ಮುಂಡಗೋಡ: ಶಾಲಾ ಬಿಸಿಯೂಟ ಸೇವಿಸಿ 22ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
ಉತ್ತರ ಕನ್ನಡದ ಮುಂಡಗೋಡ ಶಾಲೆಯ ಬಿಸಿಯೂಟ ಸೇವಿಸಿ 22ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಅಕ್ಷರ ದಾಸೋಹದಡಿ ಪೂರೈಕೆಯಾದ ಕಳಪೆ ಆಹಾರದಲ್ಲಿ ಇಲಿ ಹಿಕ್ಕೆ ಪತ್ತೆಯಾಗಿದೆ. 12 ಮಕ್ಕಳು ಗಂಭೀರ ಸ್ಥಿತಿಯಲ್ಲಿದ್ದು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಮಕ್ಕಳ ಆರೋಗ್ಯಕ್ಕೆ ಮಾರಕವಾಗಿದೆ. ಆಹಾರ ಗುಣಮಟ್ಟ ಪರೀಕ್ಷೆ ಮತ್ತು ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹ.

ಮುಂಡಗೋಡ, ನ.29: ಉತ್ತರ ಕನ್ನಡ ಜಿಲ್ಲೆಯ (Uttara Kannada) ಶಾಲೆಯೊಂದರಲ್ಲಿ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸೇವಿಸಿ 22ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆ ಸೇರಿದ್ದಾರೆ. ಶಾಲೆಗೆ ಕಳುಹಿಸಿದ ಆಹಾರ ಪದಾರ್ಥಗಳಲ್ಲಿ ಕಸ ,ಕಡ್ಡಿಗಳಿದ್ದು, ತಿನ್ನಲು ಯೋಗ್ಯವಲ್ಲ ಆಹಾರ ಧಾನ್ಯಗಳನ್ನು ಇಲಾಖೆ ನೀಡಿದೆ ಎಂದು ಹೇಳಲಾಗಿದೆ. ಜಿಲ್ಲೆಯ ಕಾರವಾರದ ಮುಂಡಗೋಡಿನ ಸರ್ಕಾರಿ ಮಾದರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ತಾಲೂಕು ಪಂಚಾಯತ್ ನೀಡುವ ಆಹಾರ ಧಾನ್ಯಗಳು ಕಳಪೆ ಮಟ್ಟದ್ದು ಎಂದು ಹೇಳಲಾಗಿದೆ. 22 ವಿದ್ಯಾರ್ಥಿಗಳು ಮಧ್ಯಾಹ್ನದ ಊಟ ಸೇವನೆ ಮಾಡಿ ಅಸ್ವಸ್ತಗೊಂಡಿದ್ದಾರೆ. ಈ ಬಗ್ಗೆ ಶಿಕ್ಷಕರನ್ನು ಕೇಳಿದಾಗ ಸರಿಯಾದ ಉತ್ತರ ನೀಡದೆ. ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.
ಆಹಾರದಲ್ಲಿ ಇಲಿ ಹಿಕ್ಕೆ ಪತ್ತೆ:
ಇನ್ನು ವಿದ್ಯಾರ್ಥಿಗಳು ಸೇವನೆ ಮಾಡಿದ ಆಹಾರಲ್ಲಿ ಇಲಿ ಹಿಕ್ಕೆ ಪತ್ತೆಯಾಗಿದೆ. ಮುಂಡಗೋಡಿನ ಶಾಲೆಯಲ್ಲಿ 400 ವಿದ್ಯಾರ್ಥಿಗಳಿದ್ದು, ಅದರಲ್ಲಿ 22 ಜನ ಅಸ್ವಸ್ತಗೊಂಡಿದ್ದಾರೆ. ಇದರಲ್ಲಿ 12 ಮಕ್ಕಳನ್ನು ತೀವ್ರ ನಿಗಾದಲ್ಲಿ ಇಡಲಾಗಿದೆ. ಉಳಿದರವರು ಚೇತರಿಸಿಕೊಂಡಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುತ್ತಿದ್ದ ವೇಳೆ ಇಲಿ ಹಿಕ್ಕೆಗಳು ಕಂಡು ಬಂದಿದೆ. ವಿದ್ಯಾರ್ಥಿಗಳು ಕ್ಲಾಸ್ ರೂಮ್ನಲ್ಲಿ ಹೊಟ್ಟೆನೋವಿನಿಂದ ಒದ್ದಾಡಿದ್ದಾರೆ. ಕೆಲವು ವಿದ್ಯಾರ್ಥಿಗಳು ವಾಂತಿ ಮಾಡಿದ್ದಾರೆ.
ಇನ್ನು ಮಕ್ಕಳ ಪೋಷಕರು ಶಾಲೆಯ ವ್ಯವಸ್ಥೆ ಬಗ್ಗೆ ದೂರಿದ್ದಾರೆ. ಮುಂಡಗೋಡಿನ ಶಾಲೆಯ ಬಿಸಿಊಟದ ಸ್ಥಿತಿ ಹೀಗಾದರೇ ,ಹಳಿಯಾಳ ಪಟ್ಟಣದ ದೇಶಪಾಂಡೆ ಆಶ್ರಯ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ,ಗುಡ್ನಾಪುರ ಕಾಲೋನಿ , ದೇಶಪಾಂಡೆ ನಗರದ ಸರ್ಕಾರಿ ಶಾಲೆ ಹಾಗೂ ಉರ್ದು ಶಾಲೆಗಳಲ್ಲಿ ಹಾಳಾದ ಧಾನ್ಯ ಹಾಗೂ ಕ್ರಿಮಿ ,ಕೀಟ,ಇಲಿ ಹಿಕ್ಕೆ ಇರುವ ಧಾನ್ಯ ಪೂರೈಕೆ ಮಾಡಲಾಗಿದೆ. ಬಿಸಿಊಟದ ಕೊಠಡಿ ಕೂಡ ತುಂಬಾ ಕೆಟ್ಟಾಗಿದೆ. ಇದರಲ್ಲಿ ಗುಜರಿ ವಸ್ತುಗಳನ್ನ ಸಂಗ್ರಹಣೆ ಮಾಡಿ ಇಡಲಾಗಿದ್ದು, ಅತ್ಯಂತ ಕೆಟ್ಟ ಮಟ್ಟದ ಸ್ಥಿತಿಯಲ್ಲಿದೆ ಎಂದು ಪೋಷಕರು ಹೇಳಿದ್ದಾರೆ. ಇನ್ನು ಸಂಬಂಧಪಟ್ಟ ಇಲಾಖೆಗೆ ಹಾಗೂ ಹಳಿಯಾಳದ ಬಿ.ಇ.ಓ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಮ್ಮನ್ನು ಬಿಟ್ಟು ಹೋಗ್ಬೇಡಿ ಸರ್: ಶಿಕ್ಷಕನಿಗೆ ವಿದ್ಯಾರ್ಥಿಗಳ ಕಣ್ಣೀರಿನ ಬೀಳ್ಕೊಡುಗೆ
ಆಹಾರ ಇಲಾಖೆಯ ಮೂಲಕ ಜಿಲ್ಲೆಯ ಪ್ರತಿ ತಾಲೂಕಿನ ಶಾಲೆಗಳಿಗೆ ಅಕ್ಷರ ದಾಸೋಹದಡಿ ಆಹಾರ ಪದಾರ್ಥ ಪೂರೈಕೆ ಮಾಡಲಾಗುತ್ತದೆ. ಇದರ ಗುಣಮಟ್ಟ ಪರೀಕ್ಷೆಗೆ ಆಹಾರ ಸಮಿತಿ ಇದೆ. ಒಂದು ವೇಳೆ ಪೂರೈಕೆಯಾದ ಆಹಾರ ಪದಾರ್ಥ ಕಳಪೆ ಮಟ್ಟದ್ದಾಗಿದ್ದರೆ ಅದನ್ನು ತಿರಸ್ಕರಿಸುವ ಹಕ್ಕು ಶಾಲೆಯ ಮುಖ್ಯ ಶಿಕ್ಷಕರಿಗಿದೆ.ಆದರೇ ಗುಣಮಟ್ಟವಿಲ್ಲದ ಆಹಾರ ಪದಾರ್ಥ,ಶುಚಿತ್ವವಿಲ್ಲದ ಬಿಸಿಊಟ ಕೊಠಡಿಗಳಿಂದಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



