ಗೋಕರ್ಣ ಸಮುದ್ರ ತೀರದಲ್ಲಿ ಪ್ರವಾಸಿಗನ ರಕ್ಷಣೆ
ಅಸ್ವಸ್ಥರಾಗಿ ಮುಳುಗುತ್ತಿದ್ದ ಅವರನ್ನು ಅವರ ಸ್ನೇಹಿತರೇ ರಕ್ಷಿಸಿದ್ದಾರೆ.
ಕಾರವಾರ: ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಗನೋರ್ವನನ್ನು ರಕ್ಷಿಸಲಾಗಿದೆ. ಡಾ. ಸುರೇಶ(36) ರಕ್ಷಣೆಗೊಳಗಾದ ಪ್ರವಾಸಿಗ. ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಸುರೇಶ ಅವರು ಈಜಲು ನೀರಿಗಿಳಿದಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿದ್ದರು. ಈವೇಳೆ ಅಸ್ವಸ್ಥರಾಗಿ ಮುಳುಗುತ್ತಿದ್ದ ಅವರನ್ನು ಅವರ ಸ್ನೇಹಿತರೇ ರಕ್ಷಿಸಿದ್ದಾರೆ.
ಪ್ರವಾಸಿಗರೇ ಗಮನಿಸಿ, ಗೋಕರ್ಣ ಸಮುದ್ರ ತೀರದಲ್ಲಿ 144 ಸೆಕ್ಷನ್ ಜಾರಿ ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಎಲ್ಲಾ ಬೀಚ್ಗಳ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 13ರಂದು 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಸೆಪ್ಟೆಂಬರ್ 13ರಿಂದ ಒಂದು ತಿಂಗಳ ಕಾಲ ಗೋಕರ್ಣದ ಎಲ್ಲಾ ಸಮುದ್ರ ತೀರಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿಲಾಗಿದ್ದು, ಪ್ರವಾಸಿಗರು ಮುಂದಿನ ಒಂದು ತಿಂಗಳ ಕಾಲ ಸಮುದ್ರ ತೀರಗಳನ್ನು ಪ್ರವೇಶಿಸುವಂತಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಆದೇಶ ಹೊರಡಿಸಿದ್ದಾರೆ.
ಗೋಕರ್ಣ ಬೀಚ್‌ಗಳಲ್ಲಿ ಪ್ರವಾಸಿಗರು ಸಾವನ್ನಪ್ಪುವುದನ್ನು ತಪ್ಪಿಸಲು 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಅನುಮತಿ ಪಡೆಯದೇ ಇನ್ನು ಮುಂದೆ ಯಾರೂ ಗೋಕರ್ಣ ಬೀಚ್‌ಗೆ ತೆರಳುವಂತಿಲ್ಲ. ಈಗಾಗಲೇ ರಾಜ್ಯ ಹಾಗೂ ಹೊರ ರಾಜ್ಯದ ಹಲವು ಪ್ರವಾಸಿಗರು ಗೋಕರ್ಣದಲ್ಲಿ ಸಮುದ್ರಕ್ಕಿಳಿದು ಜೀವ ಕಳೆದುಕೊಂಡಿದ್ದರು. ಪೊಲೀಸರು ಹಾಗೂ ಲೈಫ್ ಗಾರ್ಡ್ಸ್ ಸಿಬ್ಬಂದಿ ತಡೆದರೂ ಬೇರೆಡೆಯಿಂದ ಕಣ್ಣು ತಪ್ಪಿಸಿ ಸಮುದ್ರಕ್ಕಿಳಿದು ನೀರು ಪಾಲಾಗುತ್ತಿದ್ದರು. ಈ ಕಾರಣದಿಂದ ಸೇಫ್ ಬೀಚ್ ಹಾಗೂ ಡೇಂಜರ್ ಬೀಚ್ ಎಂದು ಎರಡು ವಿಭಾಗವನ್ನಾಗಿ ಪೊಲೀಸರು ಸಮುದ್ರ ತೀರವನ್ನು ವಿಂಗಡಿಸಿದ್ದಾರೆ. ಆದರೂ ಸದ್ಯದ ಮಟ್ಟಿಗೆ ಯಾರೂ ಸಮುದ್ರಕ್ಕಿಳಿಯದಂತೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ವಾರಾಂತ್ಯಗಳಂದು ಬೆಂಗಳೂರು ಮತ್ತಿತರ ನಗರಗಳು ಮತ್ತು ಉತ್ತರ ಕರ್ನಾಟಕದ ಭಾಗದಿಂದ ನೂರಾರು ಪ್ರವಾಸಿಗರು ಗೋಕರ್ಣಕ್ಕೆ ಆಗಮಿಸುತ್ತಾರೆ. ಇತ್ತೀಚಿನ ಕೆಲವು ದಿನಗಳಲ್ಲಿ ಹಲವು ಪ್ರವಾಸಿಗರು ಸಮುದ್ರ ಪಾಲಾದ ಘಟನೆ ನಡೆದಿದೆ. ಅಲ್ಲದೇ ಇತ್ತೀಚಿಗಷ್ಟೇ ಸೆಲ್ಪಿ ತೆಗೆಯಲು ಹೋದ ಪ್ರವಾಸಿಗನೋರ್ವ ಸಮುದ್ರದಲ್ಲಿ ಎಲ್ಲರ ಎದುರೇ ಕೊಚ್ಚಿಕೊಂಡು ಹೋದ ಘಟನೆಯೂ ನಡೆದಿತ್ತು.
ಇದನ್ನೂ ಓದಿ:
ಬೆಂಗಳೂರಿನಿಂದ ವಾರಾಂತ್ಯ ಪ್ರವಾಸಕ್ಕೆ ಬಂದಿದ್ದ 8 ಸ್ನೇಹಿತರು: ಗೋಕರ್ಣ ಕಡಲ ತೀರದಲ್ಲಿ ಯುವಕ ನೀರುಪಾಲು
(Uttara Kannada Gokarna Beach rescue of the traveler)