಡಿದ್ದೇನೆ. ಪಕ್ಕದ ಜಿಲ್ಲೆ ದಕ್ಷಿಣ ಕನ್ನಡದವರಿಗೂ ನಮಗೂ ಬಹಳ ವ್ಯತ್ಯಾಸವಿಲ್ಲ. ಆದರೆ ಅವರು ಯಾರ ಮೇಲೆ ಹೇಗೆ ಒತ್ತಡ ತಂದು ತಮ್ಮ ಕೆಲಸ ಮಾಡಿಸಿಕೊಳ್ಳಬೇಕು ಎಂಬುದನ್ನು ಕಲಿತಿದ್ದಾರೆ. ನಾವು ಮೃದುವಾಗಿರುವುದೇ ಈ ಹಿನ್ನಡೆಗೆ ಕಾರಣ. ದಪ್ಪ ಚರ್ಮದ ನಮ್ಮ ಜನಪ್ರನಿಧಿಗಳ ಕಿವಿಗೆ ಇಂಥ ಹೋರಾಟ ಕೇಳಿಸುವುದಿಲ್ಲ ಎಂದರು.

ಎಮ್ಮೆ ಚರ್ಮದ ಜನಪ್ರತಿಧಿಗಳನ್ನು ಬಡಿದೆಬ್ಬಿಸುವ ಹೋರಾಟ ಆರಂಭವಾಗಿದೆ. ಇದು ಇಲ್ಲಿಗೇ ನಿಲ್ಲಬಾರದು. ನಮ್ಮ ಹೋರಾಟ ಒಂದು ತಾರ್ಕಿಕ ಅಂತ್ಯಕ್ಕೆ ಹೋಗಿ ನಿಲ್ಲುವವರೆಗೂ ಕೂಗು ಕಡಿಮೆಯಾಗಬಾರದು ಎಂದರು.

  1. ಸೀಬರ್ಡ್ ನೌಕಾನೆಲೆ, ಕೈಗಾ ಅಣುಸ್ಥಾವರ, ರಾಷ್ಟ್ರೀಯ ಹೆದ್ದಾರಿ, ಜಲವಿದ್ಯುತ್ ಯೋಜನೆಗಳಿಗಾಗಿ ತನ್ನ ಒಡಲನ್ನು ಬರಿದು ಮಾಡಿಕೊಂಡಿರುವ ಜಿಲ್ಲೆಯಲ್ಲಿ ಒಂದು ಆಸ್ಪತ್ರೆ ಇಲ್ಲ ಎನ್ನುವುದೇ ನಾಚಿಕೆಗೇಡು. ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡದೇ ಹೋದರೆ ಹೋರಾಟ ಉಗ್ರ ರೂಪ ಪಡೆದುಕೊಳ್ಳುತ್ತದೆ ಎಂದು ನಿವೃತ್ತ ಯೋಧ ಉತ್ತರ ಕನ್ನಡ ಜಿಲ್ಲೆ ಕಾನಸೂರಿನ ಮೇಜರ್ ಗಣಪತಿ ಜಿ ಹೆಗಡೆ ಆಕ್ರೋಶ ಹೊರಹಾಕಿದರು.

ವಿಕ್ರಮ್ ಭಟ್ ಆಂಡ್ ಅಸೋಸಿಯೇಟ್ಸ್ ನ ವಿಕ್ರಮ್ ಭಟ್ ಮಾತನಾಡಿ ನಮ್ಮ ಕೂಗು ಯಾಕೆ ಜನಪ್ರತಿನಿಧಿಗಳಿಗೆ ತಲುಪುತ್ತಿಲ್ಲ? ನಮಗೆ ಆಸ್ಪತ್ರೆ ಬೇಕು ನಿಮ್ಮ ಆಶ್ವಾಸನೆಗಳಲ್ಲ. ಮೊದಲು ಆಸ್ಪತ್ರೆ ಕೊಟ್ಟು ಆ ಮೇಲೆ ಕ್ಷೇತ್ರಕ್ಕೆ ಬನ್ನಿ ಎಂದು ಸವಾಲು ಹಾಕಿದರು. ಬೆಂಗಳೂರಿನಲ್ಲಿ ನೆಲೆಸಿರುವ ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಾರದ ಜನಪ್ರತಿಧಿಗಳು, ಫೋನ್ ಸ್ವಿಚ್ ಆಫ್:

ಪ್ರತಿಭಟನಾ ಸ್ಥಳದಿಂಲೇ ಉತ್ತರ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುವ ಕಾರವಾರದ ರೂಪಾಲಿ ನಾಯ್ಕ, ಶಿರಸಿ ಸಿದ್ದಾಪುರದ ಶಾಸಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಭಟ್ಕಳದ ಶಾಸಕ ಸುನೀಲ್ ನಾಯ್ಕ, ಕುಮಟಾದ ಶಾಸಕ ದಿನಕರ ಶೆಟ್ಟಿ, ಯಲ್ಲಾಪುರದ ಶಾಸಕ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಹಳಿಯಾಳದ ಶಾಸಕ ಆರ್ ವಿ ದೇಶಪಾಂಡೆ ಮತ್ತು ಸಂಸದ ಅನಂತ್ ಕುಮಾರ್ ಹೆಗಡೆ ಅವರನ್ನು ಸಂಪರ್ಕ ಮಾಡುವ ಯತ್ನ ಮಾಡಿದರೂ ಒಬ್ಬೇ ಒಬ್ಬರೂ ಕರೆಗೆ ಸ್ಪಂದಿಸಲಿಲ್ಲ.

1800117800 – ಮನ್ ಕೀ ಬಾತ್​ ಗೆ ಕರೆ ಮಾಡಿ:

Bangalore Freedom Park

ಉತ್ತರ ಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಹೋರಾಟದ ಮುಂದಿನ ಭಾಗವಾಗಿ ಉತ್ತರ ಕನ್ನಡದ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಅಭಿಪ್ರಾಯ ಸಂಗ್ರಹಣೆಗೆ ಕರೆ ಮಾಡಬೇಕು ಎಂದು ತಿಳಿಸಲಾಯಿತು. 1800117800ಕ್ಕೆ ಕರೆ ಮಾಡಿ ಕರ್ನಾಟಕದಿಂದ ಮಾತನಾಡುತ್ತಿರುವುದು ಉತ್ತರ ಕನ್ನಡ ಜಿಲ್ಲೆ ಎಂದು ವಿವರ ದಾಖಲಿಸಿ ಆಸ್ಪತ್ರೆ ಬೇಡಿಕೆ ಸಲ್ಲಿಸಲು ತಿಳಿಸಲಾಯಿತು.

ಉತ್ತರ ಕನ್ನಡಕ್ಕೆ ಸಿಎಂ ಬೊಮ್ಮಾಯಿ ಭೇಟಿ: ಆಗಸ್ಟ್ ಮೊದಲ ವಾರದಲ್ಲಿ ಸಿಎಂ ಬೊಮ್ಮಾಯಿ ಉತ್ತರ ಕನ್ನಡ ಜಿಲ್ಲೆ ಪ್ರವಾಸ ಮಾಡಲಿದ್ದು ಆ ಸಂದರ್ಭದಲ್ಲಿಯಾದರೂ ಬಹುವರ್ಷದ ಬೇಡಿಕೆಯಾದ ಸುಸಜ್ಜಿತ ಆಸ್ಪತ್ರೆ ಘೋಷಣೆ ಮಾಡಲಿದ್ದಾರೆ ಎಂಬ ಮಾತು ಕೇಳಿಬಂದಿದೆ.

Published On - 5:06 pm, Sat, 30 July 22