ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ: ಮತ್ತೆ ಗುಡ್ಡ ಕುಸಿತ, 10ಕ್ಕೂ ಹೆಚ್ಚು ಕುಟುಂಬಗಳು ಸ್ಥಳಾಂತರ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 06, 2022 | 8:31 AM

ಮಳೆಯ ಅವಾಂತರ ಮುಂದುವರೆದಿದ್ದು, ಮಳೆಯಿಂದ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಜಿಲ್ಲೆಯ ದಿಬ್ಬೂರು ಹಾಗೂ ತುಮಕೂರು ನಗರಕ್ಕೆ ಸಂಪರ್ಕ ಮಾಡುವ ರಸ್ತೆ ಜಲಾವೃತವಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ: ಮತ್ತೆ ಗುಡ್ಡ ಕುಸಿತ, 10ಕ್ಕೂ ಹೆಚ್ಚು ಕುಟುಂಬಗಳು ಸ್ಥಳಾಂತರ
ಭಟ್ಕಳ ತಾಲೂಕಿನ ಮುಟ್ಟಳ್ಳಿಯಲ್ಲಿ ಮತ್ತೆ ಗುಡ್ಡ ಕುಸಿತ
Follow us on

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ (rain) ಅಬ್ಬರ ಮುಂದುವರೆದಿದ್ದು, ಭಟ್ಕಳ ತಾಲೂಕಿನ ಮುಟ್ಟಳ್ಳಿಯಲ್ಲಿ ಮತ್ತೆ ಗುಡ್ಡ ಕುಸಿತವಾಗಿದೆ. ಗುಡ್ಡ ಕುಸಿತ ಹಿನ್ನೆಲೆ ಗ್ರಾಮದ 10ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಸ್ಥಳೀಯ ಆಡಳಿತ ಗುಡ್ಡದ ಭಾಗದಲ್ಲಿ ರಸ್ತೆ ಸಂಚಾರ ಬಂದ್ ಮಾಡಿದೆ. ನಾಲ್ಕು ದಿನದ ಹಿಂದೆ ಮುಟ್ಠಳ್ಳಿಯಲ್ಲಿ ಗುಡ್ಡ ಕುಸಿದು ಮನೆಯ ಮೇಲೆ ಬಿದ್ದು ನಾಲ್ವರು ಮೃತಪಟ್ಟಿದ್ದರು. ಈಗ ಮತ್ತೆ ಗುಡ್ಡ ಕುಸಿದಿರುವುದರಿಂದ ಜನರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ: Karnataka Rain: ಭಾರೀ ಮಳೆಯಿಂದ ಮಲೆನಾಡು, ಕರಾವಳಿಗೆ ಆರೆಂಜ್ ಅಲರ್ಟ್ ಘೋಷಣೆ; ಕೊಡಗಿನಲ್ಲಿ ಇಂದು ಶಾಲಾ- ಕಾಲೇಜುಗಳಿಗೆ ರಜೆ

ಕೋಡಿ ಹರಿದು ಗ್ರಾಮಕ್ಕೆ ನುಗ್ಗಿದ ನೀರು: ಗ್ರಾಮ ಭಾಗಶಃ ಜಲಾವೃತ

ತುಮಕೂರು: ನಗರದಲ್ಲಿ ಮಳೆಯ ಅವಾಂತರ ಮುಂದುವರೆದಿದ್ದು, ಮಳೆಯಿಂದ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಜಿಲ್ಲೆಯ ದಿಬ್ಬೂರು ಹಾಗೂ ತುಮಕೂರು ನಗರಕ್ಕೆ ಸಂಪರ್ಕ ಮಾಡುವ ರಸ್ತೆ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುವಂತ್ತಾಗಿದೆ. ಇನ್ನೂ ದಿಬ್ಬೂರು ಗ್ರಾಮ ಭಾಗಶಃ ಜಲಾವೃತವಾಗಿದ್ದು, ಅಮಾನಿಕೆರೆ ಕೋಡಿ ಹರಿದು ಗ್ರಾಮಕ್ಕೆ ನೀರು ನುಗ್ಗಿದೆ. ಪ್ರಮುಖ ರಸ್ತೆ ಮೇಲೆ ರಭಸವಾಗಿ ನೀರು ಹರಿಯುತ್ತಿದೆ. ಮಕ್ಕಳನ್ನ ಶಾಲೆಗೆ ಕಳಿಸಲು ಸ್ಥಳಿಯರು ಭಯ ಬಿಳುತ್ತಿದ್ದಾರೆ.
ಕಳೆದ ಒಂದು ವಾರದಿಂದ ಸುರಿದ ಮಳೆಗೆ ಅವಾಂತರ ಸೃಷ್ಟಿಯಾಗಿದ್ದು, ರಾಜಗಾಲುವೆ ಒತ್ತುವರಿಯಿಂದ ಮನೆ ಅಡಿಕೆ ತೋಟ ಜಮೀನುಗಳಿಗೆ ನೀರು ನುಗ್ಗಿದೆ. ಲಾರಿ ರಿಪೇರಿ ಗ್ಯಾರೆಜ್​​ಗೂ ಕೋಡಿ‌ ನೀರು ತಟ್ಟಿದ್ದು, ಭಯದಿಂದ ದಿಬ್ಬೂರಿನ‌ ಜನತೆ ಬದುಕುತ್ತಿದ್ದಾರೆ. ಸ್ವಲ್ಪ ಜಾರಿದರೂ ಅನಾಹುತ ಗ್ಯಾರಂಟಿ ಎಂದು ದಿಬ್ಬೂರಿನ ನಿವಾಸಿ ಶಶಿಕಲಾ ಟಿವಿ9 ಎದುರು ಜಿಲ್ಲಾಡಳಿತ ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಿರಂತರ ಮಳೆಯಿಂದ ರೈತರು ಕಂಗಾಲು

ಕಲಬುರಗಿ: ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ತೊಗರಿ, ಉದ್ದು, ಹೆಸರು ಬೆಳೆ ನಿರಂತರ ಮಳೆಯಿಂದ‌ ಹಾಳಾಗಿ ಹೋಗುತ್ತಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳದಿದ್ದ ಬೆಳೆ ನೀರು ನಿಂತ ಪರಿಣಾಮ ಹಳದಿ ಬಣ್ಣಕ್ಕೆ ತಿರುಗಿ ಒಣಗಿ ಹೋಗುತ್ತಿದೆ. ತಾವು ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳದಿದ್ದೆವು. ಇದೀಗ ಬೆಳೆ ಹಾಳಾಗಿ ಹೋಗಿದೆ. ಸರ್ಕಾರವು ಕೈ ಬಿಟ್ಟರೆ ತಮಗೆ ಆತ್ಮಹತ್ಯೆವೊಂದೆ ದಾರಿ ಅಂತ ರೈತರು ಹೇಳುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು, ದಾವಣಗೆರೆ-ಚನ್ನಗಿರಿ ಮಾರ್ಗದ ಸೇತುವೆ ಜಲಾವೃತವಾಗಿದೆ. ಚನ್ನಗಿರಿ, ಚಿರಡೋಣಿಲ್ಲಿ ಹಳ್ಳಗಳು ತುಂಬಿ ಹರಿಯುತ್ತಿವೆ. ಚನ್ನಗಿರಿ ತಾಲೂಕಿನ ನೆಲ್ಕುದುರೆ ಗ್ರಾಮದಲ್ಲಿ ಶಾಲಾ ಆವರಣಕ್ಕೆ ನೀರು ನುಗ್ಗಿದೆ.

ಮುಂದುವರೆದ ಡೋಣಿ ನದಿ ಪ್ರವಾಹ

ವಿಜಯಪುರ: ಜಿಲ್ಲೆಯಲ್ಲಿ ಡೋಣಿ ನದಿ ಪ್ರವಾಹ ಮುಂದುವರೆದಿದ್ದು, ತಾಳಿಕೋಟೆ ಪಟ್ಟಣದ ಹೊರ ಭಾಗದ ಡೋಣಿ ನದಿಯ ಹಳೆಯ ಸೇತುವೆ ಮುಳುಗಡೆಯಾಗಿದೆ. ಹೊಸ ಸೇತುವೆ‌ ಬಿರುಕು ಬಿಟ್ಟು ಬಿಳೋ ಹಂತಕ್ಕೆ ತಲುಪಿದ ಕಾರಣ ಅಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಕಾರಣ ಮನಗೂಳಿ ದೇವಾಪೂರ ರಾಜ್ಯ‌ ಹೆದ್ದಾರಿ 61 ಬಂದ್ ಮಾಡಿದ್ದು, ವಿಜಯಪುರ ತಾಳಿಕೋಟೆ ಸಂಚಾರ ಸ್ಥಗಿತವಾಗಿದೆ. ಅಪಾರ ಪ್ರಮಾಣದಲ್ಲಿ ನೀರು ಹರಿದು‌ ಬರುತ್ತಿದೆ. ತಾಳಿಕೋಟೆ ವಿಜಯಪುರ ಸಂಪರ್ಕಿಸಲು ಐವತ್ತು ಕಿಲೋ ಮೀಟರ್​ಗೂ ಅಧಿಕ ಸುತ್ತುಹಾಕೋ ಅನಿವಾರ್ಯತೆ ಉಂಟಾಗಿದೆ. ತಾಳಿಕೋಟೆ ತಾಲೂಕಿನ‌ ಬೋಳವಾಡ, ಗುತ್ತಿಹಾಳ, ಬೊಮ್ಮನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ.

ಮತ್ತುಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.