ಅಬ್ಬಾ! ಆನ್ಲೈನ್ ವಂಚನೆ ಹೀಗೂ ಮಾಡಬಹುದಾ? ಕರಾವಳಿ ಜಿಲ್ಲೆಯಲ್ಲಿ ಹೊಸ ವಂಚಕರ ಜಾಲ ಬೀಡುಬಿಟ್ಟಿದೆ, ಹುಷಾರು!
Online cheating: ಹೊಸ ರೀತಿಯಲ್ಲಿ ಹಣ ಪೀಕಲು ವಂಚಕರ ಜಾಲ ಸಂಚು ಹೂಡುತ್ತಿದೆ. ಅದೂ ಸಹ ದೇಶದ ಹೆಮ್ಮೆಯ ಯೋಧರ ಹೆಸರನ್ನ ದುರ್ಬಳಕೆ ಮಾಡಿಕೊಂಡು ಜನರನ್ನು ಮೋಸಗೊಳಿಸುವ ಜಾಲವೊಂದು ಉತ್ತರ ಕನ್ನಡದಲ್ಲಿ ಸಕ್ರಿಯವಾಗಿದೆ.
ದೇಶ ಕಾಯುವ ಸೈನಿಕರು ಅಂತಂದ್ರೆ ಅವರಿಗೆ ಇರುವ ಗೌರವವೇ ಬೇರೆ, ನಿವೃತ್ತ ಯೋಧರಾಗಿದ್ರೂ ಸಹ ಜನರು ಅವರನ್ನು ಅಭಿಮಾನದಿಂದ ಕಾಣ್ತಾರೆ. ಅದರಲ್ಲೂ ಕದಂಬ ನೌಕಾನೆಲೆ, ಕೋಸ್ಟ್‌ಗಾರ್ಡ್ ಪಡೆಯನ್ನ ಹೊಂದಿರುವ ಕರಾವಳಿ ಜಿಲ್ಲೆ ಉತ್ತರ ಕನ್ನಡದ (uttara kannada) ಜನತೆಗೆ ಯೋಧರು ಅಂದ್ರೆ ಒಂದು ರೀತಿಯ ಹೆಮ್ಮೆ. ಆದರೆ ಇತ್ತೀಚಿನ ದಿನಗಳಲ್ಲಿ ಯೋಧರೆಂದು ಹೇಳಿಕೊಂಡು ಜನರನ್ನು ಮೋಸ ಮಾಡುವ ಜಾಲವೊಂದು ಉತ್ತರ ಕನ್ನಡದಲ್ಲಿ ಸಕ್ರಿಯವಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ…
ಈ ಹಿಂದೆ ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿ ಹೆಸರಲ್ಲಿ ಜನರಿಗೆ ಕರೆ ಮಾಡಿ ಅವರ ಬ್ಯಾಂಕ್ ಖಾತೆಯ ಮಾಹಿತಿ ಪಡೆದು ವಂಚನೆ ಮಾಡುತ್ತಿದ್ದರು. ಇಂತಹ ವಂಚನೆ ಬಗ್ಗೆ ಜನರು ಕೊಂಚ ಜಾಗೃತರಾದ ಬೆನ್ನಲ್ಲೇ ಇದೀಗ ಹೊಸ ರೀತಿಯಲ್ಲಿ ಹಣ ಪೀಕಲು ವಂಚಕರ ಜಾಲ (Online fraud, Online cheating) ಸಂಚು ಹೂಡುತ್ತಿದೆ. ಅದೂ ಸಹ ದೇಶದ ಹೆಮ್ಮೆಯ ಯೋಧರ ಹೆಸರನ್ನ ದುರ್ಬಳಕೆ ಮಾಡಿಕೊಂಡು ಜನರನ್ನು ಮೋಸಗೊಳಿಸುವ ಜಾಲವೊಂದು ಉತ್ತರ ಕನ್ನಡದಲ್ಲಿ ಸಕ್ರಿಯವಾಗಿದೆ.
ಕಾರವಾರದ (karwar) ಲಲಿತ್ ಎಂಟರ್‌ಪ್ರೈಸರ್ಸ್ ಮಾಲೀಕ ಶುಭಂ ಕಳಸ ಎಂಬುವವರಿಗೆ ಕರೆ ಮಾಡಿದ ವ್ಯಕ್ತಿಯೋರ್ವ ತಾನು ಸಿಐಎಸ್‌ಎಫ್ ಯೋಧನೆಂದು ಹೇಳಿಕೊಂಡು ಪರಿಚಯ ಮಾಡಿಕೊಂಡಿದ್ದಾನೆ. ತಾಲ್ಲೂಕಿನ ಮಾಜಾಳಿಯ ಬಾವಳ್ ಗ್ರಾಮದ ಫಿಶರೀಸ್ ಶಾಲೆಗೆ 2,000 ಸಿಮೆಂಟ್ ಬ್ಲಾಕ್ಸ್ ಬೇಕಿದೆ ಎಂದು ಹೇಳಿದ್ದ ವಂಚಕ, ಶಾಲೆಯ ವಿಳಾಸದ ಗೂಗಲ್ ಮ್ಯಾಪ್ ಕೂಡ ಕಳುಹಿಸಿ, ಫೋನ್ ಪೇ ಮೂಲಕ ಹಣ ಸಂದಾಯ ಮಾಡುವುದಾಗಿ ನಂಬಿಸಿದ್ದಾನೆ.
ಈತನ ಮಾತು ನಂಬಿದ ಉದ್ಯಮಿ ಶುಭಂ ತಮ್ಮ ಟ್ರಕ್ ಮೂಲಕ ಸಿಮೆಂಟ್ ಬ್ಲಾಕ್‌ಗಳನ್ನ ಕಳುಹಿಸಿಕೊಟ್ಟಿದ್ದಾರೆ. ಬ್ಲಾಕ್‌ಗಳು ಶಾಲೆಗೆ ತೆರಳುವಷ್ಟರೊಳಗೆ ಸೇನೆಯ ಸಿಬ್ಬಂದಿ ಎಂದು ಹೇಳಿಕೊಂಡು ಕರೆ ಮಾಡಿದಾತ ಬ್ಲಾಕ್‌ಗಳ ಹಣ ಸಂದಾಯ ಮಾಡಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಒಂದು ರೂಪಾಯಿ ಕಳುಹಿಸುವಂತೆ ತಿಳಿಸಿದ್ದಾರೆ. ಶುಭಂ ಕೂಡ ಸ್ಕ್ಯಾನ್ ಮಾಡಿ ಹಣ ಹಾಕಿದ್ದಾರೆ.
ಈ ವೇಳೆ ಲೋಡ್ ತೆಗೆದುಕೊಂಡು ತೆರಳಿದ್ದ ಲಾರಿ ಚಾಲಕ ಕರೆ ಮಾಡಿ ಶಾಲೆಗೆ ಯಾವುದೇ ಸಿಮೆಂಟ್ ಬ್ಲಾಕ್‌ಗಳ ಅವಶ್ಯಕತೆ ಇಲ್ಲ ಎಂದು ಹೇಳುತ್ತಿರುವುದಾಗಿ ತಿಳಿಸಿದ್ದಾನೆ. ಇದೇ ವೇಳೆ ಶುಭಂ ಅವರ ಖಾತೆಯಿಂದ ಹಣ ಕಡಿತಗೊಂಡಿದೆ. ತಕ್ಷಣವೇ ತಮ್ಮ ಖಾತೆಯಲ್ಲಿದ್ದ ಸಂಪೂರ್ಣ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡಿರುವುದರ ವಿರುದ್ಧ ಶುಭಂ ಅವರು ಸೈಬರ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಇನ್ನು ಕಾರವಾರದಲ್ಲಿ ಈ ರೀತಿಯ ವಂಚನೆ ಯತ್ನ ನಡೆದಿರುವುದು ಇದೇ ಮೊದಲಲ್ಲ. ನಗರದ ಹೂವು ಹಣ್ಣಿನ ವ್ಯಾಪಾರಿ, ಹೊಟೇಲ್ ಉದ್ಯಮಿ, ಮೀನು ವ್ಯಾಪಾರಿಗೂ ಸಹ ಯೋಧರ ಹೆಸರಿನಲ್ಲಿ ವಿವಿಧ ಆರ್ಡರ್ ನೀಡಿ ಹಣ ಪಾವತಿಸಲು ತಾವು ಕಳುಹಿಸುವ ಕ್ಯೂಆರ್ ಕೋಡ್‌ಗೆ ಒಂದು ರೂಪಾಯಿ ಕಳುಹಿಸುವಂತೆ ಹೇಳಿ ಹಣ ಪೀಕಲು ಯತ್ನಿಸಿದ್ದು ಕೆಲವರು ಹಣವನ್ನ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಬುದ್ದಿವಂತಿಕೆ ಮಾಡಿ ಸುಲಿಗೆಯಿಂದ ಬಚಾವಾಗಿದ್ದಾರೆ.
ಯೋಧರ ಹೆಸರನ್ನ ದುರ್ಬಳಕೆ ಮಾಡಿಕೊಂಡಿರುವುದರ ಜೊತೆಗೆ ನಿಖರವಾಗಿ ಸ್ಥಳೀಯ ವ್ಯಾಪಾರಸ್ಥರ ಕುರಿತು ಈ ರೀತಿ ಮಾಹಿತಿ ಕಲೆಹಾಕಿರುವುದು ಸ್ಥಳೀಯವಾಗಿಯೂ ಯಾರದ್ದಾದರೂ ಕೈವಾಡ ಇರುವ ಶಂಕೆಯನ್ನ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಎಸ್ಪಿ ಅವರನ್ನ ಕೇಳಿದ್ರೆ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನ ಯಾರಿಗೂ ನೀಡಬೇಡಿ, ಇಂತಹ ವಂಚನೆ ನಡೆದ ಸಂದರ್ಭದಲ್ಲಿ ಟೋಲ್ ಫ್ರೀ ಸಂಖ್ಯೆ 1930ಗೆ ಕರೆ ಮಾಡಿ ದೂರು ದಾಖಲಿಸುವಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಮನವಿ ಮಾಡಿದ್ದಾರೆ.
ಏನೇ ಆಗಲಿ ಜನರ ಬ್ಯಾಂಕ್ ಖಾತೆ ಮಾಹಿತಿ ಕಲೆಹಾಕಲು ವಂಚಕರು ಹೊಸದಾದ ಮಾರ್ಗವನ್ನ ಕಂಡುಕೊಂಡಿದ್ದು ಜನರು ಇಂತಹ ಫೋನ್ ಕರೆಗಳ ಬಗ್ಗೆ ಜಾಗ್ರತೆ ವಹಿಸಬೇಕಿದೆ. ಒಂದು ವೇಳೆ ವಂಚನೆಗೊಳಗಾಗಿದ್ದು ಗಮನಕ್ಕೆ ಬಂದಲ್ಲಿ ಕೂಡಲೇ ಪೊಲೀಸರ ನೆರವು ಪಡೆದುಕೊಂಡು ಆಗಬಹುದಾದ ನಷ್ಟದಿಂದ ಬಚಾವಾಗಿ. (ವರದಿ: ವಿನಾಯಕ ಬಡಿಗೇರ, ಟಿವಿ 9, ಕಾರವಾರ)
ಇತರೆ ಕ್ರೈಂ ನ್ಯೂಸ್ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:53 pm, Thu, 1 December 22