ಅಭಿವೃದ್ಧಿ ಕಾಣದೆ ಹಾಳಾಗುತ್ತಿದೆ ಬೈತಖೋಲ್ ಬಂದರು; ಸರ್ಕಾರದ ವಿರುದ್ಧ ಮೀನುಗಾರರ ಆಕ್ರೋಶ

ಆಪತ್ಕಾಲದಲ್ಲಿ ಕರ್ನಾಟಕ ಸೇರಿ ನೆರೆ ರಾಜ್ಯದ ಬೋಟ್‌ಗಳಿಗೆ ರಕ್ಷಣೆ ನೀಡುವ ಅತೀ ಸುರಕ್ಷಿತ ಬಂದರು, ಸಮುದ್ರದಲ್ಲಿ ತೂಪಾನ್ ಎದ್ದಾಗ ಬಹುತೇಕ ಬೋಟ್‌ಗಳು ಕಾರವಾರದ ಬೈತಖೋಲ್​ಗೆ ಬಂದು ಲಂಗರು ಹಾಕುತ್ತವೆ. ಇಂತಹ ಸುರಕ್ಷಿತ ಬಂದರು ಸರ್ಕಾರದ ನಿರ್ಲಕ್ಷದಿಂದ ಅಭಿವೃದ್ಧಿ ಕಾಣದೆ ಹಾಳಾಗುವ ಸ್ಥಿತಿಗೆ ಬಂದಿದೆ.

ಅಭಿವೃದ್ಧಿ ಕಾಣದೆ ಹಾಳಾಗುತ್ತಿದೆ ಬೈತಖೋಲ್ ಬಂದರು; ಸರ್ಕಾರದ ವಿರುದ್ಧ ಮೀನುಗಾರರ ಆಕ್ರೋಶ
ಉತ್ತರ ಕನ್ನಡ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 05, 2022 | 3:17 PM

ಉತ್ತರ ಕನ್ನಡ: ಆಪತ್ಕಾಲದಲ್ಲಿ ಕರ್ನಾಟಕ ಸೇರಿ ನೆರೆ ಹೊರೆಯ ರಾಜ್ಯದ ಬೋಟ್‌ಗಳಿಗೆ ಆಸರೆ ತಾಣವಾದ ಕಾರವಾರದ ಬೈತ್​ಕೋಲ್​ ಬಂದರು ಸರ್ಕಾರದ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕಾಣದೆ ಹಾಳಾಗುತ್ತಿದೆ. ವಾಣಿಜ್ಯ ಬಂದರು ಪಕ್ಕದಲ್ಲಿರುವ ಮೀನುಗಾರಿಕಾ ಬಂದರು ಪಶ್ಚಿಮ ಕರಾವಳಿಯ ಅತೀ ಸುರಕ್ಷಿತ ಬಂದರು ಆಗಿದೆ. ಮಳೆಗಾಲ ಸಂದರ್ಭದಲ್ಲಿ ಸಮುದ್ರದಲ್ಲಿ ತೂಪಾನ್ ಎದ್ದಾಗ ಬಹುತೇಕ ಬೋಟ್‌ಗಳು ಈ ಬಂದರಿಗೆ ಬಂದು ಲಂಗರು ಹಾಕಿ ನಿಲ್ಲುತ್ತವೆ. ಇಂತಹ ಸುರಕ್ಷಿತ ಬಂದರಿಗೆ ಸರ್ಕಾರದ ಅಭಿವೃದ್ಧಿ ಯೋಜನೆಗಳಿಲ್ಲದೆ ಸೊರಗುತ್ತಿದೆ. ಇದರಿಂದಾಗಿ ಮೀನುಗಾರಿಕೆಗೆ ಸಾಕಷ್ಟು ಹಾನಿಯಾಗುತ್ತಿದೆ.

ಇನ್ನು ಜಿಲ್ಲೆಯ ಕಾರವಾರ ನಗರ ವ್ಯಾಪ್ತಿಯ ಈ ಬಂದರನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ಇದ್ದಾಗ 100 ಮೀಟರ್ ವಿಸ್ತರಿಸಲಾಗಿತ್ತು. ಬಂದರು ವಿಸ್ತಾರಮಾಡಿ ಐದು ವರ್ಷ ಕಳೆದರು ಯಾವುದೇ ತರಹದ ಹೂಳು ತೆಗೆಯುದಾಗಲಿ, ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳಾಗಲಿ ನಡೆದಿಲ್ಲ. ಹೀಗಾಗಿ ಮೀನುಗಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕನಿಷ್ಠ ಮೂಲಭೂತ ಸೌಕರ್ಯಗಳು ಸಹ ಈ ಬಂದರಿನಲ್ಲಿ‌ ಇಲ್ಲ ಎಂದು ಮೀನುಗಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಈ ಬಂದರಿನಲ್ಲಿ ಪ್ರತಿನಿತ್ಯ 2500 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಾರೆ. ಅದರಲ್ಲಿ 500 ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಾರೆ. ದುರದೃಷ್ಟಕರ ಅಂದರೆ ಈ ಬಂದರಿನಲ್ಲಿ ಸುರಕ್ಷಿತ ಶೌಚಾಲಯ ವ್ಯವಸ್ಥೆ, ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ ಸಹ ಇಲ್ಲ. ನೆರಳಿನ ತಾಣಗಳಿಲ್ಲದೆ ಮಹಿಳೆಯರು ಬಂದರಿನಲ್ಲಿ ನಿಲ್ಲುವ ವಾಹನಗಳ ನೆರಳಿನ ಪಕ್ಕದಲ್ಲಿ ಬಂದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ರಾತ್ರಿ ವೇಳೆ ಕರೆಂಟ್ ಸಹ ಸರಿಯಾಗಿ ಇರಲ್ಲ ಇಂತಹ ಸ್ಥಿತಿಯಲ್ಲಿ ಬೈತಖೋಲ್ ಬಂದರು ಇದೆ.

ಇನ್ನು ಪ್ರಮುಖವಾಗಿ ಬಂದರಿನಲ್ಲಿ ಹೂಳು ತೆಗೆಯದ ಹಿನ್ನೆಲೆ ಒಂದಕ್ಕೊಂದು ಬೋಟಗಳು ಡಿಕ್ಕಿಯಾಗಿ ಹಾಳಾಗಿರುವ ಉದಾಹರಣೆಗಳು ಸಹ ಇವೆ. ಬಂದರಿನಲ್ಲಿ 155 ಕ್ಕೂ ಹೆಚ್ಚು ಯಾಂತ್ರಿಕ ಬೋಟ್‌ಗಳು ಇದ್ದು ಪ್ರತಿವರ್ಷ 24 ಸಾವಿರ ಟನ್ ಮೀನು ಉತ್ಪಾದನೆ ಮಾಡುತ್ತಾರೆ‌‌. ಸಾಕಷ್ಟು ಆದಾಯದ ಬಂದರು ಇದಾಗಿದ್ದರು ಅಭಿವೃದ್ಧಿ ಮಾತ್ರ ಕಾಣುತ್ತಿಲ್ಲ. ಹೀಗಾಗಿ ಆದಷ್ಟು ಬೇಗ ಸರ್ಕಾರ ಈ ಬಂದರಿನ ಬಗ್ಗೆ ವರದಿ ತರೆಸಿಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಿ ಎನ್ನುವುದು ಮೀನುಗಾರರ ಒತ್ತಾಯವಾಗಿದೆ.

ಇದನ್ನೂ ಓದಿ:ಮಹಾರಾಷ್ಟ್ರ ಬಳಿಕ ಗೋವಾ ರಾಜ್ಯದಿಂದ ಗಡಿ ಕ್ಯಾತೆ; ಕಾರವಾರದಲ್ಲಿ ಕೊಂಕಣಿ ಭಾಷೆಗೆ ಆದ್ಯತೆ ಕೊಡಬೇಕೆಂದು ಪ್ರಧಾನಿಗೆ ಪತ್ರ

ಒಟ್ಟಿನಲ್ಲಿ ಕಾರವಾರ ನಗರ ಪಕ್ಕದಲ್ಲಿರುವ ಬೈಥಕೋಲ್ ಬಂದರು ಸರ್ಕಾರದ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕಾಣದೆ ಸೊರಗುತ್ತಿದ್ದು, ಇನ್ನಾದರು ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಬಂದರನ್ನು ಅಭಿವೃದ್ಧಿಗೊಳಿಸುವ ಕೆಲಸ ಮಾಡುತ್ತಾರ ಎಂಬುವುದನ್ನು ಕಾದು ನೋಡಬೇಕಾಗಿದೆ..

ವರದಿ: ವಿನಾಯಕ ಬಡಿಗೇರ ಟಿವಿ 9 ಕಾರವಾರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ