ಕಾರವಾರ, ನವೆಂಬರ್ 9: ಕಾಡಿನ ಮಧ್ಯ ಬಸ್ಗಾಗಿ ಕಾದು ನಿಂತಿರುವ ಜನ, ಬಸ್ ಬರುತ್ತಿದ್ದಂತೆಯೇ ಪೂಜೆ ಮಾಡಿ ಸಂಭ್ರಮಿಸಿದ ಗ್ರಾಮಸ್ಥರು. ಇನ್ನೊಂದೆಡೆ ‘ಟಿವಿ9’ಗೆ ಧನ್ಯವಾದ ತಿಳಿಸುತ್ತಿರುವ ಪುಟಾಣಿಗಳು! ಈ ಎಲ್ಲ ದೃಶ್ಯಗಳು ಕಂಡುಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಮಾಳಂಬಿಡ್, ಕೂಡಲಗಾಂವ್, ಗವಳಿವಾಡಾ, ಕಾಸರವಾಡಿ ಹೀಗೆ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ.
ಈ ಎಲ್ಲ ಗ್ರಾಮಗಳು ದಟ್ಟ ಕಾಡಿನ ಮಧ್ಯ ಇವೆ. ಈ ಗ್ರಾಮಗಳಿಗೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಎಷ್ಟೆ ಮನವಿ ಮಾಡಿದ್ದರೂ ಬಸ್ ವ್ಯವಸ್ಥೆ ಇರಲಿಲ್ಲ. ಬಸ್ ಇರದ ಹಿನ್ನೆಲೆ, ಶಾಲೆಗೆ ಹೋಗುವ ಮಕ್ಕಳಿಗೆ ಬಹಳಷ್ಟು ಸಮಸ್ಯೆ ಆಗುತಿತ್ತು.
ಈ ಎಲ್ಲ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಕಡಿಮೆ ಇದ್ದ ಹಿನ್ನೆಲೆ, ಬಹಳಷ್ಟು ಜನ ಗ್ರಾಮ ಬಿಟ್ಟು ಬೇರೆ ಹೋಗಿ ನೆಲೆಸಿದ್ದರಿಂದ ಕಡಿಮೆ ಜನವಸತಿ ಇದೆ. ಹಾಗಾಗಿ ಗ್ರಾಮಗಳಲ್ಲಿ ಕೆವಲ 5ನೇ ತರಗತಿ ವರೆಗೆ ಮಾತ್ರ ಶಾಲೆ ಇದೆ. ಉಳಿದ ವಿದ್ಯಾಭ್ಯಾಸ ಮಾಡಬೇಕಂದರೆ ಹತ್ತು ಕಿ.ಮೀ ದೂರದಲ್ಲಿರುವ ಜಗಲಪೇಟ್ಗೆ ಹೋಗಬೇಕು. ಬಸ್ ವ್ಯವಸ್ಥೆಯೇ ಇಲ್ಲದ ಹಿನ್ನೆಲೆ ಕೆಲವು ಮಕ್ಕಳು ಅನಿವಾರ್ಯವಾಗಿ ಕಾಡಿನ ಮಧ್ಯದಿಂದಲೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು. ಕೆಲವು ಮಕ್ಕಳಂತೂ ಕಾಡು ಪ್ರಾಣಿಗಳಿಗೆ ಹೆದರಿ ಶಾಲೆಗೆ ಹೋಗುತ್ತಿರಲಿಲ್ಲ. ಈ ವಿಚಾರವಾಗಿ ಕೆಲವು ದಿನಗಳ ಹಿಂದೆ ‘ಟಿವಿ9’ ವಿಸ್ತೃತವಾಗಿ ವರದಿ ಪ್ರಸಾರ ಮಾಡಿತ್ತು.
‘ಟಿವಿ9’ ವರದಿ ಬೆನ್ನಲ್ಲೇ ಎಚ್ಚೆತ್ತ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಕೂಡಲೆ ಬಸ್ ವ್ಯವಸ್ಥೆ ಮಾಡಲು ಸೂಚನೆ ನೀಡಿದರು. ಅಲ್ಲದೆ, ಮಕ್ಕಳ ಜೀವನದ ಜೊತೆ ಆಟ ಆಡಬೇಡಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಡಿಸಿ ಮಾತಿನಿಂದ ಎಚ್ಚೆತ್ತ ಸಾರಿಗೆ ಹಾಗೂ ಸ್ಥಳಿಯ ಅಧಿಕಾರಿಗಳು ಕೆವಲ ಹದಿನೈದು ದಿನದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.
ಹತ್ತಾರು ವರ್ಷಗಳ ನಿರಂತರ ಹೋರಾಟ, ಐದಾರು ವರ್ಷ ಸಿಕ್ಕ ಸಿಕ್ಕವರಿಗೆ ಮನವಿ ಮಾಡಿದರೂ ತಮ್ಮೂರಿಗೆ ಬಸ್ ಬರದ ಹಿನ್ನೆಲೆ, ಅನಿವಾರ್ಯವಾಗಿ ಕೈಚೆಲ್ಲಿ ಕೂತಿದ್ದ ಗ್ರಾಮಸ್ಥರ ಧ್ವನಿಯಾಗಿ ನಿಂತಿದ್ದೇ ‘ಟಿವಿ9’. ‘ಟಿವಿ9’ ಸುದ್ದಿ ಪ್ರಸಾರ ಮಾಡಿದ ಬಳಿ ಗ್ರಾಮಕ್ಕೆ ಬಸ್ ಬಂದ ಹಿನ್ನೆಲೆ ಗ್ರಾಮಸ್ಥರು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಎಷ್ಟೆ ಹೆಳಿದರೂ ಪ್ರಯೋಜನ ಆಗಿಲ್ಲ ಎಂದು ಕೆಲವರು ಗ್ರಾಮ ಬಿಟ್ಟು ವಲಸೆ ಹೋಗಲು ಮುಂದಾಗಿದ್ದರು. ಆದರೆ ಈಗ ಗ್ರಾಮಕ್ಕೆ ಬಸ್ ಬಂದಿದ್ದು ಕಂಡು ಅಕ್ಷರಶಃ ಹತ್ತೂ ಗ್ರಾಮಗಳಲ್ಲಿಯೂ ಹಬ್ಬದ ವಾತಾವರಣ ಮನೆ ಮಾಡಿದೆ.
ಗ್ರಾಮಸ್ಥರೆಲ್ಲ ಸೇರಿ ಕಬ್ಬು ಹೂವಿನ ಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಿ, ಸಿಹಿ ಹಂಚುವುದರ ಜೊತೆಗೆ ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು.
‘ಟಿವಿ9’ ಪ್ರಕಟಿಸಿದ್ದ ವರದಿ: ಉತ್ತರ ಕನ್ನಡ ಜಿಲ್ಲೆಯ ಈ ಹತ್ತು ಗ್ರಾಮಗಳಿಗಿಲ್ಲ ಬಸ್ ಸಂಪರ್ಕ! ದಟ್ಟ ಕಾಡಿನಲ್ಲಿ ಪ್ರಾಣ ಭಯದಲ್ಲೇ ಶಾಲೆಗೆ ತೆರಳುವ ಮಕ್ಕಳು
ಒಟ್ಟಾರೆಯಾಗಿ ‘ಟಿವಿ9’ ಒಂದು ವರದಿಯಿಂದ ಹತ್ತು ಗ್ರಾಮಗಳಿಗೆ ಶಾಶ್ವತ ಪರಿಹಾರ ಸಿಗುವುದರ ಜೊತೆಗೆ, ಶಿಕ್ಷಣದಿಂದ ವಂಚಿತರಾಗುತ್ತಿದ್ದ ಹೆಣ್ಣು ಮಕ್ಕಳು ಮತ್ತೆ ಶಾಲೆಗೆ ಹೋಗುವಂತೆ ಆಗಿದೆ. ಚಿಕ್ಕ ಪುಟ್ಟ ಕೆಲಸಕ್ಕೆ ಪಟ್ಟಣಕ್ಕೆ ಹೋಗಲು ಪರದಾಡುತ್ತಿದ್ದ ಗ್ರಾಮಸ್ಥರಿಗೆ ಹಾಗೂ ವಯೋವೃದ್ಧರಿಗೆ ಅನಕೂಲ ಆಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ