ಪರೇಶ್ ಮೇಸ್ತ ಸಾಯುವ ಮುನ್ನ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿ: ಸಿಬಿಐ ವರದಿಯಲ್ಲಿ ಉಲ್ಲೇಖ
ದಿವಂಗತ ಪರೇಶ್ ಮೇಸ್ತ ಸಾವಿನ ಬಗ್ಗೆ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯ ಹಲವು ಅಂಶಗಳು ಹೊಸದಾಗಿ ಮಹತ್ವ ಪಡೆಯುತ್ತಿವೆ.
ಕಾರವಾರ: ಹಿಂದುತ್ವ ಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ದಿವಂಗತ ಪರೇಶ್ ಮೇಸ್ತ ಸಾವಿನ ಬಗ್ಗೆ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯ ಹಲವು ಅಂಶಗಳು ಹೊಸದಾಗಿ ಮಹತ್ವ ಪಡೆಯುತ್ತಿವೆ. ಸಾಯುವ ಮೊದಲು ಮೇಸ್ತ ಅವರು ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಎಂಬ ಅಂಶವು ಸಿಬಿಐ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖವಾಗಿದೆ. ಕುಮಟಾದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದ ಕಾರ್ಯಕ್ರಮವಲ್ಲಿ ಮೇಸ್ತ ಸಹ ಭಾಗವಹಿಸಿದ್ದರು. ಇದಕ್ಕಾಗಿ 25 ಕಿಮೀ ಪ್ರಯಾಣಿಸಿದ್ದರು. ಕಾರ್ಯಕ್ರಮ ಮುಗಿಸಿ ಸಂಜೆ ಮನೆಗೆ ಬಂದಿದ್ದ ಪರೇಶ್ ಮೇಸ್ತ ನಂತರ ಸ್ನೇಹಿತರ ಭೇಟಿಗೆಂದು ಹೊರಗೆ ಹೋಗಿದ್ದರು ಎಂದು ಎಂದು ವರದಿಯು ಉಲ್ಲೇಖಿಸಿದೆ.
ಹೊನ್ನಾವರ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿರುವ ವರದಿಯು ಇದೀಗ ಲಭ್ಯವಾಗಿದ್ದು, ವರದಿಯಲ್ಲಿ ಪರೇಶ ಮೇಸ್ತಾ ಒಡನಾಡಿಗಳು ಮತ್ತು ಸ್ನೇಹಿತರ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳೂ ಸೇರಿದಂತೆ ಸಾಕಷ್ಟು ಸಾಕ್ಷ್ಯಗಳನ್ನು ಪೂರಕ ಪುರಾವೆಯಾಗಿ ಸಲ್ಲಿಸಲಾಗಿದೆ. ‘ಪರೇಶ ಮೇಸ್ತ ಯಾವ ಹುಡುಗಿಯನ್ನೂ ಪ್ರೀತಿಸುತ್ತಿರಲಿಲ್ಲ. ಶಬರಿಮಲೆಗೆ ಹೋಗಲು ಸಹ ತಂದೆ ಒಪ್ಪಿಗೆ ಪಡೆದಿದ್ದ. ಕೆಲವೊಮ್ಮೆ ಮದ್ಯ ಸೇವಿಸಿಯೂ ಮನೆಗೆ ಬಂದಿದ್ದ. ಆಗಾಗ ಸ್ನೇಹಿತರ ಮನೆಯಲ್ಲಿ ಇರುತ್ತಿದ್ದ’ ಎಂದು ವರದಿಯಲ್ಲಿ ಸಿಬಿಐ ತಿಳಿಸಿದೆ.
ಶೆಟ್ಟಿಕೆರೆಯಲ್ಲಿ ಜಾರಿ ಬಿದ್ದು ಸಾವು: ಸಿಬಿಐ
ಪರೇಶ್ ಮೇಸ್ತ ಗಲಭೆ ವೇಳೆ ಓಡುತ್ತಿದ್ದಾಗ ಶೆಟ್ಟಿಕೆರೆಯಲ್ಲಿ ಜಾರಿ ಬಿದ್ದು, ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಸಿಬಿಐ ತನಿಖಾ ವರದಿಯಲ್ಲಿ ಹೇಳಿದೆ. ಸಿಬಿಐ ಅಧಿಕಾರಿಗಳು ಅ 18ರಂದು ಹೊನ್ನಾವರದ ನ್ಯಾಯಾಲಯಕ್ಕೆ ಪ್ರಕರಣದ ವಿಸ್ತೃತ ವರದಿಯನ್ನು ಸಲ್ಲಿಸಿದ್ದು, ವರದಿಯಲ್ಲಿ ಮೇಸ್ತನನ್ನು ಕೊಲೆ ಮಡಿರುವ ಯಾವುದೇ ಸಾಕ್ಷ್ಯಗಳಿಲ್ಲ. ಆರೋಪಿಗಳನ್ನು ದೋಷಮುಕ್ತಗೊಳಿಸಬಹುದು ಉಲ್ಲೇಖಿಸಲಾಗಿದೆ. ಈ ಹಿಂದೆ ಸಿಬಿಐ ಅಧಿಕಾರಿಗಳು ಅ 3 ರಂದು ಹೊನ್ನಾವರದ ನ್ಯಾಯಾಲಯಕ್ಕೆ ಪ್ರಕರಣದ ಮೊದಲ ವರದಿ ಸಲ್ಲಿಸಿದ್ದರು. ಈ ವರದಿಯಲ್ಲಿ ಪರೇಶ್ ಮೇಸ್ತ ಸಾವು ಹತ್ಯೆಯಲ್ಲ, ಆಕಸ್ಮಿಕ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಸಿಬಿಐ ವರದಿಯು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು.
Published On - 8:32 am, Wed, 19 October 22