ಉತ್ತರ ಕನ್ನಡ: ಕಡಲತೀರದಲ್ಲಿ ಬಿದ್ದಿರುವ ವಿಷಕಾರಿ ಬ್ಲೂ ಬಟನ್ ಜೆಲ್ಲಿ ಪಿಶ್; ಮೀನುಗಾರರಿಗೆ ಮತ್ಸ್ಯ ಕ್ಷಾಮದ ಭೀತಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 26, 2023 | 4:12 PM

ಈ ಹಿಂದೆ ಟೊಂಕಾದಲ್ಲಿ ಸತ್ತ ಡಾಲ್ವಿನ್, ಲಕ್ಷಾಂತರ ಸಂಖ್ಯೆಯ ವಿಷಕಾರಿ ಬ್ಲೂ ಬಟನ್ ಜೆಲ್ಲಿ ಫಿಶ್ ಗುಂಪಿನ ಮಧ್ಯೆ ಸಿಕ್ಕು ಸಾವಾಗಿರುವ ಸಾಧ್ಯತೆಗಳಿವೆ ಎಂದು ಕಡಲ ವಿಜ್ಞಾನಿ ಪ್ರಕಾಶ್ ಮೇಸ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಜೆಲ್ಲಿ ಫಿಶ್​ಗಳು ಮನುಷ್ಯ ಮುಟ್ಟಿದರೆ ತುರಿಕೆಯಾಗುತ್ತದೆ. ಮನುಷ್ಯ ಇದನ್ನು ತಿನ್ನುವುದಿಲ್ಲ.

ಉತ್ತರ ಕನ್ನಡ: ಕಡಲತೀರದಲ್ಲಿ ಬಿದ್ದಿರುವ ವಿಷಕಾರಿ ಬ್ಲೂ ಬಟನ್ ಜೆಲ್ಲಿ ಪಿಶ್; ಮೀನುಗಾರರಿಗೆ ಮತ್ಸ್ಯ ಕ್ಷಾಮದ ಭೀತಿ
ಹೊನ್ನಾವರ ಬೀಚ್​ನಲ್ಲಿ ಪತ್ತೆಯಾದ ವಿಷಕಾರಿ ಬ್ಲೂ ಬಟನ್ ಜೆಲ್ಲಿ ಪಿಶ್
Follow us on

ಉತ್ತರ ಕನ್ನಡ, ಸೆ.26: ರಾಜ್ಯಾದ್ಯಂತ ಹವಾಮಾನ ವೈಪರಿತ್ಯದಿಂದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಆದ್ರೆ, ಕರಾವಳಿಯಲ್ಲಿ ಹವಾಮಾನ ಬದಲಾವಣೆ ಇದೀಗ ಮೀನುಗಾರರಿಗೆ ಕಂಠಕವಾಗಿ ಪರಿಣಮಿಸಿದೆ. ಹೌದು, ಉತ್ತರ ಕನ್ನಡ ಜಿಲ್ಲೆ(Uttara Kannada)ಯ ಹೊನ್ನಾವರದ ಕಡಲ ತೀರದಲ್ಲಿ ವಿಷಕಾರಿ ಬ್ಲೂ ಬಟನ್ ಜೆಲ್ಲಿ ಫಿಶ್​(Blue Button Jellyfish)ಗಳು ಹೇರಳವಾಗಿ ದಡದಲ್ಲಿ ಸಂಗ್ರಹವಾಗುತ್ತಿದ್ದು, ಮತ್ಸ್ಯ ಕ್ಷಾಮ ಎದುರಾಗಿದೆ. ಬ್ಲೂ ಬಟನ್ ಜೆಲ್ಲಿ ಫಿಶ್ ಕಳೆಬರ ಹೊನ್ನಾವರದ ಕಾಸರಕೋಡ ಸುತ್ತ-ಮುತ್ತ ಹಾಗೂ ಮುಗಳಿ ಕಡಲ ಕಿನಾರೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕಡಲ ತೀರದಲ್ಲಿ ಕಂಡು ಬಂದಿದೆ.

ಸಮುದ್ರ ನೀರಿನ ತಾಪಮಾನ ಹೆಚ್ಚಾಗಿ ಬ್ಲೂ ಬಟನ್ ಜೆಲ್ಲಿ ಫಿಶ್​ಗಳ ಉತ್ಪತ್ತಿ

ಸಮುದ್ರ ನೀರಿನ ತಾಪಮಾನದ ಬದಲಾವಣೆಯ ವಿಧ್ಯಮಾನದಿಂದ ಬ್ಲೂ ಬಟನ್ ಜೆಲ್ಲಿ ಫಿಶ್​ಗಳ ಬಾರಿ ಪ್ರಮಾಣದ ಉತ್ಪತ್ತಿಗೆ ಕಾರಣವಾಗುತ್ತದೆ. ಹೌದು, ಸಮುದ್ರ ನೀರಿನ ತಾಪಮಾನ ಹೆಚ್ಚಾಗಿ ಉಷ್ಣ ನೀರು ಇದರ ಸಂಖ್ಯೆ ಹೆಚ್ಚು ಮಾಡುತ್ತದೆ. ಕಳೆಬರದ ಸುತ್ತಮುತ್ತ ಮತ್ತು ಮುಗಳಿ ಕಡಲಧಾಮದ ಪರಿವ್ಯಾಪ್ತಿಯ ಟೊಂಕಾ ಮರಳು ಕಡಲತೀರದಲ್ಲಿ ಬ್ಲೂ ಬಟನ್ ಜೆಲ್ಲಿ ಫಿಶ್​ಗಳ ದೊಡ್ಡ ಗುಂಪು ಬಂದು ಬಿದ್ದಿದೆ. ಇವು ವಿಷಕಾರಿ ಬಾಹುಗಳನ್ನು ಹೊಂದಿದ್ದು, ಇವುಗಳ ಸೇವನೆ ಅಥವಾ ಇವುಗಳ ಮಧ್ಯ ಸಿಕ್ಕಿ ಉಸಿರಾಟದ ತೊಂದರೆಯಿಂದ ಜಲಚರ ಸಸ್ತನಿಗಳು ಸಾವು ಕಾಣುತ್ತವೆ ಎನ್ನುತ್ತಾರೆ ಕಡಲ ವಿಜ್ಞಾನಿಗಳು.

ಇದನ್ನೂ ಓದಿ:ಉತ್ತರ ಕನ್ನಡ: 35 ಮೀ. ಉದ್ದದ ನೀಲಿ ತಿಮಿಂಗಿಲದ ಮೃತದೇಹ ಪತ್ತೆ; ಇಲ್ಲಿದೆ ಫೋಟೋಸ್

ಹೈಡ್ರಾಡ್ ಪ್ರಬೇಧಕ್ಕೆ ಸೇರಿದ ಬ್ಲೂ ಬಟನ್ ಜೆಲ್ಲಿ ಫಿಶ್​

ಇದು ಒಂದು ಹೈಡ್ರಾಡ್ ಪ್ರಬೇಧಕ್ಕೆ ಸೇರಿದ್ದು, ಸಮುದ್ರದ ಮೇಲ್ಭಾಗದಲ್ಲಿ ದೊಡ್ಡ ಗುಂಪಾಗಿ ಉತ್ಪತಿಯಾದರೆ (ಬ್ಲೂಮ)ಇತರ ಸಮುದ್ರ ಜಲಚರಗಳಿಗೆ ಮಾರಕವಾಗುತ್ತದೆ. ಇದು ಏಡಿ, ಮೀನು, ಸಿಗಡಿ ಮೀನಿನ ಮೇಲೆ ಆಕ್ರಮಣ ಮಾಡಿ ತಿನ್ನುತ್ತವೆ. ಇವು ಸಮುದ್ರದ ತೆರೆ ಮತ್ತು ಗಾಳಿಯ ದಿಕ್ಕಿನಲ್ಲಿ ಚಲಿಸುತ್ತದೆ. ಆಹಾರಕ್ಕಾಗಿ ಸಮುದ್ರ ಜೀವಿಗಳಲ್ಲೂ ಸ್ಪರ್ಧೆ ಇದ್ದು, ಹೋರಾಟವು ನಡೆಯುತ್ತದೆ. ಡಾಲ್ಲಿನ್, ಬಂಗಡೆ, ತಾರ್ಲೆ ಮೀನು ಜೆಲ್ಲಿ ಫಿಶ್​ಗಳ ಆಹಾರ ಒಂದೇ ಬಗೆಯಾಗಿರುತ್ತದೆ.

ಈ ಹಿಂದೆ ಟೊಂಕಾದಲ್ಲಿ ಸತ್ತ ಡಾಲ್ವಿನ್, ಲಕ್ಷಾಂತರ ಸಂಖ್ಯೆಯ ವಿಷಕಾರಿ ಬ್ಲೂ ಬಟನ್ ಜೆಲ್ಲಿ ಫಿಶ್ ಗುಂಪಿನ ಮಧ್ಯೆ ಸಿಕ್ಕು ಸಾವಾಗಿರುವ ಸಾಧ್ಯತೆಗಳಿವೆ ಎಂದು ಕಡಲ ವಿಜ್ಞಾನಿ ಪ್ರಕಾಶ್ ಮೇಸ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಜೆಲ್ಲಿ ಫಿಶ್​ಗಳು ಮನುಷ್ಯ ಮುಟ್ಟಿದರೆ ತುರಿಕೆಯಾಗುತ್ತದೆ. ಮನುಷ್ಯ ಇದನ್ನು ತಿನ್ನುವುದಿಲ್ಲ. ಕಡಲಾಮೆ ಬಿಟ್ಟರೆ ಇತರ ಸಮುದ್ರ ಜೀವಿಗಳು ಇದನ್ನು ತಿನ್ನುವುದು ಕಡಿಮೆ. ಅದರ ಗುಂಪಿನಲ್ಲಿ ಸಿಕ್ಕಿಕೊಂಡ ಜಲಚರಗಳ ಸಾವು ಖಚಿತ. ಇವು ಲಕ್ಷ ಕೋಟಿಗಟ್ಟಲೆ ಸಂಖ್ಯೆಯಲ್ಲಿ ವಿಶಾಲ ಪ್ರದೇಶ ಅವರಿಸುತ್ತದೆ.

ಇದೀಗ ಹವಾಮಾನ ವೈಪರಿತ್ಯದಿಂದ ಹೊನ್ನಾವರದ ಕಡಲ ತೀರದಲ್ಲಿ ಅತೀ ಹೆಚ್ಚು ಜಲ್ಲಿ ಫಿಶ್​ಗಳು ಉತ್ಪತ್ತಿಯಾಗಿದ್ದು, ಈ ಭಾಗದಲ್ಲಿ ಇರುವ ಮೀನುಗಳಿಗೆ ಕಂಠಕವಾಗಿದೆ. ಹೀಗಾಗಿ ಈ ಭಾಗದಲ್ಲಿ ಉತ್ಪತ್ತಿಯಾದ ಜೆಲ್ಲಿ ಫಿಶ್​ನಿಂದಾಗಿ ಮೀನುಗಳು ತಮ್ಮ ದಿಸೆಯನ್ನು ಬದಲಿಸಿ ಬೇರೆಡೆ ತೆರಳುತ್ತಿವೆ. ಹವಾಮಾನ ಬದಲಾವಣೆ ಮೀನುಗಾರಿಕೆಗೆ ಪೂರಕವಾಗಿದ್ದರೂ ಬ್ಲೂ ಬಟನ್ ಜೆಲ್ಲಿ ಫಿಶ್​ನ ಹೇರಳ ಉತ್ಪತ್ತಿಯಿಂದ ಮೀನುಗಾರರಿಗೆ ಮತ್ಸ್ಯ ಕ್ಷಾಮ ಎದುರಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ