ಕಾರವಾರ, ಸೆ.22: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೊಣ ಗ್ರಾಮದ ಮನೆಯಲ್ಲಿ ನಸುಕಿನ ಜಾವ ಬರ್ಬರ ಕೊಲೆಯಾಗಿದೆ(Murder). ಬೆಳ್ಳಂಬೆಳಗ್ಗೆ ಮಹಾರಾಷ್ಟ್ರದ ಪುಣೆಯ ಉದ್ಯಮಿ ವಿನಾಯಕ ನಾಯ್ಕ(52) ಎಂಬುವವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳು ವಿನಾಯಕ ದಂಪತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು ಪತಿ ವಿನಾಯಕ ನಾಯ್ಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿಗೆ ಗಂಭೀರ ಗಾಯಗಳಾಗಿವೆ.
ಮಹಿಳೆಯನ್ನ ಕಾರವಾರ ಜಿಲ್ಲಾಸ್ಪತ್ರೆಗೆ ರವಾನೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೊಲೆ ಯಾರೂ ಮಾಡಿದ್ರು ಮತ್ತು ಯಾಕೆ ಮಾಡಿದ್ರು ಎಂಬುವುದು ತಿಳಿದುಬಂದಿಲ್ಲ. ಚಿತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪತ್ನಿ ಸಮೇತ ಪುಣೆಯಲ್ಲಿ ವಾಸವಾಗಿದ್ದ ವಿನಾಯಕ್ ಅವರು ಕಳೆದ ವಾರ ಗ್ರಾಮ ದೇವರ ಜಾತ್ರೆಗೆಂದು ಕಾರವಾರಕ್ಕೆ ಬಂದಿದ್ದರು. ಇಂದು ಬೆಳಗ್ಗೆ ಪುಣೆಗೆ ಹೋಗುವುದಾಗಿ ಸ್ನೇಹಿತರಿಗೆ ತಿಳಿಸಿದ್ದರು. ಬೆಳಗಿನ ಜಾವ ಮಚ್ಚಿನಿಂದ ದಾಳಿ ನಡೆಸಿ ಕೊಲೆ ಮಾಡಿರುವುದು ಭಾರಿ ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಳ; ಮಳೆಗಾಲದಲ್ಲಿಯು 32 ಡಿಗ್ರಿ ಬಿಸಿಲು ದಾಖಲು
ಇನ್ನು ಮತ್ತೊಂದೆಡೆ ಕಲಬುರಗಿ ಹೊರವಲಯದ ನಾಗನಹಳ್ಳಿ ಗ್ರಾಮದಲ್ಲಿ ಚಾಕುವಿನಿಂದ ಇರಿದು ಪದವಿ ವಿದ್ಯಾರ್ಥಿಯ ಬರ್ಬರ ಕೊಲೆ ಮಾಡಲಾಗಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಪದವಿ ವ್ಯಾಸಂಗ ಮಾಡ್ತಿದ್ದ ಸುಮೀತ್ ಎಂಬ ಯುವಕ ನಾಲ್ಕೈದು ದಿನಗಳ ಹಿಂದೆಯಷ್ಟೇ ತಾಯಿಯೊಂದಿಗೆ ಊರಿಗೆ ಬಂದಿದ್ದ. ಯುವತಿಯೊಬ್ಬಳ ಜೊತೆ ಸುಮಿತ್ ಸೋದರ ಸಚಿನ್ ಸ್ನೇಹ ಹೊಂದಿದ್ದ. ಸಚಿನ್ ಮೇಲಿನ ಕೋಪಕ್ಕೆ ಸುಮಿತ್ ಜೊತೆ ಯುವತಿ ಕಡೆಯವರು ಗಲಾಟೆ ಮಾಡಿದ್ದಾರೆ. ಇದೇ ವಿಚಾರಕ್ಕೆ ಸುಮಿತ್ ತಾಯಿ ಜೊತೆ ನಾಲ್ಕೈದು ಜನರು ಗಲಾಟೆ ಮಾಡಿದ್ದರು. ಈ ಗಲಾಟೆ ವೇಳೆ ಸುಮೀತ್ ಮಲ್ಲಾಬಾದ್(19)ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಯುವತಿಯ ಕುಟುಂಬಸ್ಥರಿಂದ ಸಚಿನ್ ಸೋದರ ಸುಮೀತ್ ಹತ್ಯೆ ನಡೆದಿದೆ. ಕಲಬುರಗಿಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ