ಕಾರವಾರ, ಮಾ.22: ಬರೋಬ್ಬರಿ ನಾಲ್ಕೂವರೆ ವರ್ಷಗಳ ಕಾಲ ಯಾರ ಸಂಪರ್ಕಕ್ಕೂ ಬಾರದೆ ಸೈಲೆಂಟ್ ಆಗಿದ್ದ ಉತ್ತರ ಕನ್ನಡ (Uttara Kannada) ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegde), ಲೋಕಸಭೆ ಚುನಾವಣೆಗೆ (Lok Sabha Election) ಕೆಲವೇ ತಿಂಗಳು ಬಾಕಿ ಇರುವಂತೆ ಮತ್ತೆ ಆಕ್ಟಿವ್ ಆಗಿದ್ದರು. ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದು ಆರಂಭಿಸಿದ್ದ ಅನಂತಕುಮಾರ್ ಹೆಗಡೆ ಇದೀಗ ಮತ್ತೆ ಯಾರ ಸಂಪರ್ಕಕ್ಕೂ ಸಿಗದೆ ಮನೆ ಸೇರಿದ್ದಾರೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಅನಂತಕುಮಾರ್ ಹೆಗಡೆ, ವಿವಾದಾತ್ಮಕ ಹೇಳಿಕೆಗಳ ಮೂಲಕ ಕಾರ್ಯಕರ್ತರನ್ನು ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕರ್ನಾಟಕದಿಂದ ಯಾರ ಹೆಸರು ಕೂಡ ಘೋಷಣೆ ಆಗಿರಲಿಲ್ಲ. ಯಾವಾಗ ಬಿಜೆಪಿ 2ನೇ ಪಟ್ಟಿ ಬಿಡುಗಡೆಯಾಯ್ತೋ ಅಂದಿನಿಂದ ಅನಂತಕುಮಾರ್ ಹೆಗಡೆ ಸೈಲೆಂಟ್ ಆಗಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ ಲೋಕಸಭೆ ಟಿಕೆಟ್‌ಗೆ ಭಾರಿ ಪೈಪೋಟಿ; ವಿಶ್ವೇಶ್ವರ ಹೆಗಡೆ ಕಾಗೇರಿ, ಅನಂತ್ ಕುಮಾರ್ ಹೆಗಡೆ ಜೊತೆ ನಾಯಕರ ಚರ್ಚೆ
ಹೌದು, ಈ ಬಾರಿ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ಕೈತಪ್ಪಲಿದೆ ಎಂದು ಹೇಳಲಾಗುತ್ತಿದೆ. ಹೀಗಿದ್ದರೂ ನಾಲ್ಕೂವರೆ ವರ್ಷಗಳ ನಂತರ ಸಾರ್ವಜನಿಕ ರಂಗಕ್ಕೆ ಎಂಟ್ರಿಕೊಟ್ಟ ಹೆಗಡೆ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದರು. ಇದೇ ವಿಶ್ವಾಸದಲ್ಲಿ ಕಾರ್ಯಕರ್ತರ ಸಭೆಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದರು. ಆದರೆ, ಎರಡನೇ ಪಟ್ಟಿಯಲ್ಲಿ ತನ್ನ ಹೆಸರು ಘೋಷಣೆ ಆಗದಿರುವುದನ್ನು ಕಂಡ ಹೆಗಡೆ, ಟಿಕೆಟ್ ಕೈ ತಪ್ಪುವ ಸಾಧ್ಯತೆ ಹಿನ್ನೆಲೆ ಮತ್ತೆ ಯಾರ ಕೈಗೂ ಸಿಗದೆ ಶಿರಸಿ ಪಟ್ಟಣದಲ್ಲಿರುವ ತನ್ನ ನಿವಾಸದಲ್ಲಿದಲ್ಲೇ ಕುಳಿತುಕೊಂಡಿದ್ದಾರೆ.
ಶಿರಸಿಯಲ್ಲಿದ್ದರೂ ಯಾವೊಬ್ಬ ಕಾರ್ಯಕರ್ತನನ್ನೂ ಹೆಗಡೆ ಭೇಟಿ ಆಗುತ್ತಿಲ್ಲ. ಮತ್ತೊಮ್ಮೆ ಮೋದಿ ಘೋಷಣೆಯಡಿ ಪ್ರಚಾರ ಆರಂಭಿಸಿದ್ದ ಹೆಗಡೆ, 2ನೇ ಪಟ್ಟಿ ಬಿಡುಗಡೆ ಬಳಿಕ ಒಂದೇ ಒಂದು ಸಭೆಯನ್ನೂ ಮಾಡಿಲ್ಲ.
ಯಾರೇ ನಿಂತ್ರೂ ಎಲ್ರೂ ಒಗ್ಗಟ್ಟಾಗಿ ಮತ್ತೆ ಮೋದಿಯನ್ನ ಪ್ರಧಾನಿ ಮಾಡಬೇಕು. ಈಗ ನಾವು ಯಾವುದೇ ಕಾರಣಕ್ಕೂ ವಿರಮಿಸಬಾರದೆಂದು ಕಾರ್ಯಕರ್ತರಿಗೆ ಹೇಳಿದ್ದ ಅನಂತಕುಮಾರ್ ಹೆಗಡೆಯೇ ಇದೀಗ ಕಾರ್ಯಕರ್ತರ ಸಂಪರ್ಕಕ್ಕೆ ಸಿಗದೆ ಮನೆಯಲ್ಲೇ ವಿರಮಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ