ಕಾರವಾರ: ಕಾಳಿ ನದಿ-ಅರಬ್ಬೀ ಸಮುದ್ರ ಸಂಗಮ ಹಿನ್ನೀರು ಉಪ್ಪು ಉಪ್ಪು -ಸ್ಥಳೀಯ ಗ್ರಾಮಸ್ಥರು ಕಂಗಾಲು
ಕೋಟಿಗಟ್ಟಲೆ ರೂಪಾಯಿ ವೆಚ್ಚದಲ್ಲಿ 16 ಕಡೆಗಳಲ್ಲಿ ಸಿಮೆಂಟ್‌ನ ತಡೆಗೋಡೆಗಳನ್ನು ನಿರ್ಮಿಸಲಾಗಿತ್ತು. ಆದರೆ, ಆ ತಡೆಗೋಡೆಗಳೇ ತುಂಡಾಗಿ ಉದುರಿ ಬೀಳುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯ, ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದಾಗಿ ಹಲವು ಗ್ರಾಮಗಳು ಸಮಸ್ಯೆ ಅನುಭವಿಸುವಂತಾಗಿದೆ.
ಅದು ಸಮುದ್ರದಲ್ಲಿ ವಿಲೀನವಾಗೋ ನದಿಗೆ ಹೊಂದಿಕೊಂಡಿರುವಂತಹ ಹಳ್ಳಿ. ನದಿಯಲ್ಲಿ ಮಿಶ್ರಣವಾಗೋ ಉಪ್ಪು ನೀರು (salt water) ಗ್ರಾಮೀಣ ಭಾಗದತ್ತ ಹರಿಯದಂತೆ ಕೋಟಿಗಟ್ಟಲೆ ವೆಚ್ಚದಲ್ಲಿ ಸುಮಾರು 16 ಸ್ಥಳಗಳಲ್ಲಿ ಸಿಮೆಂಟ್ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ, ಕೇವಲ ನಮಕ್ ಕೆ ವಾಸ್ತೆ ಕಳಪೆ ಕಾಮಗಾರಿ ನಡೆಸಿರುವ ಕಾರಣದಿಂದ ಹಲವಾರು ಬಾವಿಗಳ ನೀರು ಉಪ್ಪಾಗಿ ಪರಿವರ್ತಿತಗೊಂಡಿದೆ. ಹೀಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ…
ಹೌದು, ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹೊರಭಾಗದಲ್ಲಿರುವ ಹಣಕೋಣ, ಹೊಟೆಗಾಳಿ, ಅಂಬಿಗವಾಡ, ಪಾಟ್ಲೋವಾಡಾ, ಬಾಬುನಾಯ್ಕವಾಡಾ ಮುಂತಾದೆಡೆ ಸುಮಾರು 35ಕ್ಕೂ ಹೆಚ್ಚು ಮನೆಗಳಿದ್ದು, ಇಲ್ಲಿ ಸಾರ್ವಜನಿಕ ಬಾವಿ ಸೇರಿ ಸುಮಾರು 20ಕ್ಕೂ ಹೆಚ್ಚು ಕುಡಿಯುವ ನೀರಿನ ಬಾವಿಗಳಿವೆ. ಈ ಗ್ರಾಮ ಪಂಚಾಯತ್‌ಗಳ ನಡುವೆಯೇ ಕಾಳಿ ನದಿ ಹರಿದು ಸಮುದ್ರ ಸೇರುತ್ತಿದೆ. ಕಾರವಾರದಿಂದ (karwar) ಕೊಂಚ ದೂರದಲ್ಲೇ ಕಾಳಿ ನದಿ (kali river) ಹಾಗೂ ಸಮುದ್ರ (Arabian Sea) ಸಂಗಮವಾಗುವುದರಿಂದ ಇಲ್ಲಿ ಹಿನ್ನೀರಿನ ಜತೆ ಮಿಶ್ರವಾಗುವ ಉಪ್ಪು ನೀರು ಈ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಹಿಂದಕ್ಕೆ ಹರಿಯುತ್ತಿದೆ.
ಈ ಕಾರಣದಿಂದಾಗಿ ಕೋಟಿಗಟ್ಟಲೆ ರೂಪಾಯಿ ವೆಚ್ಚದಲ್ಲಿ ಸುಮಾರು 16 ಕಡೆಗಳಲ್ಲಿ ಸಿಮೆಂಟ್‌ನ ತಡೆಗೋಡೆಗಳನ್ನು ನಿರ್ಮಿಸಲಾಗಿತ್ತು. ಆದರೆ, ಈ ತಡೆಗೋಡೆಗಳ ಕಾಮಗಾರಿ ಕಳಪೆಯಾಗಿದ್ದರಿಂದ ತಡೆಗೋಡೆಗಳೇ ತುಂಡು ತುಂಡಾಗಿ ಉದುರಿ ಬೀಳುತ್ತಿವೆ. ಅಲ್ಲದೇ, ತಡೆಗೋಡೆ ಭಾಗದಲ್ಲಿ ಗುಂಡಿಗಳೂ ಕಾಣಿಸತೊಡಗಿವೆ. ಇನ್ನು ತಡೆಗೋಡೆಯ ಅಡಿಭಾಗದಲ್ಲಿ ಗಟ್ಟಿ ಹಲಗೆಗಳನ್ನು ಅಳವಡಿಸಬೇಕಾಗಿತ್ತಾದರೂ ಸಪೂರ ಹಲಗೆಗಳನ್ನು ಅಳವಡಿಸಿ ಬೇಕಾಬಿಟ್ಟಿ ಕೆಲಸಗಳನ್ನು ನಡೆಸಲಾಗಿದೆ.
ಇದರಿಂದಾಗಿ ಉಪ್ಪು ನೀರು ಒಳಗೆ ಹರಿದು ಅಂತರ್ಜಲದೊಂದಿಗೆ ಸೇರಿ ಬಾವಿಗಳ ನೀರು ಉಪ್ಪಾಗತೊಡಗಿದೆ. ಅಲ್ಲದೇ, ಈ ಭಾಗದಲ್ಲಿ ರಾಶಿಯಾಗಿ ಪೊದೆಗಳು ನಿರ್ಮಾಣಗೊಂಡಿದ್ದು, ಇವುಗಳಡಿ ಹಾಗೂ ಬದಿಗಳಲ್ಲಿ ಸಂಗ್ರಹಗೊಂಡ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುತ್ತಿರುವುದರೊಂದಿಗೆ ನೀರು ಕೊಳೆತು ಇಡೀ ಊರಿಗೆ ಊರೇ ವಾಸನೆ ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಹಣಕೋಣ ನಿವಾಸಿ ಅಶೋಕ.
ಇನ್ನು ಈ ತಡೆಗೋಡೆಯ ಅಡಿಭಾಗದಲ್ಲಿ ಉಪ್ಪು ನೀರು ಹಿನ್ನೀರಿನ ಜತೆ ಮಿಶ್ರಣವಾಗದಂತೆ ತಡೆಯಲು ಕಬ್ಬಿಣ ಅಥವಾ ಮರದ ದಪ್ಪ ಹಲಗೆಗಳನ್ನು ಅಳವಡಿಸಬೇಕಾಗಿತ್ತು. ಆದರೆ, ಸಾಕಷ್ಟು ಸಮಯಗಳಿಂದ ತೆಳ್ಳನೆಯ ಹಲಗೆಯನ್ನು ಅಳವಡಿಸಲಾಗುತ್ತಿದೆ. ಇವು ಕೊಳೆತು ಪ್ರತೀ 3 ರಿಂದ 6 ತಿಂಗಳಿಗೊಮ್ಮೆ ತುಂಡಾಗಿ ನೀರಿನಲ್ಲೇ ಕೊಚ್ಚಿ ಹೋಗುತ್ತಿವೆ.
ಸಣ್ಣ ನೀರಾವರಿ ಇಲಾಖೆಗೆ ಸಾಕಷ್ಟು ಬಾರಿ ದೂರು ನೀಡಿದರೂ ಈವರೆಗೆ ಶಾಶ್ವತ ಪರಿಹಾರ ಒದಗಿಸದ್ದರಿಂದ ಸ್ಥಳೀಯರು ಕುಡಿಯುವ ನೀರಿಗಾಗಿ ಸಂಕಷ್ಟ ಎದುರಿಸುವುದು ಮುಂದುವರಿದಿದೆ. ಇನ್ನು ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದಾಗಿ ಹಲವು ಗ್ರಾಮಗಳ ಸಮಸ್ಯೆ ಅನುಭವಿಸುವಂತಾಗಿದೆ. ಆದಷ್ಟು ಬೇಗ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕಿದೆ. (ವರದಿ: ವಿನಾಯಕ ಬಡಿಗೇರ, ಟಿವಿ 9, ಕಾರವಾರ)