ಶಿರಸಿ ಮಾರಿಕಾಂಬಾ ದೇಗುಲದಲ್ಲಿ ಧಾರ್ಮಿಕ ಸೇವೆಗಳ ಶುಲ್ಕ ಹೆಚ್ಚಳ; ಆಕ್ಷೇಪಣೆಗೆ ಇದೆ ಅವಕಾಶ
ಹೊಸ ಸೇವಾ ಶುಲ್ಕಕ್ಕೆ ಆಕ್ಷೇಪಣೆಗಳಿದ್ದಲ್ಲಿ ಸೆಪ್ಟೆಂಬರ್ 5ರ ಒಳಗೆ ಸಲ್ಲಿಸಲು ಸಾರ್ವಜನಿಕರನ್ನು ಆಡಳಿತ ಮಂಡಳಿ ಕೋರಿದೆ.
ಶಿರಸಿ: ಕರ್ನಾಟಕದ ಪ್ರಮುಖ ಶಕ್ತಿಪೀಠದಲ್ಲಿ ಒಂದೆನಿಸಿದ ಶಿರಸಿಯ ಮಾರಿಕಾಂಬಾ ದೇವಾಲಯದ ಧಾರ್ಮಿಕ ಸೇವೆಗಳ ಶುಲ್ಕವನ್ನು ಆಡಳಿತ ಮಂಡಳಿ ಹೆಚ್ಚಿಸಿದೆ. ಈ ಕುರಿತು ಸಭೆ ನಡೆಸಿದ ಆಡಳಿತ ಮಂಡಳಿ ಹೊಸ ಶುಲ್ಕದ ಪ್ರಕಟಣೆಯನ್ನು ದೇವಸ್ಥಾನದ ಸೂಚನಾ ಫಲಕಕ್ಕೆ ಅಳವಡಿಸಿದೆ. ಹೊಸ ಸೇವಾ ಶುಲ್ಕಕ್ಕೆ ಆಕ್ಷೇಪಣೆಗಳಿದ್ದಲ್ಲಿ ಸೆಪ್ಟೆಂಬರ್ 5ರ ಒಳಗೆ ಸಲ್ಲಿಸಲು ಸಾರ್ವಜನಿಕರನ್ನು ಆಡಳಿತ ಮಂಡಳಿ ಕೋರಿದೆ. ಬಹುತೇಕ ಎಲ್ಲ ಸೇವೆಗಳ ದರವನ್ನು ಪ್ರಸ್ತುತಕ್ಕಿಂತ ದುಪ್ಪಟ್ಟು ಹೆಚ್ಚಿಸಲಾಗಿದ್ದು, ದರ ಹೆಚ್ಚಳದ ಅಗತ್ಯವಿತ್ತೇ ಎಂಬ ಪ್ರಶ್ನೆ ಸಾರ್ವಜನಿಕ ಮತ್ತು ಭಕ್ತರ ವಲಯದಲ್ಲಿ ಕೇಳಿಬಂದಿದೆ.
ಹೊಸ ಸೇವಾಶುಲ್ಕದ ವಿವರ ದೇವಸ್ಥಾನದಲ್ಲಿ ರುದ್ರಾಭಿಷೇಕ ಸೇವೆಗೆ ₹ 10ರ ಬದಲು ₹100, ಮೃತ್ಯುಂಜಯ ಶಾಂತಿಗೆ ₹1001 ಬದಲು ₹3500, ಸತ್ಯನಾರಾಯಣ ಕಥೆಗೆ ₹325ರ ಬದಲು ₹1500ಕ್ಕೆ, ನಿರಂತರ ಪಲ್ಲಕ್ಕಿ ಸೇವೆ ದರ ₹6,001ರಿಂದ ₹25,000ಕ್ಕೆ ಏರಿಕೆ ಮಾಡಲಾಗಿದೆ. ಕಾರ್ತಿಕ ದೀಪೋತ್ಸವದ ಒಂದು ದಿನದ ಸೇವೆ ಮೊತ್ತವನ್ನು ₹ 650 ರಿಂದ ₹ 5,000, ಶಾಶ್ವತ ಸೇವೆಗೆ ₹6001ರ ಬದಲು ₹10,001, ನಿರಂತರ ಸೇವೆ ಪಾರಾಯಣ ₹2001ರ ಬದಲಾಗಿ ₹5,000, ಶಾಶ್ವತ ಸೇವೆಗೆ ₹6001ರ ಬದಲು ₹10,000ಕ್ಕೆ ಏರಿಕೆ ಮಾಡಿ ಕರಡು ಪಟ್ಟಿಯಲ್ಲಿ ಪ್ರಕಟಣೆ ಮಾಡಿದೆ.
ಭಕ್ತರ ಅಭಿಪ್ರಾಯವೇನು? ದೇವಸ್ಥಾನವು ವ್ಯಾಪಾರ ಕೇಂದ್ರವಲ್ಲ, ಶ್ರದ್ಧಾ ಕೇಂದ್ರ. ಹೀಗೆ ಭಕ್ತರ ನಂಬಿಕೆ ಮೇಲೆ ಹಣ ಹೊಂದಿಸುವ ಕೆಲಸ ಸರಿಯಲ್ಲ ಎಂಬ ಅಭಿಪ್ರಾಯ ಇದೀಗ ಭಕ್ತರ ವಲಯದಲ್ಲಿ ಕೇಳಿಬಂದಿದೆ. ಸದ್ಯ ನಿಗದಿ ಮಾಡಿರುವ ದರಕ್ಕೆ ಭಕ್ತರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಅವರ ಅಭಿಪ್ರಾಯ ಪಡೆದು ಅಂತಿಮ ನಿರ್ಣಯ ತೆಗೆದುಕೊಳ್ಳಲು ಆಡಳಿತ ಮಂಡಳಿ ಮುಂದಾಗಿದೆ. ಹೊಸ ಸೇವಾ ಶುಲ್ಕಕ್ಕೆ ಆಕ್ಷೇಪಣೆಗಳಿದ್ದಲ್ಲಿ ಸೆಪ್ಟೆಂಬರ್ 5ರ ಒಳಗೆ ಸಲ್ಲಿಸಲು ಸಾರ್ವಜನಿಕರನ್ನು ಆಡಳಿತ ಮಂಡಳಿ ಕೋರಿದೆ.
ಇದನ್ನೂ ಓದಿ:
ಪಶ್ಚಿಮ ಕರಾವಳಿಯಲ್ಲಿ ಮೊದಲಬಾರಿಗೆ ಗಿಡುಗ ಆಮೆ ಕಳೆಬರ ಪತ್ತೆ
ಪ್ರಧಾನಿ ಮೋದಿಗೆ ಶಿರಸಿಯ ಕುಶಲಕರ್ಮಿಗಳು ರಚಿಸಿದ ಶ್ರೀಗಂಧದ ಹಾರ ಉಡುಗೊರೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
(Sirsi Marikamba Temple Increased religious services fees)