ನೀರು ಸಿಗುವವರೆಗೂ ಬಾವಿ ತೋಡುವೆ -ಅಂಗನವಾಡಿ ಮಕ್ಕಳ ದಣಿವು ತಣಿಸಲು ಮುಂದಾದ ಏಕಾಂಗಿ ಮಹಿಳೆ ಗೌರಿ

| Updated By: ಸಾಧು ಶ್ರೀನಾಥ್​

Updated on: Feb 08, 2024 | 6:02 PM

ಜನವರಿ 30 ನೇ ತಾರೀಕಿನಿಂದ ಗೌರಿ ನಾಯ್ಕ ಅವರು ಏಕಾಂಗಿ ಪ್ರಯತ್ನದಿಂದ ಇದೀಗ 15 ಅಡಿಗೂ ಹೆಚ್ಚು ಆಳ ಬಾವಿ ತೋಡಿದ್ದಾರೆ. ಎಲ್ಲಿಯವರೆಗೆ ಬಾವಿಯಲ್ಲಿ ಗಂಗೆ ಬರುವುದಿಲ್ಲವೂ ಅಲ್ಲಿಯವರೆಗೂ ಬಾವಿ ತೋಡುವ ಕೆಲಸ ಮಾಡಿ ಗಂಗೆ ತರಿಸುವ ಛಲದಲ್ಲಿದ್ದಾರೆ ಈ ಗೌರಿ.

ಆ ಮಹಿಳೆ (Sirsi woman) ಜಮೀನಿನಲ್ಲಿ ನೆಟ್ಟಿದ ಅಡಿಕೆ ಮರಕ್ಕೆ ನೀರು ಹಾಯಿಸಲು, ಏಕಾಂಗಿಯಾಗಿ ಬಾವಿ ತೊಡಿ ಅಡಿಕೆ ಮರಗಳನ್ನು ಉಳಿಸಿ, ಅನೇಕರು ನಿಬ್ಬೆರಗಿಸುವಂತೆ ಮಾಡಿದ್ದರು. ಸದ್ಯ ಶಿರಸಿ ನಗರದ ಅಂಗನವಾಡಿ ಕೇಂದ್ರದ ಮಕ್ಕಳ (anganwadi children) ಕುಡಿಯುವ ನೀರಿನ ಸಮಸ್ಯೆ (drinking water) ನೀಗಿಸಲು, ನಿಸ್ವಾರ್ಥದಿಂದ ಇನ್ನೊಂದು ಬಾವಿ ತೆಗೆಯತ್ತಿದ್ದಾಳೆ. ಅಷ್ಟಕ್ಕೂ ಆ ಮಹಿಳೆ ಯಾರು? ಬಾವಿ ಅಗಿಯೊದು ಹೇಗೆ ಎಂಬುದರ ವರದಿ ಇಲ್ಲಿದೆ ನೋಡಿ. ರಾಜ್ಯದಲ್ಲಿ ಈಗಾಗಲೇ ನೀರಿನ ಹಾಹಾಕರ ಶುರು ಆಗಿದೆ. ಈ ಮಧ್ಯೆ ಕುಡಿಯುವ ನೀರಿನ ಸಲುವಾಗಿ ಇಲ್ಲೊಬ್ಬ ಮಹಿಳೆ.. ಕೈಯಲ್ಲಿ ಗುದ್ದಲಿ ಹಾರೆ ಹಿಡಿದು ಎಕಾಂಗಿಯಾಗಿ ಬಾವಿ ತೋಡುತ್ತಿದ್ದಾಳೆ. ಹೌದು ಈ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಗಣೇಶ ನಗರದ್ದು.

ಹೀಗೆ ಏಕಾಂಗಿಯಾಗಿ ಬಾವಿ ತೋಡುತ್ತಿರುವ ಮಹಿಳೆ ಗೌರಿ ನಾಯ್ಕ. ಗಣೇಶ ನಗರದ ಭಾಗದಲ್ಲಿ ಬೇಸಿಗೆ ಬಂತೆಂದರೇ ನೀರಿನ ಕೊರತೆಯಿಂದ ಸಮಸ್ಯೆ ಎದುರಾಗುತ್ತದೆ. ವಾರದಲ್ಲಿ ಎರಡು ದಿನ ಗ್ರಾಮಪಂಚಾಯ್ತಿ ಯಿಂದ ಬರುವ ನೀರು ಅಷ್ಟಕಷ್ಟೇ. ಇನ್ನು ನೀರು ಶುದ್ಧವಾಗಿರದ ಕಾರಣ ಅಂಗನವಾಡಿಯಲ್ಲಿ ಅಡುಗೆ ಮಾಡಲು ಹಾಗೂ ಮಕ್ಕಳಿಗೆ ಕುಡಿಯಲು ಹೊರಭಾಗದಿಂದ ಹೊತ್ತು ತರಬೇಕು. ಹೀಗಾಗಿ ಈ ಸಮಸ್ಯೆ ಅರಿತ ಗೌರಿ ನಾಯ್ಕ ಇದೀಗ ಅಂಗನವಾಡಿ ಆವರಣದಲ್ಲಿ ಏಕಾಂಗಿಯಾಗಿ ಬಾವಿ ತೋಡಲು ಪ್ರಾರಂಭಿಸಿದ್ದಾರೆ.

ಜನವರಿ 30 ನೇ ತಾರೀಕಿನಿಂದ ಗೌರಿನಾಯ್ಕ ಅವರು ಅಂಗನವಾಡಿಯ ಹಿಂಭಾಗದ ಜಾಗದಲ್ಲಿ ಯಾರ ಸಹಾಯವನ್ನೂ ಪಡೆಯದೇ ಬಾವಿ ತೋಡುತಿದ್ದಾರೆ. ಇವರ ಏಕಾಂಗಿ ಪ್ರಯತ್ನದಿಂದ ಇದೀಗ 15 ಅಡಿಗೂ ಹೆಚ್ಚು ಆಳ ಬಾವಿ ತೋಡಲಾಗಿದೆ. ಮಕ್ಕಳಿಗೆ, ಸ್ಥಳೀಯರಿಗೆ ಕುಡಿಯಲು ಶುದ್ಧ ನೀರು ಸಿಗಬೇಕು ಎಂಬ ಬಯಕೆ ಇವರದ್ದಾದರೇ ನೀರನ್ನು ಹಿತಮಿತವಾಗಿ ಬಳಸಿ ಎನ್ನುವ ಸಂದೇಶ ಸಹ ಇದರಲ್ಲಿ ಕೂಡಿದ್ದು ಎಲ್ಲಿಯವರೆಗೆ ಬಾವಿಯಲ್ಲಿ ಗಂಗೆ ಬರುವುದಿಲ್ಲವೂ ಅಲ್ಲಿಯವರೆಗೂ ಬಾವಿ ತೋಡುವ ಕೆಲಸ ಮಾಡಿ ಗಂಗೆ ತರಿಸುವ ಛಲದಲ್ಲಿದ್ದಾರೆ ಈ ಗೌರಿ.

55 ವರ್ಷದ ಆಸುಪಾಸಿನಲ್ಲಿ ಇರುವ ಈ ಮಹಿಳೆ ಈ ಹಿಂದೆ ಏಕಾಂಗಿಯಾಗಿ ಎರಡು ಬಾವಿಗಳನ್ನು ತೋಡಿ ಯಶಸ್ವಿಯಾಗಿದ್ದರು. ಹೀಗೆ ತಮ್ಮ ಜಮೀನಿನಲ್ಲಿ ತೋಡಿದ್ದ ಬಾವಿಯಲ್ಲಿ ಗಿಡಗಳಿಗೆ ನೀರುಣಿಸಲು ಬಳಸಿದ್ರೆ, ಉಳಿದ ನೀರು ಗ್ರಾಮದ ಜನರಿಗೆ ನೀಡುತ್ತಾರೆ. ಸದಾ ಸಮಾಜಕ್ಕೆ ಏನಾದರೂ ಮಾಡಬೇಕು ಎಂಬ ಹಂಬಲ ಹೊಂದಿದ ಈ ಮಹಿಳೆ ತಮ್ಮೂರಿನ ಮಕ್ಕಳ ನೀರಿನ ದಾಹ ನೀಗಿಸಲು ಪಣತೊಟ್ಟಿದ್ದಾರೆ.

ಸದ್ಯ ಪ್ರತಿ ದಿನ ತನ್ನೆಲ್ಲಾ ಕಾಯಕ ಬದಿಗೊತ್ತಿ ಮುಂಜಾನೆಯಿಂದ ಸಂಜೆಯವರೆಗೆ ಅಂಗನವಾಡಿ ಆವರಣದಲ್ಲಿ ಬಾವಿ ನಿರ್ಮಿಸುತಿದ್ದು ಈಕೆಯ ಭಗೀರಥ ಪ್ರಯತ್ನ ಯಶಸ್ಸು ಕಂಡು ಬಾವಿಯಲ್ಲಿ ಗಂಗೆ ಉತ್ಪತ್ತಿಯಾಗುವ ಮೂಲಕ ಇಲ್ಲಿನ ಮಕ್ಕಳಿಗೆ ನೀರಿನ ದಾಹ ತೀರುವಂತಾಗಲಿ ಎಂಬುದೇ ನಮ್ಮ ಆಶಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ