ಉತ್ತರ ಕನ್ನಡ, ಆ.29: ಜಿಲ್ಲೆಯ ಕಾರವಾರ (Karwar) ದಲ್ಲಿ ಸದ್ಯ ಫೋಟೋ ರಾಖಿಗಳಿಗೆ ಸಕತ್ ಬೇಡಿಕೆ ಕಂಡುಬರುತ್ತಿದೆ. ತಾಲ್ಲೂಕಿನ ಸದಾಶಿವಗಡದ ನರಸಿಂಹಶಿಟ್ಟಾದ ಸ್ವೀಟಿ ಎನ್ನುವವರು ತಮ್ಮ ಸಹೋದರಿಯಿಂದ ಕಲಿತ ಹ್ಯಾಂಡ್‌ಮೇಡ್ ರಾಖಿ (Hand-Made Cotton Rakhi) ತಯಾರಿಕೆ ಇದೀಗ ಬಹುಬೇಡಿಕೆಯನ್ನು ಗಳಿಸಿಕೊಂಡಿದೆ. ಸ್ವೀಟಿ ಅವರು ತಮ್ಮ ಮನೆಯಲ್ಲೇ ವಿಧವಿಧವಾದ ರಾಖಿಗಳನ್ನು ತಯಾರಿಸಿ ನೀಡುತ್ತಿದ್ದು, ವಾಟ್ಸಪ್ ಮೂಲಕವೇ ಆರ್ಡರ್ ಪಡೆದು ಕಾರವಾರ ವ್ಯಾಪ್ತಿಯಲ್ಲಿ ತಾವೇ ಡೆಲಿವರಿ ಕೂಡ ಮಾಡುತ್ತಿದ್ದಾರೆ. ಅದರಲ್ಲಿ ಫೋಟೋ ರಾಖಿಗಳಿಗೆ ಸಕತ್ ಡಿಮ್ಯಾಂಡ್ ಇದ್ದು ತಮ್ಮ ಸಹೋದರ, ಸಹೋದರಿಯ ಫೋಟೋ ಹೊಂದಿದ ತರಹೇವಾರಿ ಡಿಸೈನ್‌ನ ರಾಖಿಗಳನ್ನು ಜನರು ಆರ್ಡರ್ ಕೊಟ್ಟು ಖರೀದಿಸುತ್ತಿದ್ದಾರೆ.
ಇನ್ನು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಸ್ವೀಟಿ, ಅವರ ಅಕ್ಕ ಪೂಜಾರಿಂದ ರಾಖಿ ತಯಾರಿಕೆ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಜೊತೆಗೆ ಯೂಟ್ಯೂಬ್‌ನಿಂದ ವಿಧವಿಧದ ರಾಖಿ ಡಿಸೈನ್ ಕಲಿತಿದ್ದು, ಇದೀಗ ರೇಸಿನ್‌ನಿಂದ ಮಾಡಿಕೊಡುವ ವಾಟರ್‌ಪ್ರೂಫ್ ರಾಖಿಗಳು ಸಕತ್ ಹಿಟ್ ಆಗಿವೆ. 4 ವರ್ಷದಿಂದ ಬಿಡುವಿನ ಅವಧಿಯಲ್ಲಿ ರಾಖಿ ತಯಾರಿಸಿ ಕೊಡುತ್ತಿದ್ದು, ಈ ವರ್ಷ ಈಗಾಗಲೇ ಸುಮಾರು 800 ರಾಖಿಗಳನ್ನು ಮಾಡಿ ಮಾರಾಟ ಮಾಡಿದ್ದಾರೆ.
ಇನ್ನು ಸ್ವೀಟಿಗೆ ಅವರ ಸ್ನೇಹಿತೆ ಸ್ಮಿತಾ ಸಾಥ್ ಕೊಡುತ್ತಿದ್ದು, ಬಿಡುವಿನ ಅವಧಿಯಲ್ಲಿ ತಾವೂ ಸಹ ರಾಖಿ ತಯಾರಿಸಿಕೊಡುತ್ತಿದ್ದಾರೆ. ಸದ್ಯ ಫೋಟೋ ರಾಖಿಗಳಿಗೆ ಸಕತ್ ಬೇಡಿಕೆಯಿದ್ದು ಸ್ನೇಹಿತರು, ಪರಿಚಯಸ್ಥರು ಕಾರವಾರ ಮಾತ್ರವಲ್ಲದೇ ಬೆಂಗಳೂರು, ಮುಂಬೈನಿಂದಲೂ ಆರ್ಡರ್ ಮಾಡಿ ರಾಖಿಗಳನ್ನು ಖರೀದಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೇ ಹವ್ಯಾಸವಾಗಿ ಆರಂಭಿಸಿದ ರಾಖಿ ತಯಾರಿಕೆ ಇದೀಗ ಪುಟ್ಟದೊಂದು ಉದ್ಯಮವಾಗಿ ಆದಾಯ ತಂದುಕೊಡುವಂತಾಗಿರೋದು ನಿಜಕ್ಕೂ ಶ್ಲಾಘನೀಯ. ವಿನೂತನ ಮಾದರಿಯ ಫೋಟೋ ರಾಖಿ ತಯಾರಿಕೆ ಮೂಲಕ ಕಾರವಾರದ ಯುವತಿಯರು ಇತರರಿಗೂ ಮಾದರಿಯಾಗಿರೋದಂತೂ ಸತ್ಯ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ