ಕಾರವಾರ: ಐದು ವರ್ಷಗಳ ಹಿಂದೆ ಹೊನ್ನಾವರದ ಯುವಕ ಪರೇಶ್ ಮೇಸ್ತಾ (Paresh Mesta) ಸಾವಿನ ಪ್ರಕರಣ ಕೋಮು ಗಲಭೆ ಸೃಷ್ಟಿಸಿತ್ತು. ಇದನ್ನೇ ಬಿಜೆಪಿ ಅಸ್ತ್ರವನ್ನಾಗಿ ಮಾಡಿಕೊಂಡು 2028ರ ಚುನಾವಣೆಯಲ್ಲಿ ಲಾಭಪಡೆದುಕೊಂಡಿತ್ತು. ಆದ್ರೆ, ಇದೀಗ ಸಿಬಿಐ ತನಿಖೆಯಲ್ಲಿ ಪರೇಶ್ ಮೇಸ್ತಾ ಸಹಜ ಸಾವು ಎಂದು ತಿಳಿಸಿದ್ದು, ಬೆಜೆಪಿಗೆ ಇರುಸುಮುರುಸು ಉಂಟು ಮಾಡಿದೆ. ಈಗ ಸಿಬಿಐ ವರದಿಯ ಆಧಾರ ಮೇಲೆ ಕಾಂಗ್ರೆಸ್ ಬಿಜೆಪಿ ವಿರುದ್ಧ ಮುಗಿಬಿದ್ದಿದೆ. ಸದ್ಯ ಈ ಪ್ರಕರಣ ಕುರಿತಾಗಿ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಕಿಡಿ ಕಾರಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಸಿದ್ಧಾಪುರದಲ್ಲಿ ಮಾತನಾಡಿ, ಪರೇಶ್ ಮೇಸ್ತಾ ಪ್ರಕರಣ ಇಟ್ಟುಕೊಂಡು ಬಿಜೆಪಿಯವರು ರಾಜ್ಯದಲ್ಲಿ ಬೆಂಕಿ ಹಾಕಿದ್ರು. ಶೋಭಾ ಕರಂದ್ಲಾಜೆ ಬಾಯಿ ಹರ್ಕೊಂಡು ಕೂಗಿದ್ರು. ನಳಿನ್ ಕುಮಾರ್ ಕಟೀಲ್ ಹಾಗೂ ಇತರೆ ಹಿಂದೂ ಮುಖಂಡರು ಬೆಂಕಿ ಹಚ್ಚಿದ್ರು. ನಮ್ಮ ಸರಕಾರವಿದ್ದಾಗ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದೆವು. ಸಿಬಿಐ ಕೊಟ್ಟ ಬಳಿಕ ಆ ಪ್ರಕರಣ ಸಹಜ ಸಾವು ಎಂದು ಸಾಬೀತಾಯಿತು. ಈಗ ಬಿಜೆಪಿಯವರು ಏನು ಅಂತಾರೆ ಎಂದು ಪ್ರಶ್ನಿಸಿದರು.
ಕರಾವಳಿ ಭಾಗದಲ್ಲಿ ಸಂಪೂರ್ಣವಾಗಿ ಕಾಂಗ್ರೆಸ್‌ಗೆ ಹೊಡೆತ ಬಂತು. ಪರೇಶ್ ಮೇಸ್ತಾ ಬಗ್ಗೆ ಮಾತನಾಡಿದ ಬಾಯಿ ಬಡ್ಕಿ ಶೋಭಾ ಮೇಡಂ, ಸಂಸದರಾದ ಅನಂತ ಕುಮಾರ್ ಹೆಗಡೆ, ನಳಿನ್ ಕುಮಾರ್ ಕಟೀಲ್ ಇವತ್ತು ಎಲ್ಲಿ ಹೋದ್ರು ಎಂದು ಪ್ರಶ್ನಿಸಿದರು. ಇವರೆಲ್ಲರ ಮೇಲೂ ಇವತ್ತು ಪ್ರಕರಣ ದಾಖಲಿಸಬೇಕು. ಅವರದ್ದೇ ತನಿಖಾ ಸ್ಥಳ ಸಿಬಿಐ ಸಹಜ ಸಾವು ಎಂದು ಹೇಳಿದರೆ ಅದು ಸರಿಯಿಲ್ಲ ಎಂದು ಹೇಳಿ ಅರ್ಜಿ ಹಾಕ್ತಾರಂತೆ ನಾಚಿಕೆಯಾಗಬೇಕು ಇವರಿಗೆಲ್ಲಾ ಎಂದು ಕಿಡಿಕಾರಿದರು.
ಇದನ್ನೂ ಓದಿ: ಸಿಬಿಐ ‘ಬಿ’ ರಿಪೋರ್ಟ್: ಪರೇಶ್ ಮೇಸ್ತಾ ಕುಟುಂಬದ ಪರವಾಗಿ ಕಾನೂನು ಹೋರಾಟಕ್ಕೆ ನಿಂತ ವಕೀಲ ನಾಗರಾಜ ನಾಯಕ್
ಈಶ್ವರಪ್ಪ, ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವು ಪ್ರಕರಣದಲ್ಲಿ ಇವರೇ ವರದಿ ಕೊಟ್ಟಿದ್ದರು. ಹಾಗಾದ್ರೆ ಮತ್ತೆ ಹೋಗಿ ತನಿಖೆ ಮಾಡಿಸೋದಾ. ಬೆಂಕಿಯಿಟ್ಟ ಇವರಿಗೆಲ್ಲಾ ನಾಚಿಗೆಯಾಗಬೇಕು. ಕಾಗೇರಿ 20-25 ವರ್ಷಗಳಿಂದ ಶಾಸಕರಾಗಿದ್ರೂ ಇವರ ಯೋಗ್ಯತೆಗೆ ಜನರಿಗೆ ಒಂದು ಹಕ್ಕು ಪತ್ರ ಕೊಡಕಾಗಿಲ್ಲ. ಅರಣ್ಯವಾಸಿಗಳ ಅರ್ಜಿಗಳು ವಜಾ ಆಗಿದ್ದು, ಬೆಂಗಳೂರಿಗೆ ಓಡಾಡುತ್ತಿದ್ದಾರೆ. ಬಡವರು ಬೆಂಗಳೂರು ಕೋರ್ಟ್‌ಗೆ ಓಡಾಡ್ಬೇಕಂದ್ರೆ ಎಷ್ಟು ಖರ್ಚಾಗುತ್ತೆ. ಒಂದು ಮನೆ ಕೊಟ್ಟಿದ್ದೀರಾ ನಿಮ್ಮ ಯೋಗ್ಯತೆಗೆ ಅಂತಾ ಯೋಚನೆ ಮಾಡ್ಬೇಕಲ್ಲಾ ಎಂದರು.
ಇದನ್ನೂ ಓದಿ: ಪರೇಶ್ ಮೇಸ್ತ ಸಾಯುವ ಮುನ್ನ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿ: ಸಿಬಿಐ ವರದಿಯಲ್ಲಿ ಉಲ್ಲೇಖ
ಕಾಗೇರಿಯವರು ಇವತ್ತು ಸ್ಪೀಕರ್ ಆಗಿರೋದ್ರಿಂದ ಬೈಯ್ಯಂಗಿಲ್ಲ. ಈಗಂತೂ ಕಾಗೇರಿ ಬಾಯಿ ಬಿಡಲ್ಲ, ಆರಾಮವಾಗಿ ತಣ್ಣಗೆ ಕೂತ್ಕೊತ್ತಾರೆ. ಸ್ಪೀಕರ್ ಆಗಿ ಸುತ್ತಿಗೆ ಹಿಡಿದುಕೊಂಡು ಕೊಟಾ..ಕೊಟಾ…ಕುಟ್ಟುತ್ತಾರೆ. ಅದು ಬಿಟ್ರೆ ಬೇರೆಂತಾನೂ ಇಲ್ಲ, ಪಾಪ ಬಡಪಾಯಿ ಎಂದು ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:13 pm, Sun, 4 December 22